Advertisement
ಎಲ್ಲರಿಗೂ ಗೆಲುವಾದೀತು ಎನ್ನುವ ಖಾತರಿಯೂ ಇಲ್ಲ. ಆಯುಷ್ಯವಿಡೀ ಹಗಲಿರುಳು ದುಡಿದು ಸಾಕಷ್ಟು ಪರಿಶ್ರಮ ಪಟ್ಟರೂ ಅನಿರೀಕ್ಷಿತವಾಗಿ ಸಾಲು ಸಾಲು ಸೋಲುಗಳನ್ನು ಎದುರಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಗೆಲ್ಲಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಿಲ್ಲ. ಸಾವಿರ ಸಲ ಸೋತವರಿಗೂ ಒಂದು ಸುಂದರ ಬದುಕಿದೆ ಎನ್ನುವುದು ನನ್ನ ವಾದ.
Related Articles
Advertisement
ವರ್ತಮಾನದ ಪ್ರಪಂಚದಲ್ಲಿ ಸಾಲು ಸಾಲಾಗಿ ಬರುವ ಸೋಲುಗಳು ನಮ್ಮ ಜೀವನದ ಸವಾಲುಗಳಲ್ಲ. ಅದಕ್ಕಿಂತ ಮಿಗಿಲಾಗಿ ವಿಭಿನ್ನ ಮನಸ್ಥಿತಿಯುಳ್ಳ ಜನರುಗಳ ಮಧ್ಯೆ ಬೆಳೆದು ಬದುಕು ಕಟ್ಟಿಕೊಳ್ಳಬೇಕಾಗಿರುವುದು ನನ್ನ ಪ್ರಕಾರ ಈಗಿನ ಯುವ ಸಮುದಾಯದ ದೊಡ್ಡ ಸವಾಲು. ವೈಯಕ್ತಿಕ ಲಾಭಕ್ಕಾಗಿ ಸ್ವಾರ್ಥದಿಂದ ಬದುಕುವ ಜನಗಳ ಮಧ್ಯೆ ನಾವು ಮನುಷ್ಯರಾಗಿ ಸಾಮರಸ್ಯದಿಂದ ಪರಸ್ಪರ ಒಟ್ಟುಗೂಡಿ ಬದುಕುವುದು ನಮ್ಮ ಮೂಲ ಸೂತ್ರ ಆಗಬೇಕು. ಅಂದಾದಾಗ ಖುಷಿ ಸಂತೋಷ ನೆಮ್ಮದಿಯಿಂದ ಬದುಕು ಸಮೃದ್ಧವಾಗುತ್ತದೆ.
ಪ್ರಸ್ತುತ ಕಾಲದಲ್ಲಿ ಎಲ್ಲವೂ ನಾವಂದುಕೊಂಡಂತೆ ಇಲ್ಲ ಎನ್ನುವ ವಾಸ್ತವವನ್ನು ನಾವು ಅರಿತುಕೊಳ್ಳಬೇಕು. ಒಬ್ಬ ವ್ಯಕ್ತಿಯನ್ನು ಅವರ ಜ್ಞಾನ, ಕೌಶಲ ಮತ್ತು ಸಾಮರ್ಥ್ಯದಿಂದ ಗುರುತಿಸದೇ ಅವರ ಧರ್ಮ, ಜಾತಿ, ಹಣ ಅಂತಸ್ತುಗಳಿಂದ ಅಳೆಯುವ ಪರಿಪಾಠ ಚಲಾವಣೆಯಲ್ಲಿರುವುದು ವಿಷಾದನೀಯ. ತಲೆ ತಲಾಂತರಗಳಿಂದ ರೂಢಿಯಲ್ಲಿರುವ ಜಾತೀಯತೆಯ ಸಮಸ್ಯೆ ಕ್ರಮೇಣ ಕಡಿಮೆಯಾಗಿದೆ ಎಂದು ಭಾವಿಸಿದರೂ ಅದರ ಆಳ ಮಾತ್ರ ಲೆಕ್ಕಕ್ಕೆ ಸಿಗದು.
ಎಲ್ಲರಿಗೂ ತಿಳಿದಿರುವ ಸತ್ಯವೇ. ಅದಕ್ಕಿಂತಲೂ ನೋವಿನ ಸಂಗತಿ ಎಂದರೆ ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡುವ ಮನಸ್ಥಿತಿಯ ಮಹಾನುಭಾವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು. ಆರ್ಥಿಕವಾಗಿ ಸಧೃಡವಿರುವವರಿಗೆ ಇರುವ ಗೌರವ ಮತ್ತು ಬೆಲೆ ಬಡಪಾಯಿಗಳಿಗೆ ಸಿಗುವುದು ವಿರಳ. ಬಹಳಷ್ಟು ಜನರು ದುಡ್ಡು ಇದ್ದವರಿಗಷ್ಟೇ ಮಣೆ ಹಾಕುವುದು ಗೋಚರಿಸುತ್ತದೆ.
ಅಂದರೆ ಪ್ರಾಮಾಣಿಕತೆ ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳಿಗಿಂತಲೂ ಹಣ ಅಂತಸ್ತಿಗೆ ಪ್ರಾಶಸ್ತ್ಯ ಇರುವುದು ಸತ್ಯ ಸಂಗತಿ. ದೊಡ್ಡವರು ಎನಿಸಿಕೊಂಡವರು ಬಡಪಾಯಿಗಳನ್ನು ಬಲು ತುತ್ಛವಾಗಿ ಕಾಣುವುದು ಈ ಕಾಲಮಾನದ ವಿಪರ್ಯಾಸ.
ಪ್ರತಿಯೊಬ್ಬರಿಗೂ ಬದುಕಲು ನೂರು ದಾರಿಗಳಿವೆ. ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಬೇಕು ಅಷ್ಟೇ. ಜೀವನದ ಅನಿಶ್ಚಿತ ಸವಾಲುಗಳನ್ನು ಮೆಟ್ಟಿ ನಿಂತು ವೈಫಲ್ಯಗಳನ್ನು ಅವಕಾಶಗಳಾಗಿ ಬದಲಾಯಿಸಬೇಕು ಮತ್ತು ಮುನ್ನಡೆಯಬೇಕು. ಅದೇ ನಿಜವಾದ ಸಾರ್ಥಕ ಬದುಕು.
ಹುಸೇನಸಾಬ ವಣಗೇರಿ
ವಿವಿ, ಧಾರವಾಡ