ನನಗೆ ಗೆಲುವನ್ನು ಕರುಣಿಸಿದ್ದು ನಿನ್ನ ಚೆಂದದ ನಗು. ನನ್ನೊಳಗಿನ ಕೋಪದ ಜಮದಗ್ನಿಯನ್ನು ತಣ್ಣಗಾಗಿಸಿದ್ದು ನಿನ್ನ ಹುಸಿ ಮೌನ. ನನ್ನ ಕಷ್ಟ-ನೋವು, ಚಿಂತೆ- ಆತಂಕಗಳಿಗೆ ಸಮಾಧಾನ ತಂದಿದ್ದು ನಿನ್ನ ಮಾತುಗಳು.
ಅಂದು ಮೊದಲ ಬಾರಿ ನೀನು ದಾರಿಯಲ್ಲಿ ಸಿಕ್ಕು, ತುಸು ನಕ್ಕು ಸಾಗಿದಾಗಲೇ ನನ್ನೊಳಗೊಬ್ಬ ಸಲೀಂ, ರೋಮಿಯೋ, ದೇವದಾಸನೆಂಬ ಅಮರ ಪ್ರೇಮಿ ಹುಟ್ಟಿದ್ದ. ಅಂದಿನಿಂದ ಅನಾರ್ಕಲಿಯನ್ನು ಅಣಕಿಸುವಂತೆ, ಜೂಲಿಯಟ್‌ಳನ್ನೇ ಜರಿಯುವಂತೆ, ಪಾರ್ವತಿಯೇ ಪರಿತಪಿಸುವಂತೆ ನಾನು ನಿನ್ನನ್ನು ಪ್ರೀತಿಸಲು ಶುರುವಿಟ್ಟುಕೊಂಡೆ. ಜಾತಿ-ಸಂಪ್ರದಾಯ, ಆಸ್ತಿ-ಅಂತಸ್ತುಗಳೆಂಬ ಕ್ಷುಲ್ಲಕತೆಗೆ ಬೆಲೆಕೊಡದೆ ಬೆಂಬಿಡದೆ ಕಾಡಿ ನಿನ್ನನ್ನು ಒಲಿಸಿಕೊಂಡೆ.
ಕೊಲ್ಲುವ ನಿನ್ನ ಕಣ್ಣೋಟ ನನ್ನೊಳಗಿನ ಕವಿಯನ್ನು ಬರೆಯಲು ಹಚ್ಚಿತ್ತು. ಬಳುಕುವ ನಿನ್ನ ನಡಿಗೆಯ ಗೆಜ್ಜೆಯ ದನಿಯು ನನ್ನಿಂದ ತಾಳ ಹಾಕಿಸುತ್ತಿತ್ತು. ಜಾರುವ ನಿನ್ನ ಮುಂಗುರುಳು ಮತ್ತೆ ಮತ್ತೆ ನನ್ನ ಕೆಣಕುತ್ತಿತ್ತು. ನಿನ್ನ ಆಕರ್ಷಕ ಮೈಮಾಟ ನನ್ನ ಕುಂಚಕೆ ಕೆಲಸ ನೀಡುತ್ತಿತ್ತು. ಹೊಗಳಿಕೆಗೆ ಅರಳುತ್ತಿದ್ದ ನಿನ್ನ ಕೆನ್ನೆಯ ರಂಗು ನಾನು ನಿಂತಲ್ಲೇ ನಲಿದಾಡಲು ಕಾರಣವಾಗುತ್ತಿತ್ತು. ಸೌಂದರ್ಯ ಸಿರಿಯ ಶಿಖರ ನೀನಾಗಿದ್ದರೂ, ರೂಢಿಸಿಕೊಂಡ ನಿನ್ನ ಸರಳತೆ ನನ್ನ ಹೃದಯವನ್ನೇ ಕದ್ದುಬಿಟ್ಟಿತ್ತು.
