ಕೃಷ್ಣಾಷ್ಟಮಿ, ಗೋಕುಲಾಷ್ಟಮಿ, ಕೃಷ್ಣ ಜನ್ಮಾಷ್ಟಮಿ ಇತ್ಯಾದಿಗಳೆಲ್ಲ ಶ್ರೀಕೃಷ್ಣ ಜನಿಸಿದ ದಿನದ ವಿಶೇಷ ದಿನದ ನಾನಾ ಹೆಸರುಗಳೇ. ಶ್ರಾವಣ ಮಾಸದ, ಕೃಷ್ಣಪಕ್ಷದ ಅಷ್ಟಮಿಯು ಶ್ರೀಕೃಷ್ಣ ಜನಿಸಿದ ದಿನ. ಕಂಸ ಮಹಾರಾಜನು ದೇವಕಿ-ವಸುದೇವರನ್ನು ಬಂಧನದಲ್ಲಿ ಇಟ್ಟಿದ್ದ.
ಇವರಿಗೆ ಹುಟ್ಟುವ ಎಂಟನೆಯ ಕೂಸು ಕಂಸನನ್ನು ಸಂಹಾರ ಮಾಡಲಿದೆ ಎಂಬ ಭೀತಿಯಿಂದಲೇ ಪ್ರೀತಿಯ ತಂಗಿಯಾದ ದೇವಕಿಯನ್ನು ಸೆರೆಮನೆಗೆ ಸೇರಿಸುವಂತೆ ಮಾಡಿತ್ತು. ಎಂಟನೆಯ ಕೂಸು ಹುಟ್ಟಿತು, ವಸುದೇವ ಆ ಕೂಸನ್ನು ನಂದ-ಯಶೋಧೆಯರ ಬಳಿ ಬಿಟ್ಟು ಯೋಗಮಾಯೆಯನ್ನು ಕರೆತಂದ. ಕೂಸು ಹುಟ್ಟಿದ ಸುದ್ದಿ ಕಂಸನಿಗೆ ತಿಳಿಯಿತು. ಓಡೋಡಿ ಬಂದರೆ ಅದು ಹೆಣ್ಣು ಕೂಸು!
ಆದರೇನು ಎಂದು ಅಪ್ಪಳಿಸಿ ಕೊಲ್ಲಲು ಹೋದಾಗ, ಅವನ ಕೈಯಿಂದ ಹಾರಿದ ಕೂಸು, “ನಿನ್ನ ಅಂತಕ ಇನ್ನೆಲ್ಲೋ ಬೆಳೆಯುತ್ತಿದ್ದಾನೆ’ ಎಂದಷ್ಟೇ ನುಡಿದು ಮಾಯವಾದಳು. ಇದಿಷ್ಟು ನಮಗೆಲ್ಲ ತಿಳಿದಿರುವ ಕಥೆ. ಇದನ್ನೇ ಕೊಂಚ ಆಚೆ ಈಚೆ ವಿಸ್ತಾರವಾಗಿ ನೋಡೋಣ ಬನ್ನಿ. ಕೃಷ್ಣ ಎಂಟನೆಯ ಅವತಾರಿ. ಹೀಗಾಗಿ ಅವನು ಅಷ್ಟಮಿಯಂದೇ ಜನಿಸಿದ ಎಂದು ಅಂದುಕೊಳ್ಳಬಹುದೇ? ಇದೇ ತರ್ಕ ಬಳಸಿದರೆ ಮತ್ಸಾéವತಾರ ಪಾಡ್ಯದ ದಿನ ಆಗಿತ್ತೇನೋ!
ಇಲ್ಲ ಬಿಡಿ ಮೊದಲೈದು ಅವತಾರಗಳು ಕೊಂಚ ಭಿನ್ನವೇ ಸರಿ. ಅವತಾರಗಳಲ್ಲಿ ಮಾತಾಪಿತೃಗಳು ಎಂದು ಕಂಡು ಬಂದದ್ದೇ ಪರುಶುರಾಮ ಅವತಾರದಿಂದ. ಈತನ ಹುಟ್ಟು ತೃತೀಯದಂದು. ಕೊಂಚ ಮುಂದೆ ಬಂದರೆ ರಾಮ ಹುಟ್ಟಿದ್ದು ನವಮಿ. ಇಷ್ಟೆಲ್ಲ ಹೇಳಿದ ಮೇಲೆ ಕೃಷ್ಣನು ತಾನು ಎಂಟನೆಯ ಅವತಾರ ಎಂದು ಅಷ್ಟಮಿಯ ದಿನವೇ ಜನಿಸಿದ ಎಂಬುದರಲ್ಲಿ ಹೆಚ್ಚಿನ ತರ್ಕ ಇಲ್ಲ. ಅವನ ಲೀಲೆ, ಬೇಕೆಂದಾಗ ಬರುವ. ಕರೆಯದೆಯೂ ಬಂದ ಕೂರ್ಮಾವತಾರಿಯಾಗಿ. ಕರೆದಾಗ ಬಂದ ನಾರಸಿಂಹನಾಗಿ. ದಶಾವತಾರದ ಸಕಲ ಅವತಾರವೂ ಸೊಗಸೇ ಆದರೆ ಕೃಷ್ಣಾವತಾರ ಬಲು ಸೊಗಸು.
