ಚಿತ್ರದುರ್ಗ: ಗಂಡು ಹೇಳಿದಂತೆ ಹೆಣ್ಣು ಕೇಳಬೇಕೆಂದು ಯಾವ ಕಾನೂನಿನಲ್ಲೂ ಇಲ್ಲ. ಗಂಡು-ಹೆಣ್ಣು ಇಬ್ಬರೂ ಸರಿಸಮಾನರು ಎಂದು ಹಿರಿಯ ನ್ಯಾಯವಾದಿ ಡಿ.ಕೆ. ಶೀಲಾ ಹೇಳಿದರು. ನಗರದ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕೋಶ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವೃತ್ತಿ ದೊಡ್ಡದು ಮತ್ತು ಚಿಕ್ಕದಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಪ್ರಾಮುಖ್ಯತೆ ಹೊಂದಿರುತ್ತಾರೆ. ಮಹಿಳಾ ಸಬಲೀಕರಣ ಇದು ಒಂದು ಕುಟುಂಬಕ್ಕೆ ಸಂಬಂ ಧಿಸಿದ್ದಲ್ಲ, ಇಡೀ ದೇಶಕ್ಕೆ ಸಂಬಂಧಿಸಿದ್ದು. ಮಹಿಳೆ ಮತ್ತು ಪುರುಷರು
ಸಮಾನವಾಗಿ ಕೆಲಸ ಮಾಡಿದರೆ ಕುಟುಂಬ ಅಥವಾ ದೇಶ ಅಭಿವೃದ್ಧಿ ಆಗಲು ಸಾಧ್ಯ.
ಸ್ವಾತಂತ್ರ್ಯಾ ನಂತರ ಮಹಿಳೆಯರಿಗೆ ಕಾನೂನುಗಳು ಜಾರಿಗೆ ಬಂದರೂ ಹೆಚ್ಚು ಪರಿಣಾಮ ಬೀರಲಿಲ್ಲ. ಹೆಣ್ಣು ಮಗು 18 ವರ್ಷದ ಒಳಗೆ ಇದ್ದು ಬಾಲ್ಯ ಜೀವನ ನೀಡದಿದ್ದರೆ ಅವರಿಗೆ ಮಹಿಳಾ ಕಲ್ಯಾಣ ಇಲಾಖೆಯಿಂದ ಸರ್ಕಾರದ ಹಣದಲ್ಲಿ ಬೇಕಾದ ಸೌಲಭ್ಯ ನೀಡಿ ಬೆಳೆಸಬೇಕು ಎಂದರು.
ದೇಶದಲ್ಲಿ ಕಾನೂನಿನ ಪ್ರಕಾರ ಮಹಿಳಾ ಮತ್ತು ಪುರುಷರಿಗೆ ಸಮಾನ ಅವಕಾಶವಿದೆಯೇ ಎಂದು ಪ್ರಶ್ನಿಸಿದ ಅವರು, ಮೊದಲು ತಮ್ಮ ಕುಟುಂಬದಲ್ಲಿ ಮಗಳು ಮತ್ತು ಸೊಸೆಯನ್ನು ಒಂದೇ ರೀತಿಯಲ್ಲಿ ಕಾಣಬೇಕು. ಯಾರೇ ತಪ್ಪು ಮಾಡಿದರೂ ಒಂದೇ ರೀತಿಯಲ್ಲಿ ನೋಡಬೇಕು.
ಕೆಲವೊಂದು ಹಳೆಯ ಪದ್ಧತಿಗಳನ್ನು ಮುಂದುವರೆಸಿಕೊಂಡು ಬರುತ್ತಿರುವುದು ನೋವಿನ ಸಂಗತಿ. ಕುಟುಂಬದಲ್ಲಿ ಗಂಡಸರು
ತಪ್ಪು ಮಾಡಿದರೆ ಮಹಿಳೆಗೆ ಬೈಯುತ್ತಾರೆ. ಅದನ್ನು ಬಿಟ್ಟು ನೇರವಾಗಿ ಗಂಡುಮಕ್ಕಳಿಗೇ ಬೈಯಬೇಕು. ತಪ್ಪು ಮಾಡಿದ ಪುರುಷನನ್ನು ಸರಿ ದಾರಿಗೆ ತರುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಹಿಳಾ ಕೋಶ ಸಂಚಾಲಕಿ ಎಸ್.ಎಂ. ಭ್ರಮಾರಂಬ ಮಾತನಾಡಿ, ವಿದ್ಯಾರ್ಥಿಗಳನ್ನು ಪಠ್ಯ ಹೊರತುಪಡಿಸಿ ಬೆಳೆಸಬೇಕು. ಕೇವಲ ಪಠ್ಯಕ್ಕೆ ಒತ್ತು ನೀಡದೆ ಪಠ್ಯೇತರ ಚಟುವಟಿಕೆಯಿಂದ ವಿಶಾಲ ಮನೋಭಾವನೆಯಿಂದ ಯೋಚನೆ ಮಾಡಲು ಸಹಕಾರಿ ಆಗಲಿದೆ ಎಂದರು.
ಮಹಿಳೆ ಮುನ್ನಡೆದರೆ ಕುಟುಂಬ ಹಾಗೂ ರಾಷ್ಟ್ರ ಮುನ್ನಡೆಯುತ್ತದೆ. ಮಹಿಳೆ ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮಹಿಳೆ ಎಲ್ಲ ರಂಗಗಳಲ್ಲಿ ಪ್ರವೇಶ ಮಾಡಿ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು. ಹಿರಿಯ ಉಪನ್ಯಾಸಕ ರಾಮ ರಾವ್, ಸಂಚಾಲಕ ಜಿ.ಬಿ. ಸುರೇಶ್, ಪ್ರಾಧ್ಯಾಪಕಿ ಮಂಜುಳ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳವುದಕ್ಕಿಂತ ಮೊದಲು ಪ್ರೀತಿ ಪ್ರೇಮ ಎಂದು ಜೀವನ ಹಾಳು ಮಾಡಿಕೊಳ್ಳಬೇಡಿ. ಸಾಧನೆ ಮಾಡಿದ ನಂತರ ಪ್ರೀತಿ, ಪ್ರೇಮ, ಮದುವೆ ಬಗ್ಗೆ ಚಿಂತನೆ ಮಾಡಿ.
ಡಿ.ಕೆ. ಶೀಲಾ,ಹಿರಿಯ ನ್ಯಾಯವಾದಿ