Advertisement
ನಾವು ಯಾವುದೇ ಕೆಲಸಕ್ಕೆ ಮುಂದಡಿ ಇಡುವಾಗಲೂ ಒಂದಷ್ಟು ಅಡೆತಡೆಗಳು ಎದುರಾಗುತ್ತವೆ. ಸಣ್ಣಪುಟ್ಟ ಅಡೆತಡೆಗಳು ಎದುರಾದಾಗಲೂ ಹಿಂದೇಟು ಹಾಕು ತ್ತೇವೆ. ಆ ರೀತಿಯ ಅಡೆತಡೆಗಳನ್ನು ಸಂದ ಭೋìಚಿತವಾಗಿ ನಿವಾರಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ನಿಜಕ್ಕೂ ಯಶಸ್ಸು ಕಟ್ಟಿಟ್ಟ ಬುತ್ತಿ. ಯಶಸ್ಸಿನ ಜತೆಗೆ ಬದುಕಿನ ಅಡೆತಡೆಗಳನ್ನು ಮೀರಿ ಸಾಗಿದ ಆತ್ಮತೃಪ್ತಿ ಸದಾಕಾಲ ನೆಲೆಯೂರುತ್ತದೆ. ಅಷ್ಟು ಮಾತ್ರವಲ್ಲದೆ ಈ ಯಶಸ್ಸು ನಮ್ಮ ಮುಂದಿನ ಜೀವನಕ್ಕೆ, ನಮ್ಮ ಭವಿಷ್ಯದ ಪೀಳಿಗೆಗೂ ದಾರಿದೀಪವಾಗುತ್ತದೆ.
ವಿದ್ಯಾರ್ಥಿ ಜೀವನದಲ್ಲಂತೂ “ಆಗದು ಎಂದು ಕೈ ಕಟ್ಟಿ ಕುಳಿತರೆ’ ಯಾವ ಸಾಧ ನೆಯೂ ಸಾಧ್ಯವಾಗದು. ಯಾವುದೇ ಕಲಿಕೆಯಲ್ಲಿ ತೊಡಗುವಾಗ ಮೊದಲು ಕ್ಲಿಷ್ಟವೆನಿಸಬಹುದು. ಪರೀಕ್ಷೆಗಳನ್ನು ಎದುರಿಸುವಾಗ ಕಷ್ಟವೆನಿಸಬಹುದು. ಸೋಲು ಕಾಡ ಬಹುದು. ಆದರೆ “ನನ್ನಿಂದಾಗದು’ ಎಂದು ಹಿಂದೇಟು ಹಾಕಬಾರದು. ಸತತ ಪ್ರಯತ್ನ, ಪೂರ್ವಯೋಜಿತ ಮತ್ತು ಯೋಚಿತ ಕಲಿಕೆಯಿಂದ ಯಶದ ಗರಿಯನ್ನು ಮುಡಿಗೇರಿಸಿಕೊಳ್ಳಲು ಸಾಧ್ಯ. ಪರೀಕ್ಷೆಯ ಅಂಕಗಳಲ್ಲಿ ಹಿನ್ನೆಡೆ ಅನುಭವಿಸಿದರೂ ಪರೀಕ್ಷಾ ಅಂಕಗಳಾಚೆಗೆ ಜೀವನದಲ್ಲಿ ಯಶಸ್ವಿಯಾದವರ ಕಥೆಗಳನ್ನು ತಿಳಿದು ಆ ನಿಟ್ಟಿನಲ್ಲಿ ಜೀವನದ ಯಾವುದಾದರೂ ರಂಗದಲ್ಲಿ ಯಶಸ್ವಿಯಾಗುವತ್ತ ಛಲದಂಕ ಮಲ್ಲನಂತೆ ಮುಂದಡಿ ಇಟ್ಟು ಗುರಿ ತಲುಪಬೇಕು. ಹಾದಿಯಲ್ಲಿ ಎದುರಾಗುವ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯುವತ್ತ ಚಿತ್ತ ಬೆಳೆಸಬೇಕಾಗಿದೆ. “ತಮಸೋಮಾ ಜ್ಯೋತಿರ್ಗಮಯ’ ಎಂಬಂತೆ ಬದುಕಿನ ಕತ್ತಲೆಯ ದಿನಗಳನ್ನು ಬೆಳಕಿನ ದಿನಗಳತ್ತ ಕೊಂಡೊಯ್ಯುವಂತಾಗಬೇಕಿದೆ. ಹೊಸತನವೆ ಬಾಳು;
ಹಳಸಿಕೆಯಲ್ಲ ಸಾವು ಬಿಡು
ರಸವು ನವನವತೆಯಿಂದನು
ದಿನವು ಹೊಮ್ಮಿ|
ಹಸನೊಂದು ನುಡಿಯಲ್ಲಿ
ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲುವು – ಮಂಕುತಿಮ್ಮ ಎಂಬ ಡಿ.ವಿ.ಜಿ.ಯವರ ಕಗ್ಗದ ಸೊಲ್ಲುಗಳಂತೆ ನಮ್ಮ ಬದುಕಿನಲ್ಲಿ ನಿರಂತರ ಹೊಸತನವನ್ನು ಕಾಣುತ್ತಿರಬೇಕು. ಹಳತನ್ನು ಸಾವೆಂದು ತಿಳಿದು ದೂರ ತಳ್ಳಬೇಕು. ಅನುದಿನವೂ ಹೊಸತನದಿಂದ ರಸ ಹೊಮ್ಮುತ್ತಿರಬೇಕು. ನಾವಾಡುವ ನುಡಿಯಲ್ಲಿ ಹೊಸತನವಿರಬೇಕು. ನಡೆಯಲ್ಲಿ, ನೋಟದಲ್ಲಿ ಶ್ರೇಷ್ಠತೆ ಹೊಮ್ಮುತ್ತಿರಬೇಕು.ಆಗಲೇ ನಮ್ಮ ಬಾಳು ಸುಂದರವಾಗುತ್ತದೆ ಎಂಬ ಕಗ್ಗದ ತಾತ್ಪರ್ಯ ನಮಗೆ ಸ್ಫೂರ್ತಿಯಾಗಲಿ, ಬದುಕು ಅಡೆತಡೆಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು ಎಂಬ ಸಂಕಲ್ಪ ನಮ್ಮದಾಗಲಿ.
- ಭಾರತಿ ಎ., ಕೊಪ್ಪ