Advertisement

UV Fusion: ದ್ವೇಷ ತೊರೆದು ಪ್ರೀತಿ ಹಂಚೋಣ

10:38 AM Feb 26, 2024 | Team Udayavani |

ಭೂಮಿಯ ಅಸ್ತಿತ್ವಕ್ಕೆ ಕಾರಣವೇ ಪ್ರೀತಿ ಎಂದರೆ ತಪ್ಪಾಗಲಾರದು. ಪ್ರೀತಿ  ಮತ್ತು ದ್ವೇಷ ಎಂಬುವುದು ಎರಡಕ್ಷರದ ಪದಗಳೆ. ಆದರೆ ಇವೆರಡೂ  ಜೀವಿಯ ಮೇಲೆ ವಿರುದ್ಧ ಪರಿಣಾಮವನ್ನು ಬೀರುವ ಪದಗಳಾಗಿವೆ. ದ್ವೇಷ ಕಲ್ಪಿಸಿಕೊಳ್ಳಲಾಗದಷ್ಟು ನಾಶದೆಡೆಗೆ  ನಮ್ಮನ್ನು ಕರೆದೊಯ್ದರೆ. ಪರಿಶುದ್ಧ ಪ್ರೀತಿ  ಹೇಳಿಕೊಳ್ಳಲಾಗದಷ್ಟು ಸಂತೋಷ, ಸುಂದರ ಜೀವನಕ್ಕೆ ಕಾರಣವಾಗುತ್ತದೆ. ಈ ಪ್ರೀತಿ ಎನ್ನುವುದು ಕೇವಲ ಒಂದು ಹುಡುಗ ಹುಡುಗಿಯ ನಡುವಿನ ಆಕರ್ಷಣೆಯಲ್ಲ. ಇದು ಸರ್ವಾಂತರ್ಯಾಮಿ.

Advertisement

ಒಂದು ಮರ ಹಕ್ಕಿಗಳನ್ನು ಪ್ರೀತಿಸುವುದರಿಂದಲೇ ಅವುಗಳಿಗೆ ನೆಲೆಯನ್ನು ನೀಡುತ್ತದೆ. ಸಮುದ್ರ ದಡವನ್ನು ಪ್ರೀತಿಸುವುದರಿಂದ ಮತ್ತೆ ಮತ್ತೆ ಬಂದು ತಟವನ್ನು ಅಪ್ಪಳಿಸುತ್ತದೆ.  ಮಣ್ಣು ಸಸ್ಯಗಳನ್ನು ಪ್ರೀತಿಸಿದ್ದರಿಂದಲೇ ಅವುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಪಕ್ಷಿಯು ತನ್ನ ಮರಿಗಳನ್ನು ಪ್ರೀತಿಸಿರುವುದರಿಂದಲೇ ಆಹಾರವನ್ನು ತಂದು ತುತ್ತನ್ನು ನೀಡುತ್ತದೆ. ಭೂತಾಯಿಗೆ ಸರ್ವಜೀವಿಗಳ ಮೇಲು ಪ್ರೀತಿ ಇರುವುದರಿಂದಲೇ ನೆಲೆಯನ್ನು ನೀಡಿದ್ದಾಳೆ. ಹೀಗೆ ಪೃಥ್ವಿಯ ಮೇಲಿರುವ ಪ್ರತಿಯೊಂದು ಜೀವಿಯು ಪರಸ್ಪರ ಪ್ರೀತಿಯನ್ನು ಹಂಚಿಕೊಂಡಿರುವುದರಿಂದ  ಬದುಕಲು ಸಾಧ್ಯವಾಗಿದೆ.

ಮಾನವನ ಪ್ರೀತಿ  ಎನ್ನುವುದು ದೇವರು ನೀಡಿರುವಂತಹ ಅದ್ಭುತವಾದ ವರವಾಗಿದೆ. ದ್ವೇಷ ಎಂಬುದು ನಮ್ಮ ಅಳಿವಿಗೆ ಕಾರಣವಾದರೆ ಪ್ರೀತಿ ನಮ್ಮ  ಏಳಿಗೆಗೆ  ಮುನ್ನುಡಿಯಾಗುತ್ತದೆ.  ಒಬ್ಬ ತಾಯಿಯ ಪರಿಶುದ್ಧ ಪ್ರೀತಿ ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ. ಒಬ್ಬ ಗುರು ವಿದ್ಯಾರ್ಥಿಗಳ ಮೇಲಿಟ್ಟಿರುವ ಪ್ರೀತಿ ಅವರ ಜೀವನದ ಜ್ಞಾನ ಜ್ಯೋತಿಯನ್ನು ಬೆಳಗಿಸುತ್ತದೆ.

ಹೀಗೆ ಪ್ರೀತಿ ಎಂಬ ಅದ್ಭುತ ಮಾಯಾವಿಶಕ್ತಿಯು ಒಂದಲ್ಲ ಒಂದು ರೀತಿಯಲ್ಲಿ ಮಾನವನಲ್ಲಿ ಅವಿತು ಹೋಗಿದೆ.  ಅದನ್ನು ಗುರುತಿಸಿದವನು ಎಂದು ದ್ವೇಷವನ್ನು  ಇಚ್ಚಿಸುವುದಿಲ್ಲ. ಭೂಮಿಯ ಮೇಲಿರುವ ಪ್ರತೀ ಜೀವಿ, ನಿರ್ಜೀವಿಗಳಲ್ಲೂ ಪ್ರೀತಿಯನ್ನು ಹುಡುಕುತ್ತಾನೆ ಮತ್ತು ಪ್ರೀತಿಯನ್ನು ಹಂಚುತ್ತಾನೆ.  ಅಲ್ಲದೆ ಇದೊಂದು ನೆಮ್ಮದಿಯ ಜೀವನದ ಮಾರ್ಗವಾಗಿದೆ.  ದೇವರು ನೀಡಿದ ಮೂರು ದಿನದ ಬಾಳಿನಲ್ಲಿ ಪ್ರೀತಿಗೇಕೆ ಬೇಲಿ? ಎಲ್ಲರೂ ಎಲ್ಲೆಲ್ಲೂ ಪ್ರೀತಿ, ವಿಶ್ವಾಸ, ನಂಬಿಕೆ, ವಾತ್ಸಲ್ಯವನ್ನು ಪಸರಿಸೋಣ. ಅದರಿಂದ ಆನಂದದ, ನೆಮ್ಮದಿಯ ಜೀವನ ಪಡೆಯೋಣ.

-ಪೂಜಾ ಹಂದ್ರಾಳ

Advertisement

ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next