Advertisement

ಕೆಟ್ಟ ಪದದಿಂದ ದೂರವಿರೋಣ  ಪ್ರೀತಿಯಿಂದಲೇ ಸೋಲಿಸೋಣ

07:10 AM Dec 11, 2017 | Team Udayavani |

ಅಹ್ಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಪೂರ್ಣಗೊಂಡ ಬಳಿಕವೂ ರಾಜಕೀಯ ಪಕ್ಷಗಳ ಹೈವೋಲ್ಟೆàಜ್‌ ರ್ಯಾಲಿಗಳು, ಕೆಸರೆರಚಾಟಗಳು ಮುಂದುವರಿದಿವೆ. ಅದರಲ್ಲೂ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಜಿದ್ದಿಗೆ ಬಿದ್ದು ಸರಣಿ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಿಎಂ ಮೋದಿ ಅವರು ಚುನಾವಣೆಯಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ಕುರಿತು ಆರೋಪಿಸಿದರೆ, ರಾಹುಲ್‌ ನೇರವಾಗಿ ಪ್ರಧಾನಿ ಮೋದಿ ಅವರನ್ನೇ ಗುರಿಯಾಗಿಸಿಕೊಂಡು ಟೀಕೆ ಮುಂದುವರಿಸಿದ್ದಾರೆ.

Advertisement

ಭಾನುವಾರ ದಾಕೋರ್‌ನ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್‌, “ಬಿಜೆಪಿ ಮೊದಲು ನರ್ಮದಾ ವಿಚಾರವನ್ನೆತ್ತಿಕೊಂಡು ಪ್ರಚಾರ ಆರಂಭಿಸಿತು. 4-5 ದಿನಗಳ ನಂತರ ಜನರು ನಮಗೆ ನದಿ ನೀರು ಸಿಗುತ್ತಿಲ್ಲ ಎಂದು ಆರೋಪಿಸಿದ ಬಳಿಕ, ಬಿಜೆಪಿ ಪ್ರಚಾರ ತಂತ್ರ ಬದಲಿಸಿತು. ನರ್ಮದಾ ವಿಚಾರ ಬೇಡ, ಒಬಿಸಿ ಆಗಬಹುದು ಎಂದಿತು.

ನಮಗೆ ಬಿಜೆಪಿಯಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ಒಬಿಸಿಯವರು ಆರೋಪಿಸಿದ ಬಳಿಕ ಮತ್ತೆ ಬಿಜೆಪಿ ಪ್ರಚಾರ ತಂತ್ರ ಬದಲಿಸಿತು. ನಾನು ಮೋದಿ ಅವರ ಹಲವು ಭಾಷಣಗಳನ್ನು ಆಲಿಸಿದ್ದೇನೆ. ಅವರ ಭಾಷಣದಲ್ಲಿ ಶೇ.90ರಷ್ಟಿರುವುದು ಅವರು ಮಾತ್ರ. ಮೋದಿಜೀ ಅವರ ಬಗ್ಗೆಯಷ್ಟೇ ಮಾತಾಡುತ್ತಾರೆ. ಅಭಿವೃದ್ಧಿ, ವಿಕಾಸವನ್ನೆಲ್ಲ ಬಿಟ್ಟುಬಿಟ್ಟಿದ್ದಾರೆ. ಈ ಚುನಾವಣೆ ಅವರಿಗೆ ಅಥವಾ ನನಗೆ ಸಂಬಂಧಿಸಿದ್ದಲ್ಲ. ಗುಜರಾತಿನ ಭವಿಷ್ಯಕ್ಕೆ ಸಂಬಂಧಿಸಿದ್ದು ಎಂಬುದನ್ನೇ ಅವರು ಮರೆತಿದ್ದಾರೆ,’ ಎಂದಿದ್ದಾರೆ. ಇದೇ ವೇಳೆ, ಯಾರೂ ಪ್ರಧಾನಿ ವಿರುದ್ಧ ಕೆಟ್ಟ ಪದ ಬಳಕೆ ಮಾಡಬಾರದು. ನಮ್ಮ ಪಕ್ಷ ಯಾವತ್ತೂ ಬಿಜೆಪಿಯನ್ನು ಮತ್ತು ಮೋದಿಯವರನ್ನು “ಪ್ರೀತಿ ಹಾಗೂ ಸಿಹಿಯಾದ ಮಾತುಗಳಿಂದ’ ಸೋಲಿಸಬೇಕು ಎಂದು ಕಾರ್ಯಕರ್ತರಿಗೆ ರಾಹುಲ್‌ ಸೂಚಿಸಿದ್ದಾರೆ. 

