ಲೋಕದಲಿ, ರೆಕ್ಕೆ ಮೂಡುವುದೆನಗೆ! ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ..! ಎಂದು ರಾಷ್ಟ್ರಕವಿ ಕುವೆಂಪು ಅವರು ಕರೆಯುವ ಹಾಗೆ ಮುಂಜಾನೆ ಸೂರ್ಯ ಅದಾಗಲೇ ತನ್ನ ನಸು ಬೆಳಕನ್ನು ಬೀರಲು ತಯಾರಾಗುತ್ತಿದ್ದಂತೆಯೇ ಕೌಸಲ್ಯಾ ಸುಪ್ರಜಾ ರಾಮ.. ಸುಪ್ರಭಾತ ಒಂದು ಕಡೆ ಮೊಳಗತೊಡಗಿದರೆ, ಮತ್ತೂಂದು ಕಡೆ ಹಕ್ಕಿಗಳ ಚಿಲಿಪಿಲಿ, ಕಲರವದ ಸದ್ದು ಸರ್ವೇ ಸಾಮಾನ್ಯವಾಗಿತ್ತು.ಅಂದರೆ ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆ ಗಳಲ್ಲಿ ಬೆಳಗ್ಗಿನ ಅಲಾರ್ಮ್ ಎಂದರೆ ಹಕ್ಕಿಗಳ ಚಿಲಿಪಿಲಿ. ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ ಸುಪ್ರಭಾತ ಹಾಡುವುದು ಇವುಗಳ ದಿನಚರಿಯ ಮೊದಲ ಕೆಲಸ!
ಹಿಂದೆ ನಾವು ಸಣ್ಣವರಿದ್ದಾಗ ಮನೆಯ ಮಾಡಿನ ಸಂದುಗಳಲ್ಲಿ, ಚಾವಡಿಯ ಎಡೆಯಲ್ಲಿ ಗೂಡು ಕಟ್ಟಿ ಕುಳಿತುಕೊಳ್ಳುತಿದ್ದ ಈ ಪಕ್ಷಿಗಳು,ತನ್ನಷ್ಟಕ್ಕೇ ಅಲ್ಲಿಗೆ ಬಂದು ವಾಸ್ತವ್ಯ ಮಾಡುವುದು ವಾಡಿಕೆ.ಅದರಲ್ಲೂ ಗುಬ್ಬಿಗಳು ಮನೆಯ ಮಕ್ಕಳಂತೆ ಆಗಿದ್ದವು. ಅದು ಮನೆಯ ಪ್ರತಿಷ್ಟೆಯೂ ಆಗಿತ್ತು. ಅವು ಮನೆಯವರು ಏನಾ ದರೂ ಸುದ್ದಿ ಮಾತಾಡುವಾಗ ಚಿಂವ್ ಗುಟ್ಟುತ್ತಾ ಇರುತ್ತಿದ್ದವು. ಕೆಲವು ಮಾತುಗಳು ಆಡುವಾಗ ಅವು ಚಿಂವ್ ಗುಟ್ಟಿದರೆ ಸತ್ಯವಂತೆ ಶಕುನನುಡಿಯಿತು ಗುಬ್ಬಿ ಎಂದು ಹೇಳುವ ಮಾತಿತ್ತು.
ಇನ್ನು ಹೆಣ್ಣು ಹಕ್ಕಿಯ ಗರ್ಭದಲ್ಲಿ ಪುಟ್ಟದೊಂದು ಹಕ್ಕಿ ಬೆಳೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಅವುಗಳ ತಯಾರಿ ಶುರು. ಗಂಡು ಹಕ್ಕಿಗಂತೂ ಆಗ ಎಲ್ಲಿಲ್ಲದ ಕೆಲಸ. ಒಂದೊಂದೇ ಹುಲ್ಲುಕಡ್ಡಿಗಳನ್ನು ಆರಿಸಿ ತಂದು ಗೂಡನ್ನು ಜೋಪಾನ ಮಾಡುವುದೇನು.., ಕಾಳು ಕಡ್ಡಿ ಸಂಗ್ರಹಿಸುವುದೇನು..! ಆ ಸಂಭ್ರಮ ಅವಕ್ಕೇ ಗೊತ್ತು! ಮೊಟ್ಟೆಗೆ ಸರದಿಯಂತೆ ಕಾವುಕೊಡುವ ಜೋಡಿ!
