ಮುಂಬಯಿ, ಅ.1: ನಾವು ಬದುಕುವ ಸಂಸ್ಕೃತಿಯೇ ತುಳುವಾಗಿದ್ದು ಇದು ತುಳುನಾಡು ಮಾತ್ರವಲ್ಲ, ಕರ್ನಾಟಕ ರಾಜ್ಯ ಸೇರಿದಂತೆ ಸಮಗ್ರವಾಗಿ ಬೆಳೆಯಬೇಕು. ತುಳು ಭಾಷೆ ಸಾಮರಸ್ಯದ ದ್ಯೋತಕ ವಾಗಿದೆ. ತುಳು ಭಾಷೆಗೆ ಜಾತಿ,ಮತ, ಧರ್ಮ, ಜನಾಂಗದ ಪರಿಧಿಯಿಲ್ಲ. ಆದ್ದರಿಂದ ಪ್ರಾಚೀನ ಇತಿಹಾಸ ಇರುವ ತುಳುಭಾಷೆ ಬದುಕು ರೂಪಿಸುವ ಶಕ್ತಿಯಾಗಲಿ. ಇದಕ್ಕೆ ತುಳು ಸಂಸ್ಕೃತಿ ಸಂರಕ್ಷಣೆಗೆ ಕಟಿಬದ್ಧರಾಗೋಣ ಎಂದು ತುಳು ಸಂಘ ಬರೋಡಾ ಇದರ ಅಧ್ಯಕ್ಷ, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬರೋಡಾ ಇದರ ಆಡಳಿತ ನಿರ್ದೇಶಕ ಶಶಿಧರ್ ಬಿ. ಶೆಟ್ಟಿ ಬೆಳ್ತಂಗಡಿ ನುಡಿದರು.
ಸೆ. 29ರಂದು ಸಂಜೆ ಗುಜ ರಾತ್‌ನ ಅಹ್ಮದಾಬಾದ್‌ನ ಲಾ ಗಾರ್ಡನ್‌ನ ಠಾಕೋರ್ ಭಾಯಿ ದೇಸಾಯಿ ಸಭಾಗೃಹದಲ್ಲಿ ನಡೆದ ತುಳು ಸಂಘ ಅಹ್ಮದಾಬಾದ್ ಇದರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕವಾಗಿ ತುಳುವಿನ ಕೊಡುಗೆ ಅನನ್ಯವಾಗಿದೆ. ಆದ್ದರಿಂದ ತುಳು ಬಗ್ಗೆ ಜಾಗತಿಕ ಜಾಗೃತಿ ಮೂಡ ಬೇಕಾಗಿದೆ. ಕರ್ನಾಟಕದಲ್ಲಿ ತುಳುವಿಗೆ ದ್ವಿತೀಯ ಭಾಷಾ ಮಾನ್ಯತೆ ಸಿಗಬೇಕು. ಸಂವಿಧಾನದ ಎಂಟನೇ ಪರಿಚ್ಛೇಧದಲ್ಲೂ ತುಳುಭಾಷೆ ಸ್ಥಾನ ಪಡೆಯಬೇಕು ಎಂದರು.
ಗುಜರಾತ್‌ನ ಹಿರಿಯ ಉದ್ಯಮಿ ಮೋಹನ್ ಸಿ. ಪೂಜಾರಿ ಮತ್ತು ಹಿರಿಯ ಪತ್ರಕರ್ತ ಎಂ. ಎಸ್.ರಾವ್ ಅಹ್ಮದಾಬಾದ್ ಅವರ ಸಹಯೋಗದೊಂದಿಗೆ ಉಗಮಗೊಂಡ ತುಳು ಸಂಘ ಅಹ್ಮದಾಬಾದ್ ಇದರ ಪ್ರಾರಂಭಿಕ ಹಂತದ ಕಾರ್ಯಕ್ರಮಕ್ಕೆ ತುಳು ಸಂಘ ಅಹ್ಮದಾಬಾದ್‌ನ ಚಿಣ್ಣರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿಯೋಜಿತ ಪದಾಧಿಕಾರಿಗಳಾದ ಸಂಸ್ಥೆಯ ಅಧ್ಯಕ್ಷ ಅಪ್ಪು ಪಿ. ಶೆಟ್ಟಿ ಸ್ವಾಗತಿಸಿ ಮಾತನಾಡಿ, ಗುಜರಾತ್‌ನ ತುಳುವ ಜನನಾಯಕ, ಅಪದ್ಭಾಂಧವ, ತುಳು ಸಂಘ ಅಹ್ಮದಾಬಾದ್‌ನ ನಿರ್ಮಾತೃ, ಸ್ಫೂರ್ತಿಯ ಸೆಲೆ ಶಶಿಧರ್ ಶೆಟ್ಟಿ ಅವರು ತುಳು ಸಂಘ ಅಹ್ಮದಾಬಾದ್ ಸಂಸ್ಥೆಗೆ 5 ಲಕ್ಷ ರೂ. ಧನ ಸಹಾಯ ನೀಡಿ ಸಂಸ್ಥೆಯ ಉನ್ನತೀಕರಣಕ್ಕೆ ಪ್ರೇರೇಪಿಸಿದ್ದಾರೆ. ಅವರ ಈ ಸಹಾಯ ಧನಕ್ಕಾಗಿ ಸಂಘದ ಎಲ್ಲ ಸದಸ್ಯರು ಹಾಗೂ ಸಮಸ್ತ ತುಳುವರು ಕೃತಜ್ಞರಾಗಿದ್ದೇವೆ ಎಂದರು.
