Advertisement

ಇಬ್ರೂ ಖುಷಿಯಿಂದ ಪಾನಿಪುರಿ ತಿನ್ನೋಣ ನಾಳೆ ಬರ್ತೀಯಾ?

09:19 PM Jan 20, 2020 | mahesh |

ನಗರದಲ್ಲಿ ವ್ಯಸ್ತ ಸ್ನೇಹಿತನೇ,
ಸಾಂಪ್ರದಾಯಿಕ ಪ್ರೇಮಿಗಳಂತೆ ಗಿಡ, ಮರ, ನದಿ, ಕೊಳ್ಳ, ಹೂವು, ಹಣ್ಣು ಸೂರ್ಯ, ಚಂದ್ರ ,ನಕ್ಷತ್ರ ಎಂದು ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುತ್ತಾ ಸುತ್ತಾಡುವುದೇನೋ ಚೆಂದ. ಆದರೆ ಈಗೀಗ ಬೆಂಗಳೂರಷ್ಟೇ ಅಲ್ಲ ಕರ್ನಾಟಕದ ಪ್ರತಿ ಹಳ್ಳಿಯೂ ಬೆಂಗಳೂರೇ ಆಗುತ್ತಿರುವಾಗ, ನಿಸರ್ಗದ ಸೌಂದರ್ಯದ ಜೊತೆ ನಿಕಟವಾದ ಸಂಬಂಧವನ್ನು ಹೊಂದಲು ಸಾಧ್ಯವಾಗುತ್ತಿದೆಯೇ? ಇಲ್ಲ. ಎಲ್ಲವೂ ಕಾಂಕ್ರೀಟ್‌ ನಗರವಾಗಿ ಪರಿವರ್ತನೆಗೊಂಡು ಹಸಿರು ಎನ್ನುವುದೇ ನಾಶವಾಗಿದೆ. ಹೀಗಿರುವಾಗ ಗಿಡ ಮರ ಸುತ್ತೋದು ಎಲ್ಲಿಂದ? ಹೋಗಲಿ, ಎಲ್ಲ ಕಡೆ ಸಿಗುವ ಸೂರ್ಯ, ಚಂದ್ರ, ನಕ್ಷತ್ರಗಳನ್ನಾದರೂ ನೋಡೋಣ ಎಂದರೆ ನಮ್ಮದೇ ಲೋಕದಲ್ಲಿ ಮುಳುಗಿರುವ ನಮಗೆ ಅದರೆಡೆಗೆ ಪರಿವೆಯೇ ಇಲ್ಲ.ಆಧುನಿಕತೆಗೆ ಹೊಂದಿಕೊಂಡು ಇವನ್ನೆಲ್ಲ ಮರೆತಂತೆ ಭಾವ.

Advertisement

ಇರಲಿ, ಇಂಥದ್ದೇ ಪರಿಸರದಲ್ಲಿ ಪ್ರೀತಿ ಜೀವಂತವಾಗಿರಬೇಕು.ಎಲ್ಲೆಲ್ಲೂ ಕಾಣುವ ಕಾಂಕ್ರೀಟ್‌ ರಸ್ತೆ, ದೊಡ್ಡ ದೊಡ್ಡ ಕಟ್ಟಡಗಳು, ವಾಹನಗಳು, ಜಗಮಗಿಸುವ ವಿದ್ಯುತ್‌ ದೀಪಗಳು,ಅನಿಯಂತ್ರಿತ ಜನಜಂಗುಳಿ ಇವುಗಳಲ್ಲೇ ಸತ್ಯ, ಪ್ರೇಮ ತನ್ನ ಪಯಣವನ್ನು ಮುಂದುವರಿಸಬೇಕಿದೆ.ಆಧುನಿಕತೆ ಹೆಚ್ಚಿದಂತೆ ಸಂಬಂಧಗಳು ಹಳಸುತ್ತಿರುವಾಗ, ನಮ್ಮ ಪ್ರೀತಿ ಗಟ್ಟಿಯಾಗಿ ನಿಲ್ಲಬೇಕಿದೆ ಕಣೋ.

ಅನಿವಾರ್ಯ ಎಂಬ ಆಧುನಿಕತೆಗೆ ಒಗ್ಗಿಕೊಂಡು ಬೈಕ್ನಲ್ಲೋ, ಕಾರಿನಲ್ಲೋ ಸಿಕ್ಕ ವೇಳೆಯಲ್ಲಿ ನಾವಿಬ್ಬರೂ ಪಯಣಿಸಬೇಕು. ಕಣ್ಣಿಗೆ ಕಾಣುವ ಇವೇ ಬಹುಮಹಡಿ ಕಟ್ಟಡಗಳನ್ನ, ಸಿಮೆಂಟ್‌ ರಸ್ತೆಗಳನ್ನ, ರಸ್ತೆಗಂಟಿದ ಜಗಮಗಿಸುವ ವಿದ್ಯುತ್‌ ದೀಪಗಳನ್ನ, ಉಸಿರಾಡಲು ಜಾಗವನ್ನು ಕೊಡುತ್ತದೋ ಇಲ್ಲವೋ ಎನ್ನುವ ಜನಜಂಗುಳಿಯನ್ನು ಆನಂದಿಸಬೇಕಿದೆ. ಹಾಗೆಯೇ ಮಾಲ್‌ಗ‌ಳಿಗೆ ಭೇಟಿ ಕೊಟ್ಟು ದಿನಸಿ ಸಾಮಾನುಗಳನ್ನು ಕೊಂಡು ಇಷ್ಟದ ಆಹಾರವನ್ನು ಸೇವಿಸಬೇಕಿದೆ. ಜಗತ್ತೇ ಮರುಳಾದ ರೋಡ್‌ ಮೇಲಿನ ಆಹಾರವನ್ನು ಸವಿಯಬೇಕು ಕಣೋ. ಆರೋಗ್ಯ ಅನಾರೋಗ್ಯದ ಚಿಂತೆ ಇದ್ದದ್ದೇ. ಮನಸ್ಸಿನ ಖುಷಿಗೆ, ದೇಹ ಒಗ್ಗಿಕೊಳ್ಳುವ ಆಹಾರವಾದರೆ ಆಯ್ತು ಅಲ್ವೇನೋ?ಬಾ ಒಮ್ಮೆ ಖಡಕ್‌ ಪಾನಿಪುರಿ ತಿಂದು ಬಿಡೋಣ ಏನಂತಿ?

ಇಂತಿ ನಿನ್ನ ಸ್ನೇಹಿತೆ,

ಮಾಲಾ ಮ ಅಕ್ಕಿಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next