Advertisement

ಯುವಜನತೆಗೆ ಹೊಸ ದಶಕ ಮೀಸಲಿಡೋಣ: ಮೋದಿ

10:03 AM Dec 31, 2019 | sudhir |

ಹೊಸದಿಲ್ಲಿ: ಮುಂದಿನ ದಶಕ ಯುವಜನರದ್ದಾಗಿರಲಿದ್ದು, ಅವರು ಸಮಾಜದ ಅವ್ಯವಸ್ಥೆಗಳನ್ನು ಪ್ರಶ್ನಿಸುವಂಥವರಾಗಿರುತ್ತಾರೆ. ಹಾಗಾಗಿ 2020ರಿಂದ ಆರಂಭವಾಗುವ ಹೊಸ ದಶಕವನ್ನು ಮುಂದಿನ ಯುವ ಪೀಳಿಗೆಯ ಆಶೋತ್ತರಗಳನ್ನು ಪೂರೈಸಬಲ್ಲ ಸ್ವಸ್ಥ, ಗೊಂದಲ ಮುಕ್ತ ಮತ್ತು ಸುವ್ಯವಸ್ಥಿತ ಸಮಾಜವನ್ನು ಕಟ್ಟುವುದಕ್ಕಾಗಿ ಮೀಸಲಿಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.

Advertisement

ಆಕಾಶವಾಣಿಯಲ್ಲಿ ಅವರು ಪ್ರತಿ ತಿಂಗಳೂ ನಡೆಸಿಕೊಡುವ, 2019ರ ಕಟ್ಟಕಡೆಯ “ಮನ್‌ ಕೀ ಬಾತ್‌’ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ಪೀಳಿಗೆಯು ಲೋಪವಿಲ್ಲದ ವ್ಯವಸ್ಥೆಯನ್ನು ಖಂಡಿತ ಇಷ್ಟಪಡುತ್ತಾರೆ. ಸಮಾಜದಲ್ಲಿನ ಶಿಸ್ತನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ವ್ಯವಸ್ಥೆಯಲ್ಲಿ ಲೋಪಗಳು ಕಂಡರೆ ಅದನ್ನು ಧೈರ್ಯದಿಂದ ಪ್ರಶ್ನಿಸುತ್ತಾರೆ. ಯಾವುದೇ ಅರಾಜಕತೆಗೆ ಕಾರಣವಾಗುವ, ಸ್ವಜನ ಪಕ್ಷಪಾತ, ಜಾತೀವಾದ, ವಶೀಲಿಬಾಜಿ ಅಥವಾ ಲಿಂಗ ಅಸಮಾನತೆಗಳನ್ನು ಅವರು ಖಂಡಿಸುತ್ತಾರೆ. ಸ್ವಾಮಿ ವಿವೇಕಾನಂದರು ಯುವಜನರಲ್ಲಿನ ಶಕ್ತಿ, ಚಲನಶೀಲತೆ, ವ್ಯವಸ್ಥೆಯಲ್ಲಿ ಬದಲಾವಣೆ ತರುವಂಥ ಛಾತಿಗಳೇ ಆಧುನಿಕ ಭಾರತಕ್ಕೆ ಅಡಿಪಾಯ ಎಂದಿದ್ದರು. ಹಾಗಾಗಿ ಹೊಸ ದಶಕವು ದೇಶದ ಅಭಿವೃದ್ಧಿ, ಮಾತ್ರವಲ್ಲದೆ ಯುವಜನರ ಅಭಿವೃದ್ಧಿಗೂ ಕಾರಣವಾಗಲಿದೆ. ಅವರ ಸಮೂಹ ಶಕ್ತಿ ಏನೆಂಬುದನ್ನು ಜಗತ್ತಿಗೆ ಸಾಬೀತುಪಡಿಸುವಂಥ ದಶಕ ಇದಾಗಲಿದೆ ಎಂದರು.

ಮುಂಬರುವ 2020ನೇ ವರ್ಷ ಮತ್ತು ಆನಂತರದ ದಶಕ, ದೇಶದ ಜನತೆಯ ಆಶೋತ್ತರಗಳನ್ನು ಪೂರೈಸಿ, ಅವರಲ್ಲಿ ಹೊಸ ಚೈತನ್ಯ, ಹೊಸ ಉತ್ಸಾಹ ಮತ್ತು ಹೊಸ ಹುರುಪನ್ನು ತುಂಬಲಿ ಎಂದು ಹಾರೈಸಿದರು.

ಸ್ವದೇಶಿ ಉತ್ಪನ್ನಗಳನ್ನು ಬಳಸಿ
ಪ್ರಧಾನಿಯವರು ದೇಶದ ಎಲ್ಲ ನಾಗರಿಕರಿಗೆ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಬಳಸಬೇಕೆಂದು ಕರೆ ನೀಡಿದರು. ಈ ಮೂಲಕ ದೇಶೀಯವಾಗಿ ಉತ್ಪನ್ನವಾಗುವ ಸಾಮಗ್ರಿಗಳನ್ನು ಬೆಂಬಲಿಸಿ, ದೇಶದ ಆರ್ಥಿಕತೆಗೂ ಸಹಕಾರಿಯಾಗುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next