ಅಷ್ಟಮಿಯ ದಿನ ಜನ್ಮಿಸಿದವನ ಹಬ್ಬಕ್ಕೆ ಜನ್ಮಾಷ್ಟಮಿ ಎಂದು ಹೆಸರು. ಕೃಷ್ಣ ಹುಟ್ಟಿದ್ದು ಮಥುರಾ ನಗರದಲ್ಲಿ. ಆದರೆ ಮಥುರಾಷ್ಟಮಿ ಎಂಬ ಹೆಸರೇ ಚಾಲ್ತಿಯಲ್ಲಿಲ್ಲ. ಮಥುರೆಯಲ್ಲಿ ಹುಟ್ಟಿದವ, ಮರುಕ್ಷಣದಲ್ಲೇ ಪವಾಡ ತೋರಿ, ವಸುದೇವನ ಸಹಾಯದಿಂದ ಗೋಕುಲಕ್ಕೆ ತೆರಳಿ, ನಂದ ಮತ್ತು ಯಶೋಧೆಯರ ಕಂದ ಎಂಬ ನಾಟಕವಾಡಿದ ಮೇಲೆ ಆ ಹುಟ್ಟುಹಬ್ಬವು “ಗೋಕುಲಾಷ್ಟಮಿ’ ಎಂಬ ಹೆಸರು ಪಡೆಯಿತು.
ಒಂದು ಉತ್ತಮ ಕೆಲಸವು ಆಗಲಿರುವಾಗ ಇಳೆಗೆ ಮಳೆ ಸುರಿಯುತ್ತದೆ. ಲೋಕಕಲ್ಯಾಣಕ್ಕೆ ಭಗವಂತ ಬಂದನೆಂದರೆ ಮಳೆ ಸುರಿಯದೇ ಇದ್ದೀತೆ? ಭಗವಂತ ಅವತರಿಸಿದಾಗ ಸಂಕಲೆಗಳು ಕಳಚಿತಂತೆ. ದೇವಕಿ ಮತ್ತು ವಸುದೇವರು ಬಂಧಮುಕ್ತರಾದರಂತೆ. ಭವಬಂಧನ ಕಳಚಿ ಮೋಕ್ಷವನ್ನೇ ನೀಡುವ ದೇವನಿಗೆ ಈ ಕಬ್ಬಿಣದ ಸಂಕಲೆಗಳನ್ನು ಕಳಚುವುದು ಯಾವ ದೊಡ್ಡ ಕೆಲಸ ಅಲ್ಲವೇ? ಕೃಷ್ಣನ ಇರುವು ಇಹವನ್ನೇ ಮರೆಸುವಂಥದ್ದು. ದೇವಕಿಯನ್ನು ಕಾವಲು ಕಾಯುತ್ತಿದ್ದ ಕಂಸ ಭಟರಿಗೆ ಆಗಿದ್ದೂ ಅದೇ!
ಬಂಧನದಲ್ಲಿದ್ದವರಿಗೆ ಬೇಡಿಯಿಂದ ಬಿಡುಗಡೆಯಾಗಲಿದೆ ಎಂಬ ಸುಳಿವು ಸಿಕ್ಕಿದ್ದರೂ ಎಂದು ಎಂಬುದು ಗೊತ್ತಿರಲಿಲ್ಲ ಅಲ್ಲವೇ?
ತಮ್ಮ ಮನೆಯಲ್ಲೇ ಬಾಲಕೃಷ್ಣ ಜನಿಸಿದ ಎಂಬ ಸಂಭ್ರಮಾಚರಣೆಯು ನಂದ-ಯಶೋದೆಯ ಮನೆಯಲ್ಲಿ ಶುರುವಾಯ್ತು. ಯಶೋದೆಯೇ ಹಡೆದಳು ಎಂಬಂತೆ ಗೋಪಗೋಪಿಯರು ಆ ಮುದ್ದಾದ ಕೂಸನ್ನು ಕಂಡು ಸಂಭ್ರಮಿಸಿದರು.
