Advertisