Advertisement

ಶೆಟ್ಟರ ಮಾಡಿದ ಅಭಿವೃದ್ಧಿ ಬಹಿರಂಗ ಪಡಿಸಲಿ

04:45 PM Jun 10, 2017 | Team Udayavani |

ಹುಬ್ಬಳ್ಳಿ: ಸಚಿವರಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಕಳೆದ 25 ವರ್ಷಗಳಿಂದ ತಾವು ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ಮಹತ್ವದ ಅಭಿವೃದ್ಧಿ ಕಾರ್ಯಗಳೇನು ಎಂಬುದನ್ನು ಬಹಿರಂಗಪಡಿಸಲಿ.

Advertisement

ಈ ಬಗ್ಗೆ ಚರ್ಚೆಗೆ ವೇದಿಕೆ ಸಿದ್ಧಪಡಿಸಲಿ ಎಂದು ಕೆಪಿಸಿಸಿ ವೈದ್ಯಕೀಯ ವಿಭಾಗದ ಉಪಾಧ್ಯಕ್ಷ ಡಾ| ಮಹೇಶ ನಾಲವಾಡ ಸವಾಲು ಹಾಕಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿನಗರದ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಅನೇಕ ಅಭಿವೃದ್ಧಿ ಯೋಜನೆಗಳು ಜಾರಿಯಾಗಿ ಕಾಮಗಾರಿ ಕೈಗೊಂಡಿದ್ದರೂ ಜಗದೀಶ ಶೆಟ್ಟರ ಹಾಗೂ ಸಂಸದ ಪ್ರಹ್ಲಾದ ಜೋಶಿ ಎಲ್ಲ ಯೋಜನೆಗಳನ್ನು ತಾವೇ ಮಾಡಿದ್ದಾಗಿ ಬಿಂಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. 

ಅವಳಿನಗರದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್‌ ಸರಕಾರ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸಿಕೊಳ್ಳಲಾರದೆ ಹಾಗೂ ಸಾರ್ವಜನಿಕರು ಎಲ್ಲಿ ನಮ್ಮನ್ನು ಪ್ರಶ್ನಿಸುತ್ತಾರೋ ಎಂಬ ಆತಂಕದಿಂದ ಕಾಮಗಾರಿ ನಡೆದ ಸ್ಥಳಗಳಲ್ಲೆಲ್ಲ ತಮ್ಮ ಬ್ಯಾನರ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ.

ಉನ್ನತ ಸ್ಥಾನ ಹೊಂದಿರುವ ಜಗದೀಶ ಶೆಟ್ಟರ ಅವರು ಸುಳ್ಳು ಹೇಳಿ ಜನರನ್ನು ನಂಬಿಸುವ ಕಾರ್ಯಕ್ಕೆ ಮುಂದಾಗಿರುವುದು ಶೋಭೆ ತರದು. ಇನ್ನಾದರೂ ಅವರು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಬಿಡಲಿ ಎಂದರು. ತೋಳನಕೆರೆಯಲ್ಲಿ ಕೈಗೊಳ್ಳಲಾಗಿರುವ ಹೂಳೆತ್ತುವ, ಅಭಿವೃದ್ಧಿ ಕಾಮಗಾರಿಗಳನ್ನು ರಾಜ್ಯ ಸರಕಾರದ ಸಣ್ಣ ನೀರಾವರಿಯಿಂದ ಕೈಗೊಳ್ಳಲಾಗುತ್ತಿದೆ.

ಅದೇ ರೀತಿ ಹೆಗ್ಗೇರಿಯಲ್ಲಿ ಡಾ| ಅಂಬೇಡ್ಕರ ಮೈದಾನವನ್ನು ಸರಕಾರದ ವಿಶೇಷ ಅನುದಾನ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಶೆಟ್ಟರ ಅವರು ತಮ್ಮ ಅನುದಾನದಿಂದಲೇ ಆಗಿವೆ ಎಂದು ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಬ್ಯಾನರ್‌ ಹಾಕಿಕೊಳ್ಳುತ್ತಿದ್ದಾರೆ. ಜೊತೆಗೆ ತೋಳನಕೆರೆ ಹೂಳೆತ್ತುವ ಕೆಲಸಕ್ಕೂ ಸಹಿತ ಪ್ರಧಾನಿ ಫೋಟೋ ಬಳಸಿಕೊಂಡಿದ್ದಾರೆ. 

Advertisement

ಇಂತಹ ಅನಿವಾರ್ಯತೆ ಅವರಿಗೇನಿತ್ತು. ಸಾಮಾನ್ಯ ಕೆಲಸಕ್ಕೂ ಪ್ರಧಾನಿ ಫೋಟೋ ಬಳಸುತ್ತಿರುವುದು ಖಂಡನೀಯ ಎಂದರು. ಶೆಟ್ಟರ ಅವರು ತಮ್ಮ 25 ವರ್ಷಗಳ ಅವಧಿಯಲ್ಲಿ ಎಸ್‌ಎಫ್‌ಸಿ ಅಡಿ 45 ಕೋಟಿ  ರೂ. ಮಾತ್ರ ಸಾಮಾನ್ಯ ಫಂಡ್‌ ತಂದಿದ್ದಾರೆ ವಿನಃ ತಮ್ಮ ಅನುದಾನದಿಂದ ನಗರಕ್ಕೆ ಹೆಚ್ಚಿಗೆ ಅನುದಾನ ಏನನ್ನೂ ತಂದಿಲ್ಲ. ಪ್ರತಿದಿನ 25-30 ಕಡೆ ಭೂಮಿಪೂಜೆ ಮಾಡುವ ಮೂಲಕ ಗುದ್ದಲಿಪೂಜೆ ಶೆಟ್ಟರ ಆಗಿದ್ದಾರೆ. 

ಮೌಡ್ಯತೆ ಬಗ್ಗೆ ಮಾತನಾಡುವ ಅವರು ಮೊದಲು ಗುದ್ದಲಿಪೂಜೆ ಮಾಡುವುದನ್ನು ಬಿಡಲಿ ಎಂದರು. ನಾನು ಪಕ್ಷದಿಂದ ಮುಂಬರುವ ಚುನಾವಣೆಯಲ್ಲಿ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಟಿಕೆಟ್‌ ಕೊಡುವುದು- ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದರು. ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ವಕ್ತಾರ ವಸಂತ ಲದವಾ, ಪಾಲಿಕೆ ಸದಸ್ಯ ಮೋಹನ ಹಿರೇಮನಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next