ಬಳ್ಳಾರಿ: ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸುವ, ಜನಪ್ರತಿನಿಧಿಗಳಾಗುವ ಅವಕಾಶ ಬಂದಾಗ ದೇಶದ ಭಾವೈಕ್ಯತೆ ನಿಮ್ಮ ಮೊದಲ ಧ್ಯೇಯವಾಗಿರಬೇಕು ಎಂದು ರಾಷ್ಟ್ರೀಯ ಯುವ ಯೋಜನೆಯ ದೆಹಲಿಯ ನಿರ್ದೇಶಕ ಡಾ| ಎಸ್.ಎನ್.ಸುಬ್ಬರಾವ್ ಕಿವಿಮಾತು ಹೇಳಿದರು.
ನಗರದ ಕಿತ್ತೂರುರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಉನ್ನತ ಅಧಿಕಾರಿಗಳಾಗುವ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಸೇರಿ ಇನ್ನಿತರೆ ಜನಪ್ರತಿನಿಧಿಗಳಾಗುವ ಎಲ್ಲ ಅವಕಾಶಗಳು ಇವೆ. ಅಂತಹ ಸಂದರ್ಭ, ಸನ್ನಿವೇಶಗಳು ಒದಗಿ ಬಂದಾಗ ದೇಶದ ಭಾವೈಕ್ಯತೆ ನಿಮ್ಮ ಧ್ಯೇಯವಾಗಬೇಕು. ದೇಶವನ್ನು ಮುನ್ನಡೆಸುವ, ಶಕ್ತಿ ತುಂಬುವ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಡಾ| ನಾ.ಸು.ಹರ್ಡೀಕರ್ ಭಾರತ ಸೇವಾದಳವನ್ನು ಸ್ಥಾಪಿಸಿದ್ದರು. ಅವರ ಆಶಯದಂತೆ ಇಂದು ಸಂಸ್ಥೆಯು ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಸ್ವತಂತ್ರ ಭಾರತದ ನಾಗರಿಕರಾದವರು ಸಳ್ಳು, ಮೋಸ ಮಾಡದೆ ಭ್ರಷ್ಟಾಚಾರ ನಡೆಸದೆ ಜನಸೇವೆ ನಡೆಸುವವನೇ ನಿಜವಾದ ದೇಶಭಕ್ತನಾಗಲು ಸಾಧ್ಯ. ಸಮಾಜ ಸೇವೆಗೆ ಜೀವನ ಅರ್ಪಿಸುವಂತೆ ಪ್ರೇರೇಪಿಸುವ ಕೆಲಸವನ್ನು ಭಾರತ ಸೇವಾದಳ ಮಾಡುತ್ತಿದೆ. ಭಾರತ ಸೇವಾದಳ ಶಾಲೆಗಳಲ್ಲಿ ಶಿಸ್ತು, ದೇಶಪ್ರೇಮ, ಸೇವಾ ಮನೋಭಾವ ಕಲಿಸುತ್ತಿದೆ. ಶಿಕ್ಷಕರು ನನಗೆ ಉತ್ತಮ ಮೌಲ್ಯಗಳನ್ನು ಕಲಿಸಿದ ಕಾರಣಕ್ಕೆ ನಾನು ಬಡವರು, ದೀನ ದಲಿತರ ಎಳ್ಗೆಗೆ ಶ್ರಮಿಸುವ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿದ್ದೇನೆ. ಅದೇರೀತಿ ಹಳೆಯ ವಿದ್ಯಾರ್ಥಿಗಳೆಲ್ಲರೂ ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಜೀವಿಸಬೇಕು ಎಂದು ಕೋರಿದರು.
ವಿಜ್ಞಾನ, ತಂತ್ರಜ್ಞಾನದ ಹೆಸರಿನಲ್ಲಿ ಸಂಸ್ಕೃತಿ ಮರೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಇಂಥ ಮೇಳಗಳ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಮೂಡಿಸುವ ಜತೆಗೆ ರಾಷ್ಟ್ರಧ್ವಜ ಸಂಹಿತೆ, ಮಿಲಾಕ್ ಶಿಬಿರದ ಮೂಲಕ ಶಿಕ್ಷಕರಿಗೆ ದೇಶ ಪ್ರೇಮದ ಪಾಠವನ್ನು ಹೇಳಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಸೇವಾದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ವಿ.ದೇವಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ ಸೇವಾದಳ ಸಂಸ್ಥೆಯು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 18 ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅವರ ತತ್ವಾದರ್ಶಗಳನ್ನು ಜಾರಿಗೆ ತರುವುದಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ಮತ್ತು ಯುವಜನರನ್ನು ಸಂಘಟಿಸಿ ಅವರಲ್ಲಿ ಶಿಸ್ತು, ಸಂಯಮ, ಧೈರ್ಯ, ಸ್ಥೈರ್ಯ, ತ್ಯಾಗ ಮನೋಭಾವನೆ, ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ದತೆ, ಅಸ್ಪೃಶ್ಯತಾ ನಿವಾರಣೆ ಸೇರಿದಂತೆ ಮುಂತಾದ ಸದ್ಗುಣಗಳನ್ನು ಮೂಡಿಸಿ ಅವರನ್ನು ದೇಶದ ಸತøಜೆಗಳನ್ನಾಗಿ ರೂಪಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಭಾವೈಕ್ಯತಾ ಮೇಳದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ತಲಾ 200 ವಿದ್ಯಾರ್ಥಿಗಳು ಸೇರಿ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೇವಾದಳದ ರಾಜ್ಯಾಧ್ಯಕ್ಷ ಗುರುಸಿದ್ದಗೌಡ, ಗಾಂಧಿಭವನದ ಕಾರ್ಯದರ್ಶಿ ಟಿ.ಜಿ.ವಿಠuಲ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸೇವಾದಳದ ಮುಖ್ಯಸ್ಥರು ಇದ್ದರು.