ಸಲಹೆಗಾರ ಎಂ. ಎಸ್. ರಾವ್ ಅಹ್ಮದಾಬಾದ್ ಅವರು ಮಾತನಾಡಿ ಶಶಿಧರ್ ಶೆಟ್ಟಿ ಅವರ ಸಾರಥ್ಯ ಮತ್ತು ಮುಂದಾಳತ್ವದಲ್ಲಿ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮತ್ತೂಂದು ತುಳು ಸಂಸ್ಥೆ ಅಸ್ತಿತ್ವಕ್ಕೆ ತರಲಾಗಿದ್ದು, ಈ ಮೂಲಕ ಗುಜರಾತ್‌ನಲ್ಲಿ ತುಳು ಸಂಘ- ಸಂಸ್ಥೆಗಳ ಮುಕುಟಕ್ಕೆ ಇನ್ನೊಂದು ಗರಿ ಮೂಡಿದಂತಾಗಿದೆ. ಶಶಿಧರ್ ಅವರಿಗೆ ಋಣಿ ಅಂದರೆ ಅದು ಉಪಚಾರದ ಮಾತಾದೀತು. ಅವರ ಸಹಾಯ, ಸಹಕಾರ ಇಲ್ಲದಿದ್ದರೆ ತುಳು ಸಂಘ ಅಹ್ಮದಾಬಾದ್ ಹುಟ್ಟು ಅಸಾಧ್ಯವಾಗುತ್ತಿತ್ತು, ಅವರ ಸಮಯೋಚಿತ ಸ್ಪಂದನೆ, ಸಹಯೋಗಕ್ಕಾಗಿ ಅತ್ಯಂತ ಆಭಾರಿಯಾಗಿದ್ದೇವೆ ಎಂದರು.
ಓರ್ವ ಅಪ್ಪಟ ತುಳುವನಾಗಿದ್ದು ಮಾತೃ ಭಾಷೆ, ಸಂಸ್ಕೃತಿಯನ್ನು ಜೀವಾಳವಾಗಿಸಿರುವ ಶಶಿಧರ್ ಶೆಟ್ಟಿ ಅವರು ಹೃದಯ ಶ್ರೀಮಂತರು. ಅವರ ಈ ಸಹಾಯ, ಉತ್ತೇಜನ, ಒತ್ತಾಸೆ, ಪ್ರೋತ್ಸಾಹವನ್ನು ಗುಜರಾತ್ ನೆಲೆಯ ತುಳುವರೆಂದೂ ಮರೆಯಲಾರೆವು. ಅವರು ತಮ್ಮ ಬಿರುಸಿನ ಚಟುವಟಿಕೆ, ಕೆಲಸ, ಒತ್ತಡದ ಮಧ್ಯೆಯೂ ತುಳುವರಿಗಾಗಿ ಎಲ್ಲವನ್ನು ಬದಿಗಿಟ್ಟು ತುಳು ಸಂಘ ಅಹ್ಮದಾಬಾದ್ ನಿರ್ಮಾಣಕ್ಕಾಗಿ ಮಾಡಿದ ಚಿಂತನೆ, ರಚಿಸಿದ ಯೋಜನೆ ಅನನ್ಯವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಗಣಪತಿ ಶೆಟ್ಟಿಗಾರ್ ನುಡಿದರು.
ಅಹ್ಮದಾಬಾದ್‌ನ ತುಳುವ ಧುರೀಣರಾದ ಆರ್. ಕೆ. ಶೆಟ್ಟಿ, ಮನೋಜ್ ಎಂ. ಪೂಜಾರಿ, ಹರೀಶ್ ಎಂ. ಪೂಜಾರಿ, ಮನೋಜ್ ಶೆಟ್ಟಿ, ಗೋಪಾಲಕೃಷ್ಣ ಪುರಾಣಿಕ್, ನಿತಿನ್ ಅಮೀನ್, ಶವಿನಾ ಶೆಟ್ಟಿ, ವಸಂತ್ ಕುಂದರ್, ಸುಮನ್ ಕೋಡಿಯಾಲ್‌ಬೈಲ್, ಶಂಕರ್ ಶೆಟ್ಟಿ, ಬೃಜೇಶ್ ಪೂಜಾರಿ, ಸಹನಾ ಭಟ್, ಪವಿತ್ರಾ ಶೆಟ್ಟಿ, ನಿರ್ಮಲಾ ಶೆಟ್ಟಿ, ಶೋಭಾ ಪೂಜಾರಿ, ಅಶೋಕ್ ಸಸಿಹಿತ್ಲು ಮುಂಬಯಿ ಸೇರಿದಂತೆ ಸ್ಥಾನೀಯ ಅನೇಕ ಗಣ್ಯರು ರಾಜ್ಯಾದ್ಯಂತದ ವಿವಿಧ ತುಳುವ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದು ಕಲಾವಿ ದರನ್ನು ಗೌರವಿಸಿದರು. ಕಿಕ್ಕಿರಿದು ತುಂಬಿದ ಸಭಾಗೃಹದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ ಪ್ರದರ್ಶನಗೊಂಡಿತು. ಗಣಪತಿ ಶೆಟ್ಟಿಗಾರ್ ವಂದಿಸಿದರು.
ಚಿತ್ರ-ವರದಿ : ರೊನಿಡಾ ಮುಂಬಯಿ