ದಾವಣಗೆರೆ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ, ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ
ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಹಾತ್ಮಗಾಂಧಿ ವೃತ್ತದಲ್ಲಿ ರಸ್ತೆ ತಡೆ, ಬಹಿರಂಗ ಸಭೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಕರ್ನಾಟಕ ಒಳಗೊಂಡಂತೆ ದೇಶದ್ಯಾಂತ ರೈತರು ಹಲವು ಸಮಸ್ಯೆಯಿಂದ ತತ್ತರಿಸುತ್ತಿದ್ದಾರೆ. ಸತತ ಮೂರು ವರ್ಷಗಳ ಭೀಕರ ಬರ, ಬೆಳೆ ಇಲ್ಲದ ಕಾರಣಕ್ಕೆ ದಿಕ್ಕು ತೋಚದೆ ರೈತರು ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ರಾಜ್ಯ ಸರ್ಕಾರ ಸಹಕಾರ ಕ್ಷೇತ್ರದಲ್ಲಿನ ರೈತರ 50 ಸಾವಿರ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ರೈತರ ಪರ ನಿಜವಾದ ಕಾಳಜಿ ತೋರಬೇಕು ಎಂದು ಒತ್ತಾಯಿಸಿದರು.
ಇಡೀ ಸಮಾಜಕ್ಕೆ ಅನ್ನ ನೀಡುವಂತಹ ರೈತರು ಅತೀವ ಸಂಕಷ್ಟದಲ್ಲಿರುವಾಗ ಅವರ ನೆರವಿಗೆ ಬರಬೇಕಿರುವುದು ಸರ್ಕಾರಗಳ ಕರ್ತವ್ಯ. ಬಂಡವಾಳಶಾಹಿಗಳ ಸಾಲವನ್ನ ಸದ್ದಿಲ್ಲದೆ ಮನ್ನಾ ಮಾಡುವ ಕೇಂದ್ರ ಸರ್ಕಾರ, ರೈತರ ಸಾಲ ಮನ್ನಾ ಸಾಧ್ಯವೇ ಇಲ್ಲ ಎನ್ನುತ್ತದೆ. ರೈತರ ಸಾಲ ಮನ್ನಾ ಮಾಡಿದ್ದಲ್ಲಿ ಅದು ಎಲ್ಲಿಗೆ ಹೋಗುವುದೇ ಇಲ್ಲ. ಇಲ್ಲಿಯೇ ಉಳಿಯುತ್ತದೆ ಎಂಬುದನ್ನು ಮನಗಂಡು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಉತ್ತಮ ಮಳೆ ಆಗುವರೆಗೆ ಜೀವನ ನಿರ್ವಹಣೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಒಂದು ವೇಳೆ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೆ ತಂದಲ್ಲಿ ಯಾವುದೇ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಪ್ರಮೇಯವೇ ಬರುವುದಿಲ್ಲ. ಸ್ವಾಮಿನಾಥನ್ ಆಯೋಗ ಬೆಳೆಗಳಿಗೆ ಒಳ್ಳೆಯ, ವೈಜ್ಞಾನಿಕ ಬೆಲೆಯನ್ನು ದೊರಕಿಸಿಕೊಡಲಿದೆ. ರೈತ ಸಮುದಾಯಕ್ಕೆ
ಸಾಕಷ್ಟು ಅನುಕೂಲವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೆ ತರಬೇಕು. ಜಿಲ್ಲೆಯಲ್ಲಿನ ಎರಡು ಖಾಸಗಿ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಹಳ ವರ್ಷದಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವರಲ್ಲಿ ಅನೇಕರು ಮಾಹಿತಿ ಕೊರತೆಯಿಂದ ಫಾರಂ ನಂಬರ್ 50 ಹಾಗೂ 53 ಸಲ್ಲಿಸಿಲ್ಲ ಆಂತಹವರಿಗೂ ಹಕ್ಕುಪತ್ರ ನೀಡಬೇಕು. ಆಯಾಯ ಜಲಾಶಯಗಳಿಂದ ಕೆರೆಗಳಿಗೆ ನೀರು ಹರಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. 2017-18ನೇ ಸಾಲಿನ ಕಬ್ಬಿನ ದರ ನಿಗದಿಪಡಿಸಲು ರಾಜ್ಯ ಸಲಹಾ ಸಮಿತಿ ಸಭೆ ಆಯೋಜಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರುಣ್‌ಕುಮಾರ್ ಕುರುಡಿ, ಹಾಲಪ್ಪ, ಅಂಜಿನಪ್ಪ ಪೂಜಾರ್, ಬುಳ್ಳಾಪುರದ ಹನುಮಂತಪ್ಪ, ನಾಗರಾಜಪ್ಪ ಹೊನ್ನಾಳಿ, ಸಿಐಟಿಯು ಮುಖಂಡ ಕೆ.ಎಲ್. ಭಟ್, ಇ. ಬಾಡ ಶ್ರೀನಿವಾಸ್ ಇತರರು ಇದ್ದರು.