ಶಿರಾ: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಬೇಕು ಎಂದು ಶಾಸಕ ಬಿ.ಸತ್ಯನಾರಾಯಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಎಚ್ಚರಿಸಿದರು.
ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಸೇರಿ ಮಾರ್ಗದ 11 ಕೆರೆಗಳಿಗೆ ನೀರು ಹಾಯಿಸಲು 2009ರಲ್ಲಿ ಅಂದಿನ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕಾಗಿ 59.88 ಕೋಟಿ ಅಂದಾಜು ಪಟ್ಟಿ ತಯಾರಿಸಿ, ಕೇಂದ್ರದಿಂದ ಅನುಮೋದನೆ ಪಡೆದಿದ್ದರೂ ನೀರು ಹರಿಸಿಲ್ಲ. ಆದೇಶ ಪ್ರತಿ ನೋಡದೇ ಹೇಳಿಕೆ ನೀಡುತ್ತಾರೆ. ಪ್ರತಿ ಕಾಣಿಸದಿದ್ದರೆ ಕನ್ನಡಕ ಕೊಡಿಸುತ್ತೇನೆ. ಬೆಳಕು ಸಾಲದೇ ಹೋದರೆ ಟಾರ್ಚ್ ಕೊಡಿಸುತ್ತೇನೆ. 15 ದಿನಗಳ ಮುಂಚೆಯೇ ನೀರು ನಿಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಹೇಮಾವತಿ ಜಲಾಶಯಕ್ಕೆ ಪ್ರಸ್ತುತ ವರ್ಷ 109.3 ಟಿಎಂಸಿ ಹರಿದಿದೆ. 45 ಟಿಎಂಸಿ ವ್ಯರ್ಥವಾಗಿದೆ. ಚಾನಲ್ ಮೂಲಕ ಹರಿಸಲಾದ 48.6 ಟಿಎಂಸಿ ಪೈಕಿ ತುಮಕೂರಿಗೆ 18.6 ಟಿಎಂಸಿ ಬಂದರೆ, ಉಳಿದದ್ದು ಎಲ್ಲಿಗೆ ಹರಿದಿದೆ? ಅದರಲ್ಲಿಯೂ ಜಿಲ್ಲೆಯಲ್ಲಿ 125 ಅಧಿಕೃತ ಕೆರೆಗಳಿಗೆ ನೀರು ಹರಿಸಬೇಕಿದ್ದು, 280 ಕೆರೆಗಳಿಗೆ ಹರಿಸಲಾಗಿದೆ. ಕೆಲವು ಕೆರೆಗೆ ಎರಡು-ಮೂರು ಬಾರಿ ನೀರು ಬಿಡಲಾಗಿದೆ. ಆದರೆ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸಿಲ್ಲ ಎಂದು ಹೇಳಿದರು.
ಹಿರಿಯ ಮುಖಂಡ ಎಸ್.ಎನ್.ಕೃಷ್ಣಯ್ಯ, ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ಬರಗೂರು ನಟರಾಜ್, ಡಿ.ಸಿ.ಆಶೋಕ್, ಭೂವನಹಳ್ಳಿ ಸತ್ಯನಾರಾಯಣ ಇತರರಿದ್ದರು.
ರಾಜಕೀಯವಾಗಿ ಸೋಲಾಗಿರಬಹುದು. ಆದರೆ ನೀರಾವರಿ ವಿಚಾರದಲ್ಲಿ ಸೋತಿಲ್ಲ. ಕಳೆದ ಚುನಾವಣೆಗೂ 2 ವರ್ಷದ ಮುಂಚೆಯೆ ಮದಲೂರು ಕೆರೆಗೆ ನೀರು ಹರಿಸಿದ್ದೆ. ನೀರು ತಂದಿರುವ ಕಾರಣ ನೀರಿನ ವಿಚಾರ ರಾಜಕೀಯಕ್ಕೆ ಬಳಸುತ್ತೇನೆ. ಜಾತಿ ಹೆಸರಿನಲ್ಲಿ ಓಟು ಪಡೆದಿಲ್ಲ.
-ಜಯಚಂದ್ರ, ಮಾಜಿ ಸಚಿವ