Advertisement

ಸಾಮಾಜಿಕ ಸ್ಪಂದನೆಗೆ ಹೆಚ್ಚು ಒತ್ತು ನೀಡಲಿ: ಎಂ. ಕೃಷ್ಣ ಎನ್‌. ಶೆಟ್ಟಿ

07:41 PM Oct 20, 2020 | Suhan S |

ಮುಂಬಯಿ, ಅ. 19: ಚಾರ್‌ಕೋಪ್‌ ಕನ್ನಡಿಗರ ಬಳಗದ 21ನೇ ವಾರ್ಷಿಕ ಶ್ರೀ ಶಾರದಾ ಮಹಾಪೂಜೆ ಅ. 18ರಂದು ಚಾರ್‌ಕೋಪ್‌ ಕಾಂದಿವಲಿಯ ಸೆಕ್ಟರ್‌-2ರಲ್ಲಿರುವ ವಿಜಯ ಕೋ-ಆಪರೇಟಿವ್‌ ಹೌಸಿಂಗ್‌ ಸೊಸೈಟಿಯ ಚಾರ್‌ಕೋಪ್‌ ಕನ್ನಡ ಭವನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಸ್ಥಳೀಯ ಪುರೋಹಿತ ನಾಗೇಶ್‌ ಭಟ್‌ ಪೌರೋಹಿತ್ಯದಲ್ಲಿ ಮಂಡಲ ಕಲಶ ನಡೆಯಿತು. ಬಳಿಕ ಪುಷ್ಪಾಲಂಕೃತಗೊಂಡ ಮಂಟಪದಲ್ಲಿ ಶಾರದಾ ಮಾತೆಯ ಪ್ರತಿಬಿಂಬಕ್ಕೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆದು ಮಹಾಮಂಗಳಾರತಿ ನೆರವೇರಿತು. ವಿವಿಧ ಪೂಜೆಗಳ ನೇತೃತ್ವವನ್ನು ಬಳಗದ ವಿಶ್ವಸ್ಥ ಜಯ ಸಿ. ಶೆಟ್ಟಿ ದಂಪತಿ ವಹಿಸಿದ್ದರು. ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ನಾಗೇಶ್‌ ಭಟ್‌ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಚಾರ್‌ಕೋಪ್‌ ಕನ್ನಡಿಗರ ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್‌. ಶೆಟ್ಟಿ  ಮಾತನಾಡಿ, ಬಳಗವು ಸಾಮಾಜಿಕ, ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳೊಂದಿಗೆ ಜನಸ್ಪಂದನೆಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಕೋವಿಡ್ ಸೋಂಕಿಗೆ ತುತ್ತಾದ ಜನರಿಗೆ ಸೂಕ್ತ ಸಮಯದಲ್ಲಿ ಸಹಾಯಹಸ್ತ ನೀಡುವ ಯೋಜನೆಗಳನ್ನು  ರೂಪಿಸಬೇಕಾಗಿದೆ. ನವರಾತ್ರಿಯ ಪರ್ವ ಕಾಲದಲ್ಲಿ ಶಾರದಾಂಬೆಯನ್ನು ಆರಾಧಿಸುವ ಮೂಲಕ ಮತ್ತೂಮ್ಮೆ ಬಳಗದ ಎಲ್ಲ ಸದಸ್ಯರೂ ಒಂದಾಗಿದ್ದೇವೆ. ಸದಸ್ಯರು ಸಮಸ್ಯೆಯ ಕಾಲಘಟ್ಟದಲ್ಲಿ ತಮ್ಮ ಆರೋಗ್ಯದತ್ತ ಹೆಚ್ಚಿನ ಗಮನ ನೀಡಬೇಕು ಎಂದರು.

ಸಂಸ್ಥೆಯ ಹಿರಿಯ ವಿಶ್ವಸ್ಥ ಎಂ. ಎಸ್‌. ರಾವ್‌ ಮಾತನಾಡಿ, ಕಳೆದ ಆರೇಳು ತಿಂಗಳು ಕೊರೊನಾ ಮಹಾಮಾರಿ ಜನರ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ. ನಮ್ಮ ಆರಾಧ್ಯ ದೇವರಾದ ಶಾರದೆಯ ಅನುಗ್ರಹದಿಂದ ಬಳಗದ ಸರ್ವಸದಸ್ಯರು ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದಾರೆ. ಭವಿಷ್ಯದಲ್ಲೂ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಹಾರೈಸಿದರು.

