ಒಲೆ ಹೊತ್ತಿ ಉರಿದೊಡೆ ನಿಲ್ಲಬಹುದು. ಧರೆ ಹೊತ್ತಿ ಉರಿದೊಡೆ ನಿಲ್ಲಬಹುದೇ?ಎನ್ನುವ ಸೂಕ್ತಿಯಂತೆ ಇಂದು ನಾವು ಪ್ರಕೃತಿಯ ಭೀಭತ್ಸೆಗೆ ಭಯ ಪಟ್ಟು ಬದುಕಬೇಕಾದ ಪರಿಸ್ಥಿತಿ ಉಂಟಾಗಿದೆ.
ವಿಶ್ವವ್ಯಾಪಿ ತಾಂಡವವಾಡುತ್ತಿರುವ ಒಂದು ವೈರಸ್ ಎಲ್ಲರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವೈದ್ಯಕೀಯ, ಭದ್ರತೆ, ಶಿಕ್ಷಣ, ವ್ಯಾಪಾರ- ವಹಿವಾಟು, ಸಾರಿಗೆ, ಕೈಗಾರಿಕೆ, ಕೃಷಿ,ನೌಕರಿ, ಸ್ವಯಂ ಉದ್ಯೋಗ ಹೀಗೆ ಎಲ್ಲ ಕ್ಷೇತ್ರಗಳ ಮೇಲೂ ದೊಡ್ಡ ಹೊಡೆತವನ್ನೇ ನೀಡಿದೆ. ಹೆಮ್ಮಾರಿಯ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುವವರನ್ನು ಜೀವದ ಹಂಗು ತೊರೆದು ಉಳಿಸಲೆತ್ನಿಸಿದರೂ ಆಮ್ಲಜನಕದ ಕೊರತೆ ಸವಾಲೊಡ್ಡಿ ನಿಂತಿದೆ. ತಂತ್ರಜ್ಞಾನದ ಬಲೆಗೆ ಸಿಲುಕಿದ ನಾವು ಹಸುರ ಉಸಿರಿಗೆ ಕೊಡಲಿಯಿಟ್ಟು ಕಾಂಕ್ರೀಟ್ ಕಾಮಗಾರಿ ವೈಭವ ನೋಡಿ ಮೆರೆಯಲಾರಂಭಿಸಿದೆವು.
ಅಲ್ಲಲ್ಲಿ ತಲೆಯೆತ್ತಿ ನಿಂತ ದೊಡ್ಡ ದೊಡ್ಡ ಮಹಲುಗಳನ್ನು ನೋಡಿ ಆನಂದದಲ್ಲಿ ತೇಲುವಾಗ ಮುಂದೆ ಆಗುವ ಅಪಾಯದ ಅರಿವು ನಮಗಿರಲಿಲ್ಲ. ಆದರೆ ಇಂದು ಹೆಮ್ಮಾರಿಯ ಹುಟ್ಟಿಗೆ ಕಾರಣವೇ ನಾವೆಂಬ ಕಟುಸತ್ಯದ ಅರಿವಾಗಿ ಅಸಹಾಯಕರಾಗಿ ನಿಂತು ಬಿಟ್ಟಿದ್ದೇವೆ. ನಮ್ಮವರ ರಕ್ಷಣೆಗಾಗಿ ಆಮ್ಲಜನಕದ ಸಿಲಿಂಡರ್ ಗಳನ್ನು ಪೂರೈಸಲು ಅಂಗಲಾಚುತ್ತಿದ್ದೇವೆ.ಆದರೆ ವಿಪರ್ಯಾಸವೆಂಬಂತೆ ಆಮ್ಲಜನಕವೇ ಇಲ್ಲವೆಂದು ಓದಿ ಒದ್ದಾಡುವ ಸ್ಥಿತಿ ಯಾರ ಊಹೆಯಲ್ಲೂ ಇರಲೇ ಇಲ್ಲ.ಇಂದು ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಬದುಕುತ್ತಿರುವವರೇ ನಾವು. ಮನುಷ್ಯ ಪ್ರಕೃತಿಯ ಜತೆಗೆ ಬದುಕುತ್ತಿದ್ದರೆ ಇಂದು ಈ ಕೃತಕತೆಯ ಅಗತ್ಯವೇ ಬರುತ್ತಿರಲಿಲ್ಲ.
