ಭಾರತವು ಬಹು ಸಂಸ್ಕೃತಿಯ ದೇಶವಾಗಿದೆ. ಇದು ಇಲ್ಲಿರುವ ಆಟೋಟಗಳಿಗೆ ಹೊರತಾಗಿಲ್ಲ. ನಮ್ಮಲ್ಲಿರುವ ವಿವಿಧ ಆಟೋಟಗಳು ಸಾಂಪ್ರದಾಯಿಕವಾಗಿ ಬಂದವುಗಳಾಗಿವೆ. ಕೆಲವು ಆಟೋಟಗಳ ಅಸ್ತಿತ್ವವನ್ನು ಪುರಾತನ ಗ್ರಂಥಗಳಲ್ಲೂ ಕಾಣಬಹುದು. ಪ್ರತಿಯೊಂದು ಆಟಕ್ಕೂ ತನ್ನದೇ ಆದ ಚೌಕಟ್ಟುಗಳಿದ್ದು, ನಿರ್ದಿಷ್ಟ ಋತುಗಳಲ್ಲಿ ಕೆಲವೊಂದು ಆಟಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ, ಅಂತಹದರಲ್ಲಿ ಒಂದು “ಮಂಜುಟ್ಟಿ ಕಾಯಿ ಆಟ’. ಈ ಆಟವನ್ನು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಆಷಾಢ ಮಾಸದಲ್ಲಿ ಹೆಚ್ಚಾಗಿ ಆಡುವುದನ್ನು ಕಾಣಬಹುದು.
ಭಾರತದ ಪುರಾತನ ಆಟಗಳಲ್ಲಿ ಪಗಡೆ ಮತ್ತು ಹಾವು ಏಣಿ ಆಟವೂ ಒಂದಾಗಿವೆ. ಇದು ಬಹುತೇಕ ಎಲ್ಲರ ಬಾಲ್ಯದ ಆಟಗಳಲ್ಲಿ ಒಂದಾಗಿದ್ದು, ಇದರೊಂದಿಗೆ ಪ್ರತಿಯೊಬ್ಬರಿಗೂ ಸವಿ ನೆನಪುಗಳು ಇದ್ದೇ ಇರುತ್ತದೆ. ಮಕ್ಕಳು ಮಧ್ಯದಲ್ಲಿ ಮಳೆಗಾಲದ ಸಮಯದಲ್ಲಿ ಈ ಆಟ ಹೆಚ್ಚು ಪ್ರಸ್ತುತವಾಗಿದೆ.
ಹಾವು ಏಣಿ ಆಟದಲ್ಲಿ ಜೀವನಕ್ಕೆ ಬೇಕಾದ ಮೌಲ್ಯಗಳಿರುವುದನ್ನು ನಾವು ಕಾಣಬಹುದು. ಈ ಆಟದಲ್ಲಿ ಅಂಕಿಗಳ ಮೂಲಕ ಆಡುವ ಸಂದರ್ಭದಲ್ಲಿ ಮಧ್ಯದಲ್ಲಿ ಬರುವ ಹಾವುಗಳು ನಮ್ಮ ಜೀವನ ಕರ್ಮ(ಕೆಲಸ)ದ ಬಗ್ಗೆ ತಿಳಿಸುತ್ತದೆ. ಹಾವುಗಳು ಇಲ್ಲದ ಅಂಕಿಗಳನ್ನು ದೇವತೆಗಳು ಎಂದು ಹೇಳುತ್ತಾರೆ. ಈ ಅಂಕಿ ಸಂಖ್ಯೆಯ ಆಟದಲ್ಲಿ 100 ಸಂಖ್ಯೆಯು ಮೋಕ್ಷ ಆಗಿದ್ದು, ಇದು ನಮ್ಮ ಪೂರ್ವಜರು ಆಡುತ್ತಿದ್ದಂತಹ ರೀತಿಯಾಗಿತ್ತು.
ಪ್ರಸ್ತುತ ತಂತ್ರಜ್ಞಾನದ ಯುಗದಲ್ಲಿ ಈ ಪುರಾತನ ಆಟಗಳ ಸ್ವಾದ ಕಡಿಮೆಯಾಗಿದೆ. ಸದ್ಯ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದ್ದು, ಹೆಚ್ಚಿನ ಸಮಯವನ್ನು ಇದರಲ್ಲೇ ಕಳೆಯುತ್ತಿದ್ದೇವೆ. ಇಂತಹ ಮನೋರಂಜನ ಆಟವನ್ನೂ ಮೊಬೈಲ್‌ನಲ್ಲೇ ಆಡುತ್ತಿರುವುದು ವಿಪರ್ಯಾಸ. ಇದರೊಂದಿಗೆ ಈ ಆಟಗಳನ್ನು ಹಣ ಗಳಿಕೆಯ ಉದೇಶದಿಂದ ಆಡುತ್ತಿರುವುದು ಆಘಾತಕಾರಿ. ಮನೋರಂಜನೆಗೆ ಸೀಮಿತವಾಗಿರಬೇಕಿದ್ದ ಆಟಕ್ಕೆ ಆರ್ಥಿಕ ಬಣ್ಣ ಬಳಿಯುತ್ತಿರುವುದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ ಅನೇಕರನ್ನು ನಾವು ಕಾಣಬಹುದು. ಹಣದ ಆಸೆಗೆ ಬಲಿಯಾಗುವ ರೀತಿಯಲ್ಲಿ ಜಾಹೀರಾತುಗಳನ್ನು ತೋರಿಸಿ ಯುವಜನತೆಯನ್ನು ಮರಳುಮಾಡುತ್ತಿರುವುದು ಶೋಚನೀಯ ಸಂಗತಿ. ಇಂತಹ ಆಟಗಳು ಜನತೆಯನ್ನು ಜೂಜುಕೋರರನ್ನಾಗಿಸುತ್ತಿದೆ.
ಯುವ ಜನತೆ ದೇಶದ ಆಸ್ತಿ. ದೇಶವನ್ನು ಜೂಜಿನಿಂದ ಮುಕ್ತಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಇನ್ನಾದರೂ ಈ ಕುರಿತು ಎಚ್ಚರಿಕೆ ವಹಿಸುವಂತಾಗಲಿ. ಈ ರೀತಿಯ ಆಟಗಳು ಕೇವಲ ಮನೋರಂಜನೆಗಷ್ಟೇ ಸೀಮಿತವಾಗಲಿ.
ಅಜಿತ್ ನೆಲ್ಯಾಡಿ
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ, ಪುತ್ತೂರು