ಧರೆಯ ಬದುಕೇನದರ ಗುರಿಯೇನು ಫಲವೇನು ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕ್ಕಿಂತ ನರನು ಸಾಧಿಪುದೇನು ? ಮಂಕುತಿಮ್ಮಜೀವನದ ಯಾತ್ರಿಕನಿಗೆ ಇರುವ ಗುರಿಯೇನು, ಲಾಭವೇನು ಎಂದು ಕೇವಲ ಸುತ್ತಾಟ, ಬಡಿದಾಟ, ಹುಚ್ಚಾಟವಷ್ಟೇ. ಜೀವನವೆಲ್ಲ ಹುಡುಕಾಟದಲ್ಲಿ, ತೊಳಲಾಟದಲ್ಲಿ ಕಳೆಯುವ ನಾವು ನಮ್ಮ ಜೀವನದ ಮೂಲ ಗುರಿಯೇನು, ಬದುಕೇನು ಎಂಬ ಪ್ರಶ್ನೆಗೆ ಮತ್ತೆ ಮತ್ತೆ ಉತ್ತರ ಹುಡುಕುತ್ತಲೇ ಇರುತ್ತೇವೆ.
ಒಬ್ಬ ವ್ಯಕ್ತಿ ತನ್ನ ಬೆಲೆಯೇನು ಎಂದು ಹುಡುಕುತ್ತಾ ತುಂಬಾ ಬೇಸರದಿಂದ, ತನ್ನ ಹುಟ್ಟಿಗಾಗಿ ದೇವರನ್ನು ದೂಷಿಸುತ್ತಾ ದೇವಾಲಯದ ಮೆಟ್ಟಿಲುಗಳ ಮೇಲೆ ಕುಳಿತಿದ್ದ. ಅಲ್ಲಿಗೆ ಬಂದ ಒಬ್ಬ ಸನ್ಯಾಸಿ ಅವನ ಭುಜದ ಮೇಲೆ ಕೈಯಿಟ್ಟು ಏಕೆ ಇಷ್ಟು ಸಂಕಟ ಪಡುತ್ತಿರುವೆ ಎಂದು ಕೇಳಿದಾಗ ಆ ವ್ಯಕ್ತಿ, ನನ್ನ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದೇನೆ, ಏನೇ ಮಾಡಿದರೂ ಅದು ಯಶಸ್ಸು ಕಾಣುತ್ತಿಲ್ಲ. ಜೀವನವೇ ಸಾಕೆನಿಸುತ್ತಿದೆ. ನನ್ನ ಜೀವನದ ಬೆಲೆ ಏನೆಂದು ಅರ್ಥವಾಗುತ್ತಿಲ್ಲ ಎಂದು ದುಃಖೀ ಸುತ್ತಾ ಹೇಳಿದ. ಆಗ ಆ ಸನ್ಯಾಸಿ ತನ್ನ ಜೋಳಿಗೆಯಲ್ಲಿದ್ದ ಒಂದು ಕೆಂಪು ಕಲ್ಲನ್ನು ಕೊಟ್ಟು ನೀನು ಮಾರುಕಟ್ಟೆಗೆ ಹೋಗಿ ಇದರ ನಿಖರವಾದ ಬೆಲೆ ಏನೆಂದು ತಿಳಿದು ಬಾ. ನಾನು ಇಲ್ಲಿಯೇ ಕಾಯುತ್ತಿರುತ್ತೇನೆ. ಆದರೆ ಎಚ್ಚರ. ಇದನ್ನು ಯಾರಿಗೂ ಮಾರುವಂತಿಲ್ಲ ಎಂದು ಹೇಳಿ ಕಳುಹಿಸಿದ. ಆ ವ್ಯಕ್ತಿ ಮಾರುಕಟ್ಟೆಯಲ್ಲಿರುವ ಒಂದು ಹಣ್ಣಿನ ಅಂಗಡಿಗೆ ಹೋಗಿ ಕೇಳಿದಾಗ ಅಂಗಡಿಯವ 50 ಸೇಬುಹಣ್ಣು ಕೊಡಬಲ್ಲೆ ಎಂದ. ಅನಂತರ ತರಕಾರಿ ಮಾರುವವನ ಬಳಿ ಹೋಗಿ ಕೇಳಿದಾಗ ಒಂದು ಚೀಲ ಆಲೂಗಡ್ಡೆ ಕೊಡಬಲ್ಲೆ ಅಷ್ಟೇ ಎಂದ. ಬಳಿಕ ಅದೇ ಮಾರುಕಟ್ಟೆಯಲ್ಲಿದ್ದ ಚಿನ್ನದ ವ್ಯಾಪಾರದಲ್ಲಿ ಕೇಳಿದಾಗ ಆತ 50 ಲಕ್ಷ ರೂ. ಕೊಡಬಲ್ಲೆ ಎಂದು ಉತ್ತರಿಸಿದ.