“ಪ್ರಕೃತಿ ಒಪ್ಪದ ಕಜ್ಜ ಮಾಡು ಜಗದಲಿ,ಕಾಣದ ಶಕ್ತಿಯು ತೀರಿಸುವುದು ಪ್ರತಿಕಾರವನು’ ಎನ್ನುವ ಹಿರಿಯರ ಮಾತು ಇಂದು ಸತ್ಯವಾಗಿ ತೋರಿದೆ. ನೀರಸವಾಗಿ ದಿನ ದೂಡುತ್ತಿದ್ದ ನಾವುಗಳು ಮಾಡಿದ ವಿಕೃತಿಗಳನ್ನು ನೆನಪಿಸಿಕೊಳ್ಳಲು ಪ್ರಕೃತಿ ನೀಡಿದ ಸಮಯವಿದು. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಅಪಾಯಕ್ಕೆ ನಾವೇ ಆಹ್ವಾನ ನೀಡಿದಂತಾಗುತ್ತದೆ. ನಮ್ಮ ಆರೋಗ್ಯವನ್ನು ನಮಗೆ ಕಾಪಾಡಿಕೊಳ್ಳಲಾಗದಿದ್ದರೆ ಎಷ್ಟೇ ಐಶಾರಾಮಗಳಿದ್ದರೂ ಶೂನ್ಯ. ಇಂದು ನಾವು ಪರಿಸರವನ್ನು ಹಾಳು ಮಾಡಿದ ಕೈಯಲ್ಲೇ ಮತ್ತೆ ಸರಿಮಾಡಲು ಹೊರಡಬೇಕಿದೆ. ಎದುರಾಗಿರುವ ಕಂಟಕವೇ ಕಲಿಕೆಗೆ ಕಾರಣವಾಗಿದೆ. ವಿಶ್ವ ಪರಿಸರ ದಿನ ,
ವನಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ನಾವುಗಳು ಕೇವಲ ತೋರಿಕೆಗಾಗಿ ಗಿಡ ನೆಟ್ಟು ,ಭಾಷಣ ಮಾಡಿದರೆ ಪ್ರಕೃತಿ ಸಂರಕ್ಷಣೆ ಅಸಾಧ್ಯ. ನಾಡನ್ನೇ ಬರಡು ಮಾಡಿ ಇಂದು ಪ್ರಾಣವಾಯುವಿಗಾಗಿ ಪರದಾಡುತ್ತಿರುವ ನಮಗೆ ಪ್ರಕೃತಿಯೇ ಬಹುದೊಡ್ಡ ಪಾಠ ಕಲಿಸಿದೆ. ಪ್ರಗತಿಯ ಹಾದಿಯೆಂದು ಮುಂದುವರಿದು ದುರ್ಗತಿ ತಂದುಕೊಂಡ ನಾವುಗಳೇ ಪರಿಸರದ ರಕ್ಷಣೆಗೆ ಪ್ರತಿಜ್ಞೆ ಮಾಡಬೇಕು. ನಿಸರ್ಗದೊಂದಿಗೆ ತಾಯಿ ಮಗುವಿನ ಸಂಬಂಧ ಬೆಳೆಸಿದಲ್ಲಿ ಪ್ರತೀ ಜೀವಸಂಕುಲವೂ ನೆಮ್ಮದಿಯಿಂದ ಉಸಿರಾಡಬಹುದು. ನಿಸರ್ಗವನ್ನು ಪ್ರೀತಿಸಿ,ಪೂಜಿಸಿ, ಸಂರಕ್ಷಿಸುವ ಕರ್ತವ್ಯ ನಮ್ಮೆಲ್ಲರದ್ದು.
ಅಖಿಲಾ ಶೆಟ್ಟಿ
ಫಿಲೋಮಿನಾ ಕಾಲೇಜು, ಪುತ್ತೂರು