ದರ ಏರಿಕೆ ಏಕಿಲ್ಲ?: 17 ತಿಂಗಳುಗಳಲ್ಲಿ 19 ಬಾರಿ ಎಲ್‌ಪಿಜಿ ದರ ಏರಿಕೆಯಾಗಿದೆ. ಆದರೆ, ಈ ತಿಂಗಳು ತೈಲ ಕಂಪನಿಗಳು ದರ ಪರಿಷ್ಕ ರಣೆ ಮಾಡಿಲ್ಲ. ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿವೆ. ಆದರೆ, ಈ ಬಗ್ಗೆ ಅಧಿಕಾರಿ ಗಳು ಉತ್ತರಿಸುತ್ತಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಹುಲ್‌ಗೆ “ಮೋದಿ’ ಘೋಷಣೆಯ ಸ್ವಾಗತ!
ಗುಜರಾತ್‌ನಲ್ಲಿ ದೇಗುಲ ಭೇಟಿ ಮುಂದುವರಿಸಿರುವ ರಾಹುಲ್‌ ಭಾನುವಾರ ಇಲ್ಲಿನ ರಾಂಚೋಡ್‌ಜಿ ಮಂದಿರಕ್ಕೆ ಭೇಟಿ ನೀಡಿದರು. ಆದರೆ, ಅಲ್ಲಿ ರಾಹುಲ್‌ಗೆ ಅಚ್ಚರಿ ಕಾದಿತ್ತು. ರಾಹುಲ್‌ ಮಂದಿರ ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಅನೇಕರು “ಮೋದಿ, ಮೋದಿ, ಮೋದಿ’ ಎಂದು ಘೋಷಣೆ ಕೂಗಲಾರಂಭಿಸಿದರು. ಇದರಿಂದ ರಾಹುಲ್‌ಗೆ ಇರುಸು ಮರುಸು ಉಂಟಾಯಿತಾದರೂ, ಅವರು ಮುಗುಳ್ನಗುತ್ತಾ ಮುಂದೆ ಸಾಗಿದರು. ಇದೇ ವೇಳೆ, ಮಗುವೊಂದು ಓಡಿ ಬಂದು ರಾಹುಲ್‌ರನ್ನು ತಬ್ಬಿಕೊಂಡ ಘಟನೆಯೂ ನಡೆಯಿತು. ಬಳಿಕ ಅವರು ಅರಾವಳಿಯ ಶಾಮಲಾಲ್‌ಜೀ ದೇಗುಲಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Advertisement

ಪ್ರಧಾನಿ ಮೋದಿ ರ್ಯಾಲಿಗೆ ಹೋಗಿದ್ದಕ್ಕೆ ತ್ರಿವಳಿ ತಲಾಖ್‌
ಪ್ರಧಾನಿ ಮೋದಿ ಅವರ ರ್ಯಾಲಿಗೆ ತೆರಳಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಪತಿಯು ವಿಚ್ಛೇದನ ನೀಡಿದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ತ್ರಿವಳಿ ತಲಾಖ್‌ಗೆ ಸಂಬಂಧಿಸಿ ಕಾಯ್ದೆ ತರಲು ಮುಂದಾಗಿರುವ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಲೆಂದು ಉತ್ತರಪ್ರದೇಶದಲ್ಲಿ ರ್ಯಾಲಿಯೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಂಡು ಬಂದ ಫಾಯಿರಾಳನ್ನು ಕಂಡು ಆಕ್ರೋಶಗೊಂಡ ಪತಿ ಡ್ಯಾನಿಷ್‌, ಆಕೆಗೆ ಮೂರು ಬಾರಿ ತಲಾಖ್‌ ಹೇಳಿ ವಿಚ್ಛೇದನ ನೀಡಿದ್ದಾನೆ. ಹೀಗೆಂದು ಫಾಯಿರಾ ಆರೋಪಿಸಿದ್ದಾರೆ. ಆದರೆ, ಇದನ್ನು ನಿರಾಕರಿಸಿರುವ ಡ್ಯಾನಿಷ್‌, “ಪ್ರಧಾನಿ ರ್ಯಾಲಿಗೂ ಇದಕ್ಕೂ ಸಂಬಂಧವಿಲ್ಲ. ಆಕೆ ವಿವಾಹೇತರ ಸಂಬಂಧ ಹೊಂದಿದ್ದಳು. ಅದಕ್ಕೆ ವಿಚ್ಛೇದನ ನೀಡಿದೆ’ ಎಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next