ದೇವನಹಳ್ಳಿ: ಯಾವುದೇ ಸಂಘಟನೆ ಬಲಿಷ್ಠ ಮತ್ತು ಶಕ್ತಿಯುತವಾಗಿ ಬೆಳೆಯಬೇಕಾದರೆ ಒಗ್ಗಟ್ಟು ಮತ್ತು ಸಿದ್ಧಾಂತಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. 1924ರಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಹುಟ್ಟು ಹಾಕಿದ ಸಂಘಟನೆ ಇದಾಗಿದ್ದು, ಸಂಘಟನೆಯನ್ನು ಪ್ರತಿಯೊಬ್ಬರೂ ಉತ್ತಮವಾಗಿ ನಡೆಸಿಕೊಂಡು ಹೋಗಬೇಕು ಎಂದು ಕರ್ನಾಟಕ ಸಮತಾ ಸೈನಿಕದಳ ಸಂಘಟನೆಯ ರಾಜ್ಯಾಧ್ಯಕ್ಷ ಬಿ. ಚನ್ನಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಸಂಘಟನೆಯಿಂದ ಆಯೋಜಿಸಿದ್ದ ದೇವನಹಳ್ಳಿ ತಾಲೂಕು ಸಂಘದ ನೂತನ ಶಾಖೆಯ ಪದಾಧಿಕಾರಿಗಳ ಆಯ್ಕೆ ಮತ್ತು ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ದೇಶದ ಪ್ರಗತಿ ಬಾಬಾ ಸಾಹೇಬರು ರಚಿಸಿರುವ ಸಂವಿಧಾನದ
ಅಡಿಯಲ್ಲಿ ಸಾಗುತ್ತಿದೆ ಎಂದರು.
ಪ್ರತಿಯೊಬ್ಬರೂ ಸಂಘಟಿತರಾಗಿ: ಸಂವಿಧಾನವನ್ನು ರಚಿಸುವ ಸಂದರ್ಭದಲ್ಲಿ ಅವರಿಗಾದ ಹಲವು ಅನುಭವ, ಸಾಕಷ್ಟು ಯುವ ಪೀಳಿಗೆಗೆ ಮಾರ್ಗದರ್ಶನ ಆಗಿ ದೆ. ಪ್ರತಿಯೊಬ್ಬರೂ ಸಂಘಟಿತರಾಗಬೇಕು. ಸಂವಿಧಾನದ ಆಶಯಗಳನ್ನು ಜೀವಂತಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ತಪ್ಪದೇ ಒಂದೇ ಕುಟುಂಬದ ಸದಸ್ಯರಂತೆ ನಡೆಸಿಕೊಂಡು ಹೋಗಬೇಕು ಎಂದರು.
ಅನ್ಯಾಯವನ್ನು ಖಂಡಿಸಿ: ಅಂಬೇಡ್ಕರ್ ಅವರು ಹೇಳಿರುವ ಹಾಗೆ ರಥವನ್ನು ಎಳೆಯಬೇಕೆ ವಿನಃ ಹಿಂದೆ ಹೋಗಲು ಬಿಡಬಾರದು. ಸಂವಿಧಾನವನ್ನು ಗಟ್ಟಿಯಾಗಿ ಹಿಡಿದುಕೊಂಡು ಮುನ್ನುಗ್ಗಬೇಕು. ಅನ್ಯಾಯವನ್ನು ಖಂಡಿಸಿ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ಈಗಿನಿಂದಲೇ ಮಾಡುವಂತೆ ಆಗಬೇಕು. ಸಂಘಟನೆಯ ರಥವನ್ನು ಒಗ್ಗೂಡಿ ಎಳೆಯುವಂತಾಗಬೇಕು ಎಂದರು. ತಾಲೂಕು ಅಧ್ಯಕ್ಷ ಕೆಂಪಣ್ಣ, ಜಿಲ್ಲಾ ಮಹಿಳಾ ಅಧ್ಯಕ್ಷೆ ರವಿಕಲಾ, ಅಧ್ಯಕ್ಷ ಲಗುಮಯ್ಯ, ಗೌರವಾಧ್ಯಕ್ಷ
ವೆಂಕಟಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಡಿ.ಯು. ಮುನಿಕೃಷ್ಣಪ್ಪ, ಸದಸ್ಯ ಮುನಿಕೃಷ್ಣ, ವೆಂಕಟೇಶ್, ಶ್ರೀನಿವಾಸ್, ಸುಬ್ರಮಣಿ, ಶಿವರಾಜ್, ನೇತ್ರಾವತಿ ಹಾಗೂ ಮತ್ತಿತರರು ಇದ್ದರು.