ಅಂದಿನ ಪದ್ಧತಿಯಂತೆ ನಂದನು ಕಂಸ ಮಹಾರಾಜನಿಗೆ ಕಾಣಿಕೆಗಳನ್ನು ನೀಡಲು ಹೋದ. ತನ್ನ ವೈರಿಯೂ ಎಲ್ಲೋ ಹುಟ್ಟಿದ್ದಾನೆ ಎಂಬ ಮಾತು ಕೇಳಿದ್ದಕ್ಕೂ, ನಂದಾನು ಕೂಸು ಹುಟ್ಟಿತೆಂದು ಹೇಳಲು ಬಂದಿದ್ದಕ್ಕೂ ತಾಳೆ ಹಾಕಿದ ಕಂಸನಿಗೆ ತನ್ನ ವೈರಿ ಇರುವ ಜಾಗದ ಬಗ್ಗೆ ಸುಳಿವು ದೊರೆಯಿತು. ಎಂಥಾ ವಿಪರ್ಯಾಸ ಅಲ್ಲವೇ? ಗುಟ್ಟು ಹೆಚ್ಚು ದಿನ ಉಳಿಯಲೇ ಇಲ್ಲ. ಇಷ್ಟಕ್ಕೂ ಆ ಗುಟ್ಟುರಟ್ಟಾಗಲೆಂದೇ ಸನ್ನಿವೇಶಗಳೂ ಆಗಿರಬಹುದು ಅಲ್ಲವೇ? ದುಷ್ಟ ಶಿಕ್ಷಣಕ್ಕಾಗಿಯೇ ಭೂಮಿಗೆ ಬಂದನಲ್ಲವೇ ಭಗವಂತ?
ಅಲ್ಲಿಂದ ಕಂಸನ ಆಟ ಶುರುವಾಯ್ತು. ಅವನ ದೃಷ್ಟಿ ಗೋಕುಲದತ್ತ ತಿರುಗಿತು. ಅವನು ಅಸ್ತ್ರಗಳನ್ನು ಪ್ರಯೋಗಿಸಲು ಆರಂಭಿಸಿದ. ಪ್ರತೀ ಬಾರಿ ಅಸ್ತ್ರ ಪ್ರಯೋಗಿಸುವಾಗಲೂ ಇದೇ ಕೊನೆಯ ಅಸ್ತ್ರ ಎಂಬ ವಿಶ್ವಾಸ. ಅದರಲ್ಲೂ ಪೂತನಿಯನ್ನು ವಿಷವುಣಿಸಿ ಕೂಸನ್ನು ಕೊಂದುಬಿಡು ಎಂದು ಆಜ್ಞಾಪಿಸಿದಾಗಲಂತೂ ಮೊದಲ ಅಸ್ತ್ರವೇ ಕೊನೆಯ ಅಸ್ತ್ರ ಎಂಬಷ್ಟು ಅತೀ ಆತ್ಮವಿಶ್ವಾಸ. ಸುಂದರ ರೂಪದ ಗೊಲ್ಲತಿಯಂತೆ ವೇಷ ಬದಲಿಸಿ ಹಾಲೂಣಿಸಿ ಕೊಲ್ಲಲು ಬಂದವಳಿಗೆ ಮೋಕ್ಷವನ್ನೇ ಕೊಟ್ಟ
ಹಾಲು ಕುಡಿಯುವ ಕೂಸು. ಅದೆಲ್ಲ ಸರಿ, ಆದರೆ ಪೂತನಿಯು ಮೊದಲ ಬಾರಿಗೆ ಕೃಷ್ಣನನ್ನು ಕಂಡಿದ್ದು. ಆದರೆ ಅಷ್ಟರಲ್ಲೇ ಮೋಕ್ಷ ಪಡೆದಳೇ? ಅವಳ ಅಂದಿನ ಕಥೆ ಹೀಗಿದೆ. ಮೊದಲಿಗೆ ಪುಟ್ಟ ಬಾಲಕನನ್ನು ನೋಡಿ ಇವನೇಕೆ ತನ್ನ ಮಗನಾಗಬಾರದು? ಎಂಬಾಸೆ ಮೂಡಿತ್ತು. ಇದಾದ ಅನಂತರ ನಡೆದ ಘಟನೆಗಳಿಂದ ಕ್ರೋಧಿತಳಾಗಿ ಆ ಬಾಲಕನನ್ನು ಕೊಂದುಬಿಡುವಷ್ಟು ಕ್ರೋಧಿತಳಾದಳಂತೆ. ಇವೆರಡೂ ಆಶಯಗಳನ್ನು ಒಮ್ಮೆಲೇ ಕೃಷ್ಣನಾಗಿ ತೀರಿಸಿದ್ದ. ಆ ಬಾಲಕನಾರು ಗೊತ್ತೇ? ಅವನೇ ನನ್ನ ನೆಚ್ಚಿನ “ವಾಮನ’. ಈ ಹೆಣ್ಣು ಯಾರು? ಇವಳೇ ಅಂದು ಬಲಿಚಕ್ರವರ್ತಿಯ ಮಗಳಾಗಿದ್ದ ರತ್ನಮಾಲಾ. ಅಂದೂ ಬಾಲಕನಾಗಿದ್ದ, ಇಂದೂ ಬಾಲಕನಾಗಿ ಅವಳಿಗೆ ಮೋಕ್ಷ ನೀಡಿದನಾ ಪರಮಾತ್ಮ.
