Advertisement

Plastic ಮೋಹದಿಂದ ಹೊರ ಬರೋಣ

03:26 PM Mar 02, 2024 | Team Udayavani |

ಪ್ಲಾಸ್ಟಿಕ್‌ ಹೊರತಾದ ಜಗತ್ತನ್ನು ಇಂದು ಊಹಿಸುವುದು ಬಲು ಕಷ್ಟ. ಪ್ರಪಂಚದ ಯಾವ ಮೂಲೆಗೆ ಹೋದರೂ ಪ್ಲಾಸ್ಟಿಕ್‌ ಬಳಕೆ ತಪ್ಪಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೈನಂದಿನ ಬಳಕೆಯಲ್ಲಿ ಪ್ಲಾಸ್ಟಿಕ್‌ ಹಾಸುಹೊಕ್ಕಾಗಿದೆ. ಅನುಕೂಲಗಳಿರುವ ಜತೆಗೆ ಅಷ್ಟೇ ಮಾರಕವಾಗಿರುವ ಇದರ ನಿರ್ಮೂಲನೆ ಅಷ್ಟು ಸುಲಭವಾಗಿಲ್ಲ. ಇದರ ಪರ್ಯಾಯವಾಗಿ ಬಳಸಲು ಅನೇಕ ಆಯ್ಕೆಗಳಿದ್ದರೂ ಜನರ ಸಹಯೋಗದ ಕೊರತೆಯಿಂದ ಯಶಸ್ಸು ಕಾಣಲು ಸಾಧ್ಯವಾಗುತ್ತಿಲ್ಲ. ಪ್ಲಾಸ್ಟಿಕ್‌ಗಿಂತಲೂ ಮಾರಕವಾಗಿ ಪರಿಣಮಿಸುತ್ತಿರುವುದು ಮೈಕ್ರೋ ಪ್ಲಾಸ್ಟಿಕ್‌. ಇತ್ತೀಚಿನ ದಿನಗಳಲ್ಲಿ ಮೈಕ್ರೋ ಪ್ಲಾಸ್ಟಿಕ್‌ನಿಂದ ನಾನಾ ಸಮಸ್ಯೆಗಳು ಉದ್ಭವಿಸುತ್ತಿದೆ.

Advertisement

ಏನಿದು ಮೈಕ್ರೋ ಪ್ಲಾಸ್ಟಿಕ್‌?

ಐದು ಮಿ.ಮೀ. ಗಾತ್ರಕ್ಕಿಂತ (0.1-5) ಕಡಿಮೆ ಗಾತ್ರದ ಪ್ಲಾಸ್ಟಿಕ್‌ ಸಣ್ಣ ತುಂಡುಗಳ ಅತ್ಯಂತ ಸೂಕ್ಷ ಕಣಗಳನ್ನು ಮೈಕ್ರೋ ಪ್ಲಾಸ್ಟಿಕ್‌ ಎಂದು ಕರೆಯಲಾಗುತ್ತದೆ. ಪ್ಲಾಸ್ಟಿಕ್‌ ವಸ್ತುಗಳನ್ನು ಒಡೆದಾಗಲೂ ಈ ಮೈಕ್ರೋ ಪ್ಲಾಸ್ಟಿಕ್‌ಗಳು ಸೃಷ್ಟಿಯಾಗಬಹುದು. ಮೈಕ್ರೋಪ್ಲಾಸ್ಟಿಕ್‌ಗಳನ್ನು ಸೌಂದರ್ಯವರ್ಧಕ, ಜೈವಿಕ ತಂತ್ರಜ್ಞಾನ, ತೊಳೆಯುವ ಉತ್ಪನ್ನ ಮತ್ತು ಔಷಧದ ಕ್ಯಾಪ್ಸೂಲ್‌ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಪರಿಸರದಲ್ಲಿರುವ ಪ್ಲಾಸ್ಟಿಕ್‌ ತ್ಯಾಜ್ಯ ಒಡೆದು ಮಣ್ಣಿನಲ್ಲಿ, ನೆಲದಡಿಯಲ್ಲಿ ಹಾಗೂ ಸಾಗರ, ನದಿಗಳಲ್ಲಿ ಇದು ಬೆರೆತಿರುತ್ತದೆ.

ನಾನಾ ಮಾರ್ಗಗಳ ಮೂಲಕ ಮೈಕ್ರೋ ಪ್ಲಾಸ್ಟಿಕ್‌ ಕಣಗಳು ಮನುಷ್ಯರ ದೇಹವನ್ನು ಸೇರಿಕೊಳ್ಳುತ್ತಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಮೈಕ್ರೋ ಪ್ಲಾಸ್ಟಿಕ್‌ಗಳು ಕಂಡು ಬರುತ್ತಿರುವುದು ಸಮುದ್ರದ ಆಳದಲ್ಲಿ. ಮೀನುಗಳ ಮೂಲಕವೂ ಮೈಕ್ರೋ ಪ್ಲಾಸ್ಟಿಕ್‌ ನಮ್ಮ ದೇಹ ಸೇರಬಹುದು. ಇತ್ತೀಚಿನ ಒಂದು ಅಧ್ಯಯನ ಪ್ರಕಾರ ಉಪ್ಪಿನಲ್ಲೂ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಲಭಿಸಿವೆ. ತಯಾರಿಕೆ ಸಂದರ್ಭ ಬಳಕೆಯಾಗುವ ನದಿ, ಸಮುದ್ರ ನೀರು ಇದಕ್ಕೆ ಕಾರಣ. ಪ್ಲಾಸ್ಟಿಕ್‌ ಪಾತ್ರೆಗಳಲ್ಲಿ ಆಹಾರ ಸೇವನೆ, ತರಕಾರಿಗಳನ್ನು ಪ್ಲಾಸ್ಟಿಕ್‌ ಚಾಪಿಂಗ್‌ ಬೋರ್ಡ್‌ನ ಮೇಲೆ ಇಟ್ಟು ತುಂಡರಿಸುವುದರಿಂದ ಮೈಕ್ರೋ ಪ್ಲಾಸ್ಟಿಕ್‌ ಕಣ ನಮ್ಮ ದೇಹ ಸೇರಿಕೊಳ್ಳುತ್ತಿವೆ.

ಜನರ ಸಹಕಾರ ಹೊರತಾಗಿ ನಿರ್ಮೂಲನೆ ಅಸಾಧ್ಯ

Advertisement

ಜನರು ಪ್ಲಾಸ್ಟಿಕ್‌ ವ್ಯಾಮೋಹದಿಂದ ಹೊರಬಂದು ತಾವಾಗಿಯೇ ತ್ಯಜಿಸುವವರೆಗೆ ಸರಕಾರಗಳು ಯಾವುದೇ ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಿಲ್ಲ. ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಇರುವ ವಸ್ತುಗಳನ್ನು ಜನರು ಬಳಸುವ ಮೂಲಕ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಬಹುದು. ಪ್ಲಾಸ್ಟಿಕ್‌ ನಮ್ಮನ್ನು ಸಂಪೂರ್ಣ ಆವರಿಸುವ ಮುನ್ನ ಅದರ ನಿರ್ಮೂಲನೆ ಅತೀ ಅಗತ್ಯ.

-ಧನ್ಯಶ್ರೀ ನಿತೇಶ್‌

ಬೋಳಿಯಾರ್‌

 

Advertisement

Udayavani is now on Telegram. Click here to join our channel and stay updated with the latest news.

Next