ಮನೆಯೊಡತಿ ಅಕ್ಕರೆಯಿಂದ ಹಾಕಿದ ಅಕ್ಕಿ ಕಾಳುಗಳನ್ನೆಲ್ಲ ತನ್ನ ಪುಟ್ಟ ಕೊಕ್ಕಲ್ಲಿ ಆರಿಸಿಕೊಂಡು, ಗೂಡಲ್ಲಿ ರಚ್ಚೆಹಿಡಿದ ಮರಿಗಳ ಬಾಯಿಗೆ ಗುಟುಕಿಡುವ ಪರಿ… ಆಹಾ! ಅದನ್ನು ನೋಡಿಯೇ ಆನಂದಿಸಬೇಕು. ಆದರೆ… ಆ ಮಧುರ ಕ್ಷಣಗಳು ಇನ್ನು ಮರೀಚಿಕೆ ಮಾತ್ರವಾ…? ಮನುಷ್ಯನ ಸಹವಾಸದಲ್ಲೇ ಬದುಕುತ್ತಿದ್ದ ಮನೆಗುಬ್ಬಿಗಳು ಈ ಮನುಷ್ಯರ ಸಹವಾಸವೇ ಸಾಕು ಎಂದು ಹಳ್ಳಿಮನೆ ಬಿಟ್ಟು ಪಟ್ಟಣ ಸೇರಿದ್ದಾವಾ..? ಹಾಗೇನೂ ಇಲ್ಲ ಎಂದಾದರೆ ಇದ್ದ ಹಕ್ಕಿಗಳೆಲ್ಲ ಎಲ್ಲಿ ಹೋದವು? ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಏನಿಲ್ಲವೆಂದರೆ ಕನಿಷ್ಠ 10-15 ಸಂಖ್ಯೆಯಲ್ಲಿರುತ್ತಿದ್ದ ಹಕ್ಕಿ ಮಾಯವಾಗಿದ್ದೇಕೆ?
ಮರಗಳ ಜಾಗದಲ್ಲಿ ಕಟ್ಟಡಗಳು ಬಂದಿವೆ. ಕೆರೆಗಳು ಕರಗಿ, ರಸ್ತೆ-ನಿವೇಶನಗಳಾಗಿವೆ. ನೀರಿಗೇ ಬೆಂಕಿ ಹೊತ್ತಿಕೊಳ್ಳುತ್ತಿದೆ. ಗಾಳಿ ವಿಷವಾಗುತ್ತಿದೆ.ಮಳೆಗಾಲದಲ್ಲಿ ಬೇಸಗೆ ಇರುತ್ತದೆ. ಚಳಿಗಾಲದಲ್ಲಿ ಮಳೆ ಬರುತ್ತದೆ. ಇನ್ನು ಹೀಗೆ ಋತುಮಾನಗಳಲ್ಲಿ ಏರುಪೇರು ಆಗುತ್ತಲೇ ಇದೆ. ವಾತಾವರಣದ ವ್ಯತ್ಯಾಸದಿಂದ ಕೆಲವು ವಲಸೆ ಹೋಗುತ್ತಿವೆ. ಪ್ರತಿ ಋತುವಿನಲ್ಲಿ ವಲಸೆ ಬರುವ ಪಕ್ಷಿಗಳು ದೂರದಿಂದಲೇ ಊರಿಗೆ ಬೈ-ಬೈ ಹೇಳುತ್ತಿವೆ. ಗೂಡು ಕಟ್ಟಿಕೊಳ್ಳಲು ಸ್ಥಳಾವಕಾಶವಿಲ್ಲದೇ ಸಣ್ಣ ಪಕ್ಷಿಯನ್ನು ನಾವೇ ಹೊರದಬ್ಬಿದಂತಾಗುತ್ತಿದೆ.