ಅಲ್ಲಿಂದ ಮುಂದೆ ದಿನಗಳನ್ನು ಕ್ಷಣಗಳಂತೆ ಉರುಳಿಸಿದ್ದು ನಿನ್ನ ಒಲವಿನ ಸಾಂಗತ್ಯ. ಪ್ರತಿ ಹೆಜ್ಜೆಯಲ್ಲಿಯೂ ನನಗೆ ಗೆಲುವನ್ನು ಕರುಣಿಸಿದ್ದು ನಿನ್ನ ಚೆಂದದ ನಗು. ನನ್ನೊಳಗಿನ ಕೋಪದ ಜಮದಗ್ನಿಯನ್ನು ತಣ್ಣಗಾಗಿಸಿದ್ದು ನಿನ್ನ ಹುಸಿ ಮೌನ. ನನ್ನ ಕಷ್ಟ-ನೋವು, ಚಿಂತೆ-ಆತಂಕಗಳಿಗೆ ಸಮಾಧಾನ ತಂದಿದ್ದು ನಿನ್ನ ಮಾತುಗಳು. ಭವಿಷ್ಯದ ಯೋಚನೆ-ಯೋಜನೆಗಳಿಗೆ ಭದ್ರ ಬುನಾದಿ ಹಾಕಿದ್ದು ಕೊನೆವರೆಗೂ ನನ್ನೊಂದಿಗಿರುತ್ತೇನೆ ಎಂದು ಹೇಳಿದ ನಿನ್ನ ಭರವಸೆ.
ಎರಡು ವರ್ಷವಾದರೂ ಒಮ್ಮೆಯೂ ನಮ್ಮಿಬ್ಬರ ಮಧ್ಯೆ ಉದ್ಭವಿಸದ ಭಿನ್ನಾಭಿಪ್ರಾಯಗಳಿಗೆ, ಕಾಡದ ಸಣ್ಣ-ಪುಟ್ಟ ಮುನಿಸು, ಕೋಪ-ತಾಪಗಳಿಗೆ, ಬೇಡದ ಅತೀಯಾದ ನಿರೀಕ್ಷೆಗಳಿಗೆ, ನಮ್ಮನ್ನು ನೋಡಿ ಹೊಟ್ಟೆ ಉರಿದುಕೊಂಡು ಹುಳಿ ಹಿಂಡದ ಹಿತಶತ್ರುಗಳಿಗೆ, ನಾವಿಬ್ಬರೂ ಅನುರಾಗದ ಅಲೆಯಲ್ಲಿ ತೇಲುತ್ತಿರುವುದು ಗೊತ್ತಿದ್ದೂ ಇಲ್ಲದ್ದನ್ನು ಕಲ್ಪಿಸಿಕೊಂಡು ನಮ್ಮನ್ನಗಲಿಸುವ ಹುಚ್ಚು ಸಾಹಸಕ್ಕೆ ಕೈ ಹಾಕದ ನಮ್ಮಿಬ್ಬರ ಹೆತ್ತವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಮದ ಗುಂಗಿನಲ್ಲಿ ಹಾಳಾಗದ ನಮ್ಮ ವಿದ್ಯಾರ್ಥಿ ಜೀವನಕ್ಕೆ ಥ್ಯಾಂಕ್ಸ್ ಮತ್ತು ಥ್ಯಾಂಕ್ಸ್.
ಎಷ್ಟೊಂದು ಸುಂದರವಾಗಿದೆ ಈ ಬದುಕು? ಅದೇನು ಪುಣ್ಯ ಮಾಡಿದ್ದೆವೋ ನಾವಿಬ್ಬರೂ ಹೀಗಿರಲು. ಯಾವ ಜನ್ಮದ ಬಂಧವೋ ಏನೋ ನಾವು ಒಂದಾಗಿದ್ದೇವೆ. ನಗುನಗುತ ಸಾಗಿದ್ದೇವೆ. ಯಾರ ವಕ್ರದೃಷ್ಟಿಯೂ ನಮ್ಮ ಮೇಲೆ ಬೀಳದಿರಲಿ. ನಮ್ಮಿಬ್ಬರ ವಿಶಾಲ ಹೃದಯದ ಸ್ವತ್ಛಂದ ಬಯಲಿನಲ್ಲಿ ವಿಷಾದದ ಬಿರುಕು ಕಾಣದಿರಲಿ. ನೂರ್ಕಾಲ ನಾವು ಹೀಗೇ ಇರೋಣ. ನಮ್ಮದೇ ಪ್ರಪಂಚದಲ್ಲಿ ಸಣ್ಣದೊಂದು ಪ್ರೇಮಲೋಕ ಸೃಷ್ಟಿಸಿಕೊಂಡು ಸ್ವತಂತ್ರವಾಗಿ ಸ್ವೇಚ್ಛೆಯಿಂದ ಮನಸೋ ಇಚ್ಛೆ ತೇಲಾಡೋಣ. ಜೋಡಿ ಹಕ್ಕಿಗಳಾಗಿ ಹಾರಾಡೋಣ. ಏನಂತಿಯಾ?
ನಿನ್ನೊಲವಿನ ಆರಾಧಕ
ಅಶೋಕ ವಿ. ಬಳ್ಳಾರಿ