ಬಂಟ್ವಾಳ: ಪ್ರೀತಿ-ಸ್ನೇಹ- ಬಾಂಧವ್ಯ – ಸಹೋದರತೆ – ಸಾಮಾಜಿಕ ಸಾಮರಸ್ಯದ ಮೂಲಕ ದೇಶವನ್ನು ಕಟ್ಟುವ ಕೆಲಸ ಮಾಡುವ. ಒಂದು ರಾಷ್ಟ್ರ, ಒಂದೇ ಮಾನವತ್ವ ಚಿಂತನೆ ಹೊಂದುವ ಎಂದು ಪುತ್ತೂರಿನ ವಿಶ್ರಾಂತ ಪ್ರಾಂಶುಪಾಲ ಯು.ಎಸ್. ವಿಶ್ವೇಶ್ವರ ಭಟ್ ಹೇಳಿದರು. ಅವರು ಜ. 26ರಂದು ಬಿ.ಸಿ. ರೋಡ್‌ನ ಮಿನಿ ವಿಧಾನಸೌಧದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಮ್ಮ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕವೇ ದೇಶದ ಗೌರವ ಕಾಪಾಡಲು ಸಾಧ್ಯ ಎಂದು ತಿಳಿಸಿದರು. ಇದೇ ಸಂದರ್ಭ ವಂದೇ ಮಾತರಂ, ಝಂಡಾ ಊಂಚಾ ರಹೇ ಹಮಾರಾ ಪದ್ಯಗಳ ಸಾಲಿನ ಮಹತ್ವ ತಿಳಿಹೇಳಿದರು. ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಒಳ್ಳೆಯ ಸಮಾಜ ನಿರ್ಮಿಸುವ. ಪ್ರಜಾಪ್ರಭುತ್ವ ತತ್ತ್ವಗಳಿಗೆ ಬದ್ಧರಾಗಿರುವ ಎಂದರು. ಉಪಾಧ್ಯಕ್ಷ ಅಬ್ಟಾಸ್ ಅಲಿ ಮಾತನಾಡಿ, ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ನಾವು ಕರ್ತವ್ಯ ಮರೆಯಬಾರದು ಎಂದರು. ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿದರು.
ಪ್ರಮುಖರಾದ ಮೆಸ್ಕಾಂ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಸದಸ್ಯ ಜಗದೀಶ ಕುಂದರ್, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ, ತಾ| ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮೊದಲು ಪೊಲೀಸ್ ಸಹಿತ ವಿವಿಧ ಪದಾತಿ ದಳಗಳು ಪಥಸಂಚಲನ ನಡೆಸಿದವು. ಧ್ವಜಾರೋಹಣ ಮಾಡಿದ ರಾಷ್ಟ್ರೀಯ ಹಬ್ಬಗಳ ಆಚರಣೆ ಬಂಟ್ವಾಳ ತಾ| ಸಮಿತಿ ಅಧ್ಯಕ್ಷ ತಹಶೀಲ್ದಾರ್ ಪುರಂದರ ಹೆಗ್ಡೆ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಪ್ರಸ್ತಾವಿಸಿ, ಸ್ವಾಗತಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.
ಭವಿಷ್ಯದ ಪ್ರಜೆಗಳಾಗಿ ವಿದ್ಯಾರ್ಥಿಗಳ ಹೊಣೆ ಮಹತ್ವದ್ದಾಗಿದೆ. ಜಿಲ್ಲೆಯ ಸಾಮರಸ್ಯಕ್ಕೆ ನಾವು ಪ್ರಥಮ ಆದ್ಯತೆ ನೀಡಬೇಕು.
-ಪಿ. ರಾಮಕೃಷ್ಣ ಆಳ್ವ
ಬಂಟ್ವಾಳ ಪುರಸಭಾ ಅಧ್ಯಕ್ಷ