Advertisement

ಧಾರವಾಡದಲ್ಲೇ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿ

09:53 AM Nov 02, 2019 | Suhan S |

ಧಾರವಾಡ: ಕರ್ನಾಟಕ ಏಕೀಕರಣ ಚಳವಳಿಗೆ ಚೈತನ್ಯ ತುಂಬಿ ಶಕ್ತಿ ಕೇಂದ್ರವಾಗಿದ್ದ ಧಾರವಾಡದಲ್ಲಿಯೇ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು. ಕವಿಸಂನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ವೈವಿಧ್ಯಮಯ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಹಲ್ಮಿಡಿ ಶಾಸನದಿಂದ ಈವರೆಗೆ 30 ಸಾವಿರ ಶಾಸನ ಲಭ್ಯವಾಗಿದೆ. ಇಂತಹ ಕನ್ನಡ ಭಾಷೆಯ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಹೋರಾಟ ನಡೆದಾಗ ಮನಮೋಹನಸಿಂಗ್‌ ಅವರಲ್ಲಿ ತಮಿಳಿನಂತೆ ಕನ್ನಡಕ್ಕೂ ಮಾನ್ಯತೆ ನೀಡುವಂತೆ ಕೇಳಿದ್ದೆ. ಇದಕ್ಕೆ ಸ್ಪಂದಿಸಿದ್ದ ಅವರು, ಕ್ಯಾಬಿನೆಟ್‌ ನಿರ್ಣಯ ಇಲ್ಲದೆಯೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿದ್ದರು. ಆದರೆ ಅದರ ಉಪಯೋಗ ಮಾತ್ರ ಈವರೆಗೂ ಮಾಡಿಕೊಂಡಿಲ್ಲ. ಆ ನಂತರ ಬಂದ ಸರಕಾರಗಳಿಗೂ ನಾನು ಪತ್ರ ಬರೆದಿದ್ದೆ. ಆದರೆ ಏನೂ ಆಗಲಿಲ್ಲ. ಕೇಂದ್ರದಿಂದ ಕೊಟ್ಟ ಹಣ ಕೂಡ ಉಪಯೋಗ ಮಾಡಲಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಬೈರನಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆ ಧಾರವಾಡಕ್ಕೆ ಬರಬೇಕು ಎನ್ನುವುದು ಪಾಪು ಅವರ ಕನಸಾಗಿತ್ತು. ಆದರೆ ಆ ಕನಸು ಇನ್ನೂ ನನಸಾಗಿಲ್ಲ. ಈ ಹಿನ್ನೆಲೆ ಭಾಷಾ ಅಧ್ಯಯನ ಕೇಂದ್ರ ಧಾರವಾಡಕ್ಕೆ ಆಗಮಿಸುವಂತೆ ಹೋರಾಟ ಮಾಡಬೇಕು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ನೂತನ ಸದಸ್ಯ ಡಾ| ಜಿನದತ್ತ ಹಡಗಲಿ, ಸಂಘದ ಹಿರಿಯ ಸದಸ್ಯರಾದ ಡಾ| ವೀರಣ್ಣ ರಾಜೂರ, ಡಾ| ಶೈಲಜಾ ಬೆಟಗೇರಿ, ಷಣ್ಮುಖ ಅಡನೂರ, ಆರ್‌.ಬಿ. ವನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಬಳ್ಳಾರಿಯ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಸದಸ್ಯರು ತೊಗಲು ಗೊಂಬೆಯಾಟ ಪ್ರಸ್ತುತಪಡಿಸಿದರು. ಪ್ರಕಾಶ ಉಡಕೇರಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next