Advertisement

ಡಾ.ಪಾಪು ಹೆಸರಲ್ಲಿ ಸಂಸ್ಥೆ ಸ್ಥಾಪನೆಯಾಗಲಿ

06:37 AM Jan 15, 2019 | Team Udayavani |

ಧಾರವಾಡ: ‘ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಮೂಲಕ ಹಿರಿಯ ಪತ್ರಕರ್ತ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಿ ಆ ಮೂಲಕ ವಿನೂತನ ಕಾರ್ಯಕ್ರಮವನ್ನು ಸರ್ಕಾರದಿಂದ ನಡೆಸಿ ಅವರ ಶತಮಾನೋತ್ಸವಕ್ಕೆ ಸರ್ಕಾರ ಗೌರವ ಕೊಡಬೇಕೆಂದು’ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಇಲ್ಲಿನ ಡಾ|ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಜನ್ಮ ಶತಮಾನೋತ್ಸವ ಸಮಿತಿ ಹಮ್ಮಿಕೊಂಡಿದ್ದ ಡಾ|ಪಾಪು-100 ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಮಾಧ್ಯಮಗಳಿಗೆ ನಾಡೋಜ ಪಾಪು ಅವರ ಜೀವನವೇ ಮಾರ್ಗದರ್ಶನವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳು ಮಾಧ್ಯಮ ಕ್ಷೇತ್ರದಲ್ಲೂ ಆಗಿವೆ. ಹೀಗಾಗಿ ಇಂದು ಉತ್ತಮ ಸಮಾಜ ನಿರ್ಮಾಣಕ್ಕೆ ಮಾಧ್ಯಮಗಳಿಗೆ ಒಂದಿಷ್ಟು ಮಾರ್ಗದರ್ಶನ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನಾಡೋಜ ಪಾಪು ಅವರ ಹೆಸರಿನಲ್ಲಿ ಸಂಸ್ಥೆಯೊಂದನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಮೂಲಕ ಹುಟ್ಟು ಹಾಕಿ ಅದರಿಂದ ವಿನೂತನ ಕಾರ್ಯಕ್ರಮವನ್ನು ಸರ್ಕಾರದ ಮೂಲಕ ನಡೆಸಬೇಕಿದೆ ಎಂದರು.

ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಸಚಿವ ಸಿ.ಎಸ್‌.ಶಿವಳ್ಳಿ ಅವರು ಇದ್ದು, ಅವರು ಸರ್ಕಾರಕ್ಕೆ ಈ ವಿಚಾರವನ್ನು ತಿಳಿಸಬೇಕು. ಜತೆಗೆ ಈ ಭಾಗದ ಹಿರಿಯರು, ಶಿಕ್ಷಣ ತಜ್ಞರು ಯಾವ ಕಾರ್ಯಕ್ರಮ ಮಾಡಬಹುದು ಎನ್ನುವ ಕುರಿತು ಸಲಹೆ ನೀಡಿದರೆ, ಅದನ್ನು ಸರ್ಕಾರಕ್ಕೆ ಮುಟ್ಟಿಸುವುದಾಗಿ ಹೊರಟ್ಟಿ ಹೇಳಿದರು.

ಹಿರಿಯ ಚಿಂತಕ ಗೋ.ರೂ.ಚೆನ್ನಬಸಪ್ಪ ಮಾತನಾಡಿ, ನಾಡೋಜ ಪಾಪು ಅವರು ತಮ್ಮ ಬರವಣಿಗೆಗಳ ಮೂಲಕ ಸಮಾಜವನ್ನು ತಿದ್ದಿದವರು. ಅಪ್ರಬುದ್ಧವಾಗಿರುವ ಎಲ್ಲದನ್ನೂ ಕಠೊರವಾಗಿ ಟೀಕಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಅವರ ನಡೆ ಮತ್ತು ಜೀವನ ನಿಜಕ್ಕೂ ಸಾರ್ಥಕವಾಗಿದೆ. ಅವರು ಇನ್ನಷ್ಟು ವರ್ಷ ಬಾಳಲಿ ಎಂದು ಹಾರೈಸಿದರು.

ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಮಾತನಾಡಿ, ಪಾಪು ಅವರು ಪತ್ರಿಕೋದ್ಯಮ ಮಾತ್ರವಲ್ಲ, ಆರೋಗ್ಯದ ವಿಚಾರದಲ್ಲಿಯೂ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ. ಅವರನ್ನು ನೋಡಿ ಉತ್ತಮ ಆರೋಗ್ಯ ಹೇಗೆ ಇಟ್ಟುಕೊಳ್ಳಬಹುದು ಎಂಬುದನ್ನು ಎಲ್ಲರೂ ಕಲಿಯಬೇಕಿದೆ ಎಂದರು.

Advertisement

ಗದಗಿನ ತೋಂಟದಾರ್ಯ ಮಠದ ಡಾ|ತೋಂಟದ ಸಿದ್ದರಾಮ ಸ್ವಾಮೀಜಿಗಳು ಹಾಗೂ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಹಾಲಿ ಶಾಸಕರು, ಮಾಜಿ ಶಾಸಕರು, ಸಚಿವರು, ಮಾಜಿ ಸಚಿವರು ಸೇರಿ ಉದ್ಯಮಿಗಳು ಹಾಗೂ ನಾಡೋಜ ಪಾಪು ಕುಟುಂಬ ಮತ್ತು ಬಂಧು ಬಳಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾಪು ಅವರನ್ನು ಸನ್ಮಾನಿಸಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next