ಮೊದಲಲ್ಲೇ ಸೋಲುಂಡಿದ್ದ ಕಂಸನಿಗೆ ಈಗ ಮರ್ಮಾಘಾತವಾಗಿತ್ತು. ಮುಂದಿನ ಅಸ್ತ್ರವೇ ತೃಣಾವರ್ತ. ಗೋಕುಲದತ್ತ ಬಂದವನು ಗಾಳಿಯ ಸ್ವರೂಪಿ ತೃಣಾವರ್ತ. ರಭಸವಾದ ಗಾಳಿಯ ಸ್ವರೂಪದಲ್ಲಿ ಬಂದು ಅಲ್ಲಿದ್ದವರನ್ನೆಲ್ಲ ಓಡಿಸಿ, ಕೃಷ್ಣನನ್ನು ಪಿಡಿದು ಮೇಲಕ್ಕೆ ಎತ್ತಿ ಕೆಳಕ್ಕೆ ಬೀಳಿಸಲು ನೋಡಿದಾಗ, ಬಾಲಕೃಷ್ಣ ಅಲ್ಲೇ ಅವನ ಕುತ್ತಿಗೆಯನ್ನು ಹಿಡಿದು ಅಮುಕಿ ಪ್ರಾಣ ತೆಗೆದ. ತರಗೆಲೆಯಂತೆ ಉದುರಿದ ಆ ರಕ್ಕಸ ದೊಡ್ಡ ಮರವಾಗಿ ನೆಲಕ್ಕೆ ಉರುಳಿದ್ದ. ಗಾಳಿ ನಿಂತು ಹೋಯ್ತು ಎಂದು ಬಂದವರಿಗೆ ಮರದ ಪಕ್ಕದಲ್ಲೇ ಆಡುತ್ತಿದ್ದ ಕೃಷ್ಣನನ್ನು ಕಂಡು ನಿರಾಳವೂ ಆಯ್ತು, ಜತೆಗೆ ಏನೋ ನಡೆಯುತ್ತಿದೆ ಎಂಬ ಭೀತಿಯೂ ಹುಟ್ಟಿತು. ಆದರೆ ಕೃಷ್ಣಬಲರಾಮರು ಸೋಲಿಲ್ಲದ ಸರದಾರರಾಗಿ ಮುಂದುವರೆದರು.
ಕಂಸನ ಬಂಟರೆಲ್ಲ ವೈವಿಧ್ಯಮಯ ರಕ್ಕಸರು. ಈಗ ಹತನಾದವನು ಗಾಳಿಯ ಸ್ವರೂಪ ತಾಳಬಲ್ಲವನಾದರೆ ಅನಂತರ ಬಂದವನು ಶಕಟಾಸುರ. ಈ ಶಕಟನೋ ಬಂಡಿ ಸ್ವರೂಪಿ. ಕೃಷ್ಣ ತೀರಾ ಗಲಾಟೆ ಮಾಡುತ್ತಿದ್ದ ಅಂತ ಮನೆಯ ಮುಂದೆ ನಿಂತಿದ್ದ ಗಾಡಿಯ ಚಕ್ರಕ್ಕೆ ಕಟ್ಟಿದಳಂತೆ ಯಶೋದೆ. ಅವಳಿಗೆ ಆ ಬಂಡಿಯ ಬಗ್ಗೆ ಅರಿವೇ ಇರಲಿಲ್ಲ. ಕೃಷ್ಣನಿಗೆ ಹೊಂಚು ಹಾಕುತ್ತಾ ನಿಂತಿದ್ದ ರಕ್ಕಸನವನು. ಕಟ್ಟಿ ಪೊಡಲು ಯಶೋದೆ ಮರುಕ್ಷಣದಲ್ಲೇ ಬಂಡಿ ತಂತಾನೇ ಓಡಲು ಶುರು ಮಾಡಿತಂತೆ.