ಅದಾದ ಬಳಿಕ ಆ ವ್ಯಕ್ತಿಗೆ ಒಂದುವೇಳೆ ವಜ್ರದ ವ್ಯಾಪಾರಿಗಳ ಬಳಿ ಹೋಗಿ ಕೇಳಿದರೆ ಇದರ ನಿಖರವಾದ ಬೆಲೆ ತಿಳಿಯಬಹುದು ಎಂದೆನಿಸಿತು. ಆಗ ವಜ್ರದ ವ್ಯಾಪಾರಿ ಗಳು ಈ ಕೆಂಪು ರತ್ನದ ಕಲ್ಲನ್ನು ಕೊಟ್ಟವರಾರು ನಿಮಗೆ ಎಂದು ಕೇಳಿದರು. ನನಗೆ ಇದರ ನಿಖರವಾದ ಬೆಲೆ ತಿಳಿಯಲು ಒಬ್ಬರು ಕೊಟ್ಟಿದ್ದಾರೆ ಎಂದು ಹೇಳಿದ ಆ ವ್ಯಕ್ತಿ. ವ್ಯಾಪಾರಿಗಳು ನಮ್ಮ ಹತ್ತಿರವಿರುವ ಎಲ್ಲ ಹಣವನ್ನು ಕೊಟ್ಟರೂ ಇದಕ್ಕೆ ಕಡಿಮೆಯೇ, ಇದಕ್ಕೆ ಬೆಲೆ ಕಟ್ಟಲಾಗದು.ಇದು ಅಮೂಲ್ಯ ರತ್ನವೆಂದು ಹೇಳಿದರು.
ಆ ವ್ಯಕ್ತಿ ಹಿಂದಿರುಗಿ ಬಂದು ಸನ್ಯಾಸಿಯ ಹತ್ತಿರ ನಡೆದದ್ದೆಲ್ಲವನ್ನೂ ವಿವರಿಸಿದ. ಆಗ ಆ ಸನ್ಯಾಸಿ, “ನಿನ್ನ ಜೀವನವೂ ಇಷ್ಟೇ! ಒಬ್ಬರಿಗೆ 50 ಹಣ್ಣಿಗೆ ಸಮಾನವಾದರೆ, ಇನ್ನೊಬ್ಬರಿಗೆ ಒಂದು ಚೀಲ ಆಲೂಗಡ್ಡೆ ಬೆಲೆಗೆ ಸಮ. 50 ಲಕ್ಷ ರೂ.ಗೆ ಸಮ ಮತ್ತೂಬ್ಬರಿಗೆ, ಬೆಲೆ ಕಟ್ಟಲಾಗದ ಅಮೂಲ್ಯ ರತ್ನಕ್ಕೆ ಸಮ. ನಿನ್ನ ಜೀವನ, ಜೀವನಕ್ಕೆ ಸರಿದಾರಿ, ಗುರಿ ತೋರುವ ವ್ಯಕ್ತಿ ಸಿಗುವವರೆಗೂ ತಾಳ್ಮೆಗೆಡಬೇಡವೆಂದೂ ಹೇಳಿ ಹೊರಟ ಹೋದ.
ಜೀವನವು ಇಷ್ಟೇ ಅಲ್ಲವೆ? ನಮಗೆ ಸರಿದಾರಿ ತೋರುವ ವ್ಯಕ್ತಿ, ಗುರು ಸಿಗುವವರೆಗೂ ನಾವು ತಾಳ್ಮೆಯಿಂದ ಧೈರ್ಯವಾಗಿ ಒಳ್ಳೆಯ ಸಮಯ, ಒಳ್ಳೆಯ ಕಾಲ ಬರುವವರೆಗೂ ಕಾಯಬೇಕು. ಅದಕ್ಕಾಗಿ ಯೋಗ್ಯರನ್ನು ಹುಡುಕುತ್ತಿರಬೇಕು.
ಜತೆಗೆ ಸತತ ಪರಿಶ್ರಮ, ಶ್ರದ್ಧೆ, ಪ್ರಯತ್ನವಿದ್ದರೆ ಮಾತ್ರ ನಾವು ನಮ್ಮ ಬದುಕಿನ ನಿಜವಾದ ಬೆಲೆ ಏನೆಂದು ತಿಳಿದುಕೊಳ್ಳಲು ಸಾಧ್ಯ.
-ಗೀತಾ ಸಣ್ಣಕ್ಕಿ, ಹರಿಹರಪುರ