ಬೆಂಗಳೂರು: ಬಿಜೆಪಿ ಯುವ ಮೋರ್ಚಾ ನಡೆಸುತ್ತಿರುವ
ಮಂಗಳೂರು ಚಲೋ ರ‍್ಯಾಲಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದು ‘ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ದೆಹಲಿ ಚಲೋ ಮಾಡಲಿ ನಾವೂ ಜೊತೆಗೆ ಬರುತ್ತೇವೆ’ ಎಂದು ಸವಾಲು ಹಾಕಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಸಮಾವೇಶ,ಜಾಥಾ ಮಾಡಲು ನಮ್ಮದೇನು ತಡೆ ಇಲ್ಲ. ನಾವೂ ಬಳ್ಳಾರಿಗೆ ಪಾದ ಯಾತ್ರೆ ಮಾಡಿದ್ದೆವು. ಬಿಜೆಪಿಯವರು ಬೈಕ್ ರ‍್ಯಾಲಿ ಮಾಡುತ್ತಿದ್ದಾರೆ, ಇದರಿಂದ ಟ್ರಾಫಿಕ್‌ಗೆ ತುಂಬಾ ಸಮಸ್ಯೆಯಾಗುತ್ತದೆ. ಸಾವಿರಾರು ಬೈಕ್‌ಗಳು ರಸ್ತೆಯಲ್ಲಿ ಹೋದರೆ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತದೆ. ಹೀಗಾಗಿ ಅನುಮತಿ ನಿರಾಕರಿಸಲಾಗಿದೆ’ ಎಂದು ಸಿಎಂ ಸ್ಪಷ್ಟನೆ ನೀಡಿದರು.
‘ಮಂಗಳೂರು ಚಲೋ ಮಾಡುವ ಬದಲು ದೆಹಲಿ ಚಲೋ ಮಾಡ್ರಪ್ಪ. ರಾಜ್ಯದ ರೈತರಿಗೆ ವಿವಿಧ ಬ್ಯಾಂಕ್‌ಗಳು 42,000 ಕೋಟಿ ರೂಪಾಯಿ ಸಾಲ ನೀಡಿವೆ. ಅವುಗಳನ್ನು ಮನ್ನಾ ಮಾಡುವ ಸಲುವಾಗಿ ದೆಹಲಿ ಚಲೋ ಮಾಡಿ ನಾವು ಜೊತೆಗೆ ಬರ್ತೇವೆ’ ಎಂದು ಸವಾಲೆಸೆದರು.
ರ‍್ಯಾಲಿಯಿಂದ ಕರಾವಳಿಯಲ್ಲಿ ಸಾಮರಸ್ಯ ಹಾಳಾಗುತ್ತದೆ,ರಾಜಕೀಯ ಪಕ್ಷವಾಗಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರಬಾರದು. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಯಡಿಯೂರಪ್ಪನವರು ಪ್ರಚೋದನಕಾರಿ ಭಾಷಣ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ಗುಡುಗಿದರು.
ಆರೆಸ್ಸೆಸ್ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಿಎಫ್ ಐ, ಕೆಎಫ್ ಡಿ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸ ಬೇಕು ಹಾಗೂ ಈ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿರುವ ಅರಣ್ಯ ಸಚಿವ ಬಿ. ರಮಾನಾಥ ರೈ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ “ಮಂಗಳೂರು ಚಲೋ’ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು, ಪೊಲೀಸರು ರಾಜ್ಯದ ವಿವಿಧೆಡೆ ರ‍್ಯಾಲಿಗೆ ತಡೆ ಒಡ್ಡಿದ್ದು ಹೊಸ ಸಮರಕ್ಕೆ ನಾಂದಿಯಾಗಿದೆ.
ಬೆಂಗಳೂರಿನಲ್ಲಿ ರ‍್ಯಾಲಿಗೆ ಮೈಸೂರಿನಲ್ಲಿ ಹತ್ಯೆಗೀಡಾಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಅವರ ಪತ್ನಿ ಚಾಲನೆ ನೀಡಿದರು. ಆದರೆ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಪೊಲೀಸರು ತಡೆ ಒಡ್ಡಿದ್ದು ಹಲವರನ್ನು ವಶಕ್ಕೆ ಪಡೆದಿದ್ದಾರೆ.