ಈಗಿನ ಆಧುನಿಕ ಮನೆಗಳಿಂದಾಗಿ, ಜತೆಗೆ ಅಂಗಳದಲ್ಲಿ ಒಂದೂ ಗಿಡ ನೆಡುವಷ್ಟು ಜಾಗ ಉಳಿಸಿಕೊಳ್ಳದೇ ಕಾಂಕ್ರೀಟ್ ಮನೆ ಕಟ್ಟಿರುವುದು, ಕೊನೆಪಕ್ಷ ಹೂವಿನ ಗಿಡಗಳಿವೆ ಎಂದಾದರೆ ಹೂವಿನ ಅಂದ ಅರಳಿಸಲು ತರಹೇವಾರಿ ಕ್ರಿಮಿನಾಶಕ ಸಿಂಪಡಿಸಿ, ಸುಂದರಗೊಳಿಸುವಂತೆ ಮಾತ್ರ ಮಾಡುತ್ತೇವೆ. ಆದರೆ ಗಿಡ, ಬಳ್ಳಿಗಳನ್ನು ಆಶ್ರಯಿಸಿ ಬದುಕುವ ಕ್ರಿಮಿ, ಕೀಟಗಳನ್ನು ತಿನ್ನುವ, ಕಾಳುಗಳನ್ನು ನೆಚ್ಚಿಕೊಂಡು ಬದುಕುವ ಹಕ್ಕಿಗಳ ಬದುಕಿಗೇ, ವಂಶಾಭಿವೃದ್ಧಿಗೆ ಸಂಚಕಾರ ತಂದಿದ್ದೇವೆ.
ಮೊಬೈಲ್ ಟವರ್‌ಗಳಿಂದ ಹೊರ ಬರುವ ತರಂಗಗಳು, ಅಲ್ಪ ಪ್ರಮಾಣದ ವಿಕಿರಣ ಸೋರಿಕೆ ಗುಬ್ಬಚ್ಚಿ ಮೊಟ್ಟೆಗಳಲ್ಲಿ ಜೀವ ವಿರೂಪುಗೊಳ್ಳದಂತೆ ಮಾಡುತ್ತಿವೆ ಎನ್ನಲಾಗಿದೆ. ಅಲ್ಲದೇ ಗಿಡ ಮರಗಳಲ್ಲಿ ಕೇಬಲ್ ವೈರುಗಳು, ಜಾಹೀರಾತುಗಳು, ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಹೆಚ್ಚಿನ ಗಾಜುಗಳ ಬಳಕೆ ಅವುಗಳ ಸ್ವತ್ಛಂದ ಬದುಕಿಗೆ ಮಾರಕವಾಗಿವೆ. ಅವುಗಳ ಬದುಕಿಗೆ ನಮ್ಮ ಆಸರೆ ಅನಿವಾರ್ಯ.
ನಿಸರ್ಗದ ಸಣ್ಣಪುಟ್ಟ ಜೀವಿಗಳೂ ನಮ್ಮ ಬದುಕನ್ನು ಸುಂದರವಾಗಿಸಿವೆ. ನಿಸರ್ಗದ ಪ್ರತಿ ವಸ್ತುವನ್ನೂ, ಜೀವಿಯನ್ನೂ ರಕ್ಷಿಸುವುದು ನಮ್ಮ ಕರ್ತವ್ಯ. ಮನೆಯಂಗಳದಲ್ಲಿ ಹೂದೋಟ, ಪುಟ್ಟ ಪೊದೆಕಾಡು ಬೆಳೆಸೋಣ. ಹಣ್ಣಿನ ಮರ. ನೀರಿನ ತೊಟ್ಟಿ ನಿರ್ಮಿಸೋಣ, ಪಕ್ಷಿಗಳಿಗೆ ಇಂಥ ಪರಿಸರ ಅಚ್ಚುಮೆಚ್ಚು.
ಮನೆ ಮುಂದೆ, ಹಿತ್ತಲಲ್ಲಿ ಎಲ್ಲಿ ಸಾಧ್ಯವೋ ಅದೆಲ್ಲ ಹಕ್ಕಿಗಳ ಸಲುವಾಗಿ ನೀರುಣಿಕೆ, ಮೇವುಣಿಕೆಗಳನ್ನಿಡೋಣ. ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ.
-ಮಿಥುನಾ ಪ್ರಭು
ಕುಂಭಾಶಿ