ಧಾರವಾಡ: ವಚನ ಸಾಹಿತ್ಯ ಧ್ವಂಸಗೊಳಿಸಲು ಕಲ್ಯಾಣ ಕ್ರಾಂತಿಯಲ್ಲಿ ಯತ್ನಿಸಿದ ಪಟ್ಟಭದ್ರರು ಇಂದಿಗೂ ತಮ್ಮ ವಕ್ರ ಪ್ರಯತ್ನಗಳನ್ನು ಬೇರೆ ಸ್ವರೂಪದಲ್ಲಿ ಮಾಡುತ್ತಿದ್ದಾರೆ ಎಂದು ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ದ್ವಿತೀಯ ಪೀಠಾಧ್ಯಕ್ಷರಾದ ಮಾತೆ ಗಂಗಾದೇವಿ ಹೇಳಿದರು.
ನಗರದ ಕವಿಸಂನಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ ಆಯೋಜಿಸಿದ್ದ 8 ನೇ ಶರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಚನ ಸಾಹಿತ್ಯವು 23 ಭಾಷೆಯಲ್ಲಿ ಪ್ರಸಾರವಾಗುತ್ತಿದ್ದು, ಬಸವಣ್ಣನವರ ಹಾಗೂ ಶಿವಶರಣರ ತತ್ವ ಸಿದ್ಧಾಂತಗಳ ಪ್ರಚಾರ ಮತ್ತಷ್ಟು ಹೆಚ್ಚಾಗುತ್ತಿರುವ ಕಾಲ ಇದೀಗ ಕಂಡು ಬರುತ್ತಿದೆ.
ಆದರೂ ಕೂಡ ಬಸವ ಸಂಘಟನೆ ಅಥವಾ ವಚನ ಪ್ರಚಾರ ಮಾಡುವವರಿಗೆ ಪಟ್ಟಭದ್ರ ಹಿತಾಸಕ್ತಿಗಳ ಕಾಟ ಈಗಲೂ ಮುಂದುವರಿದಿದೆ ಎಂದರು. ಧ್ವಜಾರೋಹಣ ನೆರವೇರಿಸಿದ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ನೀಲಕಂಠ ಅಸೂಟಿ ಮಾತನಾಡಿ,
ಇಂದು ನಮ್ಮನ್ನು ಒಡೆದಾಳುವ ನಮ್ಮ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಾವು ಹೋರಾಡಬೇಕು ಎಂದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸವಿನೆನಪಿನ ಕಾಣಿಕೆ ಬಿಡುಗಡೆಗೊಳಿಸಿದರು. ದೆಹಲಿ ಬಸವ ಮಂಟಪದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿದರು.
ಬಸವಲಿಂಗ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ಸತ್ಯಾದೇವಿ, ಶಾಸಕ ಎನ್.ಎಚ್. ಕೋನರಡ್ಡಿ, ನಿಜನಗೌಡ ಪಾಟೀಲ, ರಾ.ಬ.ದಳ ಅಧ್ಯಕ್ಷ ಸಿದ್ದಣ್ಣ ನಟೆಗಲ್, ಉಪಾಧ್ಯಕ್ಷ ಮಲ್ಲೇಶಪ್ಪ ಕುಸುಗಲ್, ಎಸ್.ಬಿ.ಜೋಡಳ್ಳಿ, ಆನಂದ ಚೋಪ್ರಾ, ಡಾ|ಅನ್ನಪೂರ್ಣ ಹಿರಲಿಂಗಣ್ಣವರ ಇದ್ದರು.