ಇರುವ ಭಾಗ್ಯವ ನೆನೆದು ಬಾರೆ ನೆಂಬುದ ಬಿಡು..ಹರುಷಕ್ಕಿದೆ ದಾರಿ…
ಡಿವಿಜಿ ಯವರ ಈ ಮಾತು ಅತ್ಯಂತ ಮಾರ್ಮಿಕವಾದುದು.
ನಾವೆಲ್ಲರೂ ನಮ್ಮಲ್ಲಿರುವುದರಲ್ಲೇ ಖುಷಿ ಪಡುವುದನ್ನು ಬಿಟ್ಟು ನಮ್ಮಲ್ಲಿಲ್ಲದಿರುವ ವಸ್ತುಗಳ ಹುಡುಕಾಟದಲ್ಲಿ ಕಾಲ ಕಳೆಯುತ್ತೇವೆ. ಸಿಗದಿದ್ದಾಗ ಹತಾಶ ರಾಗುತ್ತೇವೆ. ನೆಮ್ಮದಿ, ಸಂತೋಷಗಳನ್ನು ಕಳೆದುಕೊಳ್ಳುತ್ತೇವೆ. ಹೀಗಾದಾಗ ಇರುವುದನ್ನೂ ಅನುಭವಿ ಸಲಾಗದೆ ಒದ್ದಾಡಬೇಕಾಗುತ್ತದೆ.
ತನ್ನ ಐಷಾರಾಮಿ ಜೀವನದಲ್ಲಿ ನೆಮ್ಮದಿ ಕಾಣದ ಅರಸನೊಬ್ಬ ತನ್ನ ಅರಮನೆಯ ಪಕ್ಕದಲ್ಲಿರುವ ಗುಡಿಸಲಿನಲ್ಲಿ ಸಂತಸದಿಂದ ವಾಸಿಸುತ್ತಿದ್ದ ಬಡವನನ್ನು ಕಂಡು ಆಶ್ಚರ್ಯಗೊಂಡ. ಎಲ್ಲ ಐಶ್ವರ್ಯಗಳು ಇರುವ ತನಗೇ ಇಲ್ಲದ ನೆಮ್ಮದಿ ಈ ಗುಡಿಸಲಿನಲ್ಲಿರುವ ಬಡವನಿಗೆ ಇರಲು ಹೇಗೆ ಸಾಧ್ಯ ಅಂತ ಯೋಚಿಸತೊಡಗಿದ. ಮಂತ್ರಿಯನ್ನು ಕರೆದು ಈ ಕುರಿತು ತಿಳಿದುಕೊಂಡು ಬರಲು ಹೇಳಿದ. ಬಡವನ ನೆಮ್ಮದಿಯ ಕಾರಣವನ್ನು ತಿಳಿಯುವ ನೆಪದಲ್ಲಿ ಮಂತ್ರಿ ಆತನ ನೆಮ್ಮದಿ ಕೆಡಿಸುವ ನಿರ್ಧಾರಕ್ಕೆ ಬಂದು ಅದರಂತೆ ತನ್ನ ಕುತಂತ್ರಿ ಬುದ್ಧಿಯನ್ನು ತೋರಿಸಿದ.
ಮಂತ್ರಿ ರಾತೋರಾತ್ರಿ ಬಡವನ ಗುಡಿ ಸಲಿನ ಅಂಗಳದಲ್ಲಿ ಚಿನ್ನದ ನಾಣ್ಯಗಳು ತುಂಬಿದ ಚೀಲವೊಂದನ್ನು ಇರಿಸಿ ಬಂದ. ಮರುದಿನ ಬೆಳಗೆದ್ದು ತನ್ನ ಅಂಗಳದಲ್ಲಿ ಬಿದ್ದಿರುವ ಚೀಲದಲ್ಲಿ ಏನಿದೆ ಎಂದು ನೋಡಿದ ಬಡವನಿಗೆ ಚಿನ್ನದ ನಾಣ್ಯ ಕಂಡು ಅಚ್ಚರಿಯೋ ಅಚ್ಚರಿ. ಚೀಲದಲ್ಲಿದ್ದ ನಾಣ್ಯಗಳನ್ನು ಎಣಿಸತೊಡಗಿದ..ಸರಿಯಾಗಿ ತೊಂಭತ್ತೂಂಭತ್ತು ಚಿನ್ನದ ನಾಣ್ಯಗಳು!! ಖುಷಿಯೋ ಖುಷಿ.. ಹೆಂಡತಿಯನ್ನು ಕರೆದು ಕುಣಿದಾಡಿದ.. ಆದರೆ ಅದರ ಜತೆಗೆ ಮೂಲೆಯಲ್ಲೊಂದು ಅಸಮಾಧಾನ ಹುಟ್ಟಿಕೊಂಡಿತು. ಇನ್ನೂ ಒಂದು ನಾಣ್ಯವಿದ್ದಿದ್ದರೆ ಸರಿಯಾಗಿ ನೂರು ನಾಣ್ಯಗಳಾಗುತ್ತಿತ್ತು ಎಂಬ ಭಾವನೆ ಆತನ ಮನಸ್ಸನ್ನು ಕಾಡತೊಡಗಿತು. ಆ ಒಂದು ನಾಣ್ಯವನ್ನು ಸೇರಿಸುವುದಕ್ಕಾಗಿ ರಾತ್ರಿ ಹಗಲು ಯೋಚಿ ಸತೊಡಗಿದ. ಹೆಂಡತಿ, ಮಕ್ಕಳಲ್ಲೂ ಅದನ್ನೇ ಹೇಳತೊಡಗಿದ. ಇಲ್ಲದ ನಾಣ್ಯಕ್ಕಾಗಿ ಊಟ ತಿಂಡಿ ಬಿಟ್ಟು ಚಿಂತಿಸಿದ ಆತ ನೆಮ್ಮದಿ, ನಿದ್ದೆ ಕಳೆದುಕೊಂಡ. ತನ್ನ ಲೆಕ್ಕವೇನಾದರೂ ತಪ್ಪಿರಬಹುದೇನೋ ಎಂದು ಸಿಕ್ಕಿರುವ ನಾಣ್ಯಗಳನ್ನು ಮತ್ತೆ ಮತ್ತೆ ಎಣಿಸತೊಡಗಿದ. ಎಲ್ಲಾದರೂ ಕಳೆದು ಹೋಗಿರಬಹುದೇನೋ ಎಂದು ಅಂಗಳದಲ್ಲೆಲ್ಲ ಹುಡುಕಾಡತೊಡಗಿದ. ಒಂದು ನಾಣ್ಯವನ್ನು ಹೇಗಾದರೂ ಹೊಂದಿಸಿ ಕೊಳ್ಳಬೇಕೆಂದು ದಿನವಿಡೀ ಯೋಚಿ ಸುತ್ತ ಆ ಕುಟುಂಬ ನೆಮ್ಮದಿ ಕಳೆದು ಕೊಂಡಿತು. ಹೆಂಡತಿ ಮಕ್ಕಳ ನಡುವೆ ಜಗಳ ಶುರುವಾಯಿತು. ಆತ ಎಲ್ಲರ ಮೇಲೂ ಸಿಟ್ಟಿನಿಂದ ರೇಗ ತೊಡ ಗಿದ. ಗುಡಿಸಲಿನ ನಗು ಮರೆಯಾಯಿತು. ಸಂತೋಷ ಸತ್ತು ಹೋಯಿತು. ಹಣ ಒಟ್ಟು ಮಾಡುವ ಪ್ರಯತ್ನದಲ್ಲಿ ಇರುವ ನಾಣ್ಯಗಳಿಂದ ಸಿಗಬಹುದಾದ ಸಂತಸವನ್ನೂ ಅನುಭವಿ ಸದೆ ಆತ ಹತಾಶನಾದ.
ಇರುವುದರಲ್ಲೇ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದ ಬಡವ ತನಗೆ ದೊರಕಿದ ಭಾಗ್ಯವನ್ನು ಅನುಭವಿಸದೆ, ಇಲ್ಲದಿರುವ ನಾಣ್ಯಕ್ಕಾಗಿ ಯೋಚಿಸುತ್ತ ನೆಮ್ಮದಿ ಕಳೆದುಕೊಂಡ ಹಾಗೆ ನಾವೆಲ್ಲರೂ ಅನೇಕ ಬಾರಿ ವರ್ತಿಸುತ್ತೇವೆ. ಇಲ್ಲದಿರುವುದರ ಕುರಿತು ಚಿಂತಿಸುತ್ತ ಕಾಲಕಳೆಯುತ್ತೇವೆ. ದುಃಖೀತರಾಗುತ್ತೇವೆ. ಅತಿಯಾಸೆಯೇ ನಮ್ಮ ದುಃಖಗಳಿಗೆ ಕಾರಣ. ಹಣ ಇಲ್ಲವೆಂದು ಕೊರಗು, ಶ್ರೀಮಂತಿಕೆ ಇಲ್ಲ ಎನ್ನುವ ಚಿಂತೆ, ಆಸ್ತಿ ಇಲ್ಲ ಅನ್ನುವ ದುಃಖ, ಅಧಿಕಾರ ಬೇಕಿತ್ತು ಎಂಬ ಆಸೆ.. ಹೀಗೆ ನಮ್ಮ ಚಿಂತೆಗಳಿಗೆ ಕಾರಣ ನೂರಾರು.
ಹಣ, ಆಸ್ತಿ, ಸಂಪತ್ತು ಅಧಿಕಾರ ಲಾಲಸೆಯಿಂದಾಗಿ ಕೊಲೆ, ದರೋಡೆ, ಹಿಂಸೆ, ಮೋಸಗಳು ನಾವು ದಿನನಿತ್ಯ ಕಾಣುವ ಘಟನೆಗಳು. ಎಷ್ಟು ಇದ್ದರೂ ತೀರದ ದಾಹದಿಂದಾಗಿ ನೆಮ್ಮದಿ ಕಳೆದುಕೊಳ್ಳುತ್ತೇವೆ. ಇರುವ ಸಂಪತ್ತಿನ ಸುಖವನ್ನು ಸರಿಯಾಗಿ ಅನುಭವಿ
ಸದೆ, ಇಲ್ಲದಿರುವುದನ್ನು ಪಡೆಯುವ ಹೋರಾಟದಲ್ಲಿ ಕಾಲ ಕಳೆದು ಹೋಗಿರುತ್ತದೆ. ಕಳೆದು ಹೋದ ಕಾಲವನ್ನು ಮತ್ತೆ ಪಡೆಯಲಾಗದು.
ಮತ್ತಷ್ಟು ಬೇಕು, ಇನ್ನಷ್ಟು ಬೇಕು ಎನ್ನುವ ತವಕದಿಂದ ಎದುರಿಗಿರುವ ಸುಖವನ್ನು ಅನುಭವಿಸದೆ ಒದ್ದಾಡುವು ದಕ್ಕಿಂತ ಇರುವುದರಲ್ಲಿಯೇ ನೆಮ್ಮದಿ ಕಾಣುವುದು ಸಂತಸದ ಜೀವನಕ್ಕಿರುವ ದಾರಿ.
- ವಿದ್ಯಾ ಅಮ್ಮಣ್ಣಾಯ, ಕಾಪು