ಇನ್ನೋರ್ವ ವಿಶ್ವಸ್ಥ ಭಾಸ್ಕರ್‌ ಸರಪಾಡಿ ಮಾತನಾಡಿ, ಚಾರ್‌ಕೋಪ್‌ ಪರಿಸರದಲ್ಲಿ ಸದಾ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಜನಮನ್ನಣೆ ಪಡೆದ ಸಂಸ್ಥೆಗೆ ಸ್ಥಳೀಯ ಉದಾರ ದಾನಿಗಳ ಸಹಾಯ, ಸಹಕಾರವನ್ನು ಮರೆಯುವಂತಿಲ್ಲ. ಶ್ರೀ ಶಾರದಾ ಮಾತೆಯು ಅವರಿಗೆ ಉದ್ಯೋಗ, ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದರು.

Advertisement

ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ್‌ ಎನ್‌. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಬಳಗದ ಉಪಾಧ್ಯಕ್ಷರಾದ ಚಂದ್ರಶೇಖರ್‌ ಎಸ್‌. ಶೆಟ್ಟಿ, ಕೃಷ್ಣ ಅಮೀನ್‌, ಪೂಜ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಚೇವಾರ್‌, ಗೌರವ ಕೋಶಾಧಿಕಾರಿ ಗೌರಿ ಪಣಿಯಾಡಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ, ಶಾಂತಾ ಎಂ. ಭಟ್‌, ಎಂ. ಜಿ. ಭಟ್‌, ಜತೆ ಕೋಶಾಧಿಕಾರಿ ರಮೇಶ್‌ ಕೋಟ್ಯಾನ್‌, ಜತೆ ಕಾರ್ಯದರ್ಶಿ ವಸಂತಿ ಯು. ಸಾಲ್ಯಾನ್‌, ವಿಜಯ ಡಿ. ಪೂಜಾರಿ, ರಮೇಶ್‌ ಬಂಗೇರ, ಸುಂದರ ಪೂಜಾರಿ, ಸಂತೋಷ್‌ ಭಟ್‌ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಬಳಗದ ವಾರ್ಷಿಕೋತ್ಸವ ಸಮಿತಿ, ಪೂಜ ಸಮಿತಿ, ಸಲಹೆಗಾರರು, ಮಹಿಳಾ ವಿಭಾಗ, ಯುವ ವಿಭಾಗ ಇನ್ನಿತರ ಉಪಸಮಿತಿಗಳ ಸರ್ವಸದಸ್ಯರು ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಇತ್ತೀಚೆಗೆ ನಿಧನ ಹೊಂದಿದ ಬಳಗದ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರ ಪತ್ನಿ ಹೇಮಲತಾ ಶೆಟ್ಟಿ, ಹಿರಿಯ ರಂಗಕರ್ಮಿ ಬಿ. ಬಾಲಚಂದ್ರ ರಾವ್‌ ಅವರಿಗೆ ಬಳಗದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೋವಿಡ್ ಲಾಕ್‌ಡೌನ್‌ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಳಗವು ಕಳೆದ ಹಲವಾರು ವರ್ಷಗಳಿಂದ ನವರಾತ್ರಿಯ ಶುಭಾವಸರದಲ್ಲಿ ಆರಾಧ್ಯ ದೇವತೆ ಶಾರದೆಯನ್ನು ಆರಾಧಿಸುತ್ತಾ ಬಂದಿದ್ದು, ಚಾರ್‌ಕೋಪ್‌ ಪರಿಸರದಲ್ಲಿ ಪ್ರತೀ ವರ್ಷವೂ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಂಸ್ಥೆಯ ಬೆಳವಣಿಗೆಗೆ ಮಹಾನಗರದ ಹೊಟೇಲ್‌ ಉದ್ಯಮಿಗಳೇ ಪ್ರಮುಖ ಕಾರಣಕರ್ತರಾಗಿದ್ದಾರೆ. ಪ್ರಸ್ತುತ ಹೊಟೇಲ್‌ ಉದ್ಯಮ ಸಂಕಷ್ಟಕ್ಕೊಳಗಾಗಿದ್ದು, ಶ್ರೀದೇವಿಯ ಅನುಗ್ರಹದಿಂದ ಎಲ್ಲರಿಗೂ ಒಳ್ಳೆಯದಾಗಲಿ. ಈ ಸಂಕಷ್ಟದಿಂದ ಶೀಘ್ರದಲ್ಲೇ ಎಲ್ಲರು ಹೊರಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. –ರಘುನಾಥ ಎನ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ, ಚಾರ್‌ಕೋಪ್‌ ಕನ್ನಡಿಗರ ಬಳಗ

 

ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next