ಕೃಷ್ಣನೋ ಥಟ್ಟನೆ ಬಂಡಿಯ ಒಳಗೆ ಹಾರಿ ಕುಣಿದಾಡಿದ ಎಂಬ ಕಥೆಯಿದೆ. ನೋಡು ನೋಡುತ್ತಿದ್ದಂತೆ ಆ ಬಂಡಿ ಒಂದೆಡೆ ನಿಂತು ಒಡೆದು ಚೂರಾಯಿತು. ಕೃಷ್ಣಾ ನೀ ಕುಣಿದಾಗ ನಾ ಹೇಗೆ ತಾಳುವೆನೋ ಎಂದು ರಕ್ಕಸ ಸತ್ತಿದ್ದ.
ಈ ರೀತಿಯ ನಿತ್ಯ ಬಾಧೆಗಳಿಂದ ದೂರಾಗಲು ನಂದ, ಯಶೋದೆ, ರೋಹಿಣಿ ಮುಂತಾದವರು ಬೃಂದಾವನಕ್ಕೆ ತೆರಳಿದರು.
ಅಲ್ಲಿನ ಗೋವರ್ಧನಗಿರಿ, ಯಮುನಾ ನದಿಗಳಿಂದ ಕೂಡಿದ ಪ್ರಕೃತಿಯು ಎಲ್ಲರಿಗೂ ಆಹ್ಲಾದ ತಂದಿತ್ತು. ಕಷ್ಟಗಳು ಹುಡುಕಿ ಬಾರದಿದ್ದರೂ, ಕೃಷ್ಣನೇ ಆಪತ್ತಿನ ಬೆನ್ನಟ್ಟಿದ್ದ. ಯಮುನಾ ನದಿಯ ತೀರದ ಮಡುವಿನಲ್ಲಿ ಇದ್ದ ಕಾಳಿಂಗ ಸರ್ಪ ಎಲ್ಲರ ನಿದ್ದೆಗೆಡಿಸಿತ್ತು. ಕಪ್ಪುವರ್ಣದ ನಾಗರದಿಂದಾಗಿ ನೀರೂ ಕಪ್ಪಾಗಿ ಕಂಡಿತ್ತು. ಒಮ್ಮೆ ಅಲ್ಲೇ ಆಡುವಾಗ, ಕೃಷ್ಣನಿಗೆ ಕಾಳಿಂಗನ ಬಗ್ಗೆ ಅರಿವಾಗಿ, ಜತೆಗಿನ ಸ್ನೇಹಿತರು ನೋಡುವಾಗಲೇ, ಮಡುವಿನಲ್ಲಿ ಧುಮುಕಿ, ಸರ್ಪದ ಹೆಡೆಯನೇರಿ ಕುಣಿದಾಡಿದ ಕೃಷ್ಣ ಕುಣಿದಾಡಿದ. ಫಣಿಯ ಮೆಟ್ಟಿ, ಬಾಲವ ಪಿಡಿದು ಕುಣಿದಾಡಿದ. ಫಣಿಯ ಅಹಂಕಾರ ಇಳಿದಿತ್ತು. ಬಣ್ಣದ ಗೆಜ್ಜೆ ಕುಣಿದಿತ್ತು.
ಬಾಲಕೃಷ್ಣನ ಬಾಲ ಲೀಲೆಗಳು ಅನೇಕ. ಒಂದೊಂದೂ ಸಾಹಸ ರೋಚಕ. ಏಳು ವರ್ಷದವನಾಗಿದ್ದಾಗ ಗೋವರ್ಧನ ಗಿರಿಧಾರಿಯಾದ. ಹನ್ನೆರಡೂ ತುಂಬದ ಬಾಲಕನಿಂದ ಕಂಸನ ವಧೆ ರೋಚಕವಲ್ಲದೆ ಮತ್ತೇನು? ಕೃಷ್ಣಾ ಹೆಸರೇ ಲೋಕಪ್ರಿಯ. ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ ಎಂದೆಲ್ಲ ಹೇಳುತ್ತಾ ಬನ್ನಿ ನಿಮಗೆ ಗೊತ್ತಿರುವ ಕಥೆಗಳನ್ನೂ ಹಂಚಿಕೊಳ್ಳಿ. ಕೃಷ್ಣಾ ನೀ ಬೇಗನೆ ಬಾರೋ ಎಂದೂ ಹಾಡಿ.
*ಶ್ರೀನಾಥ್ ಭಲ್ಲೇ, ರಿಚ್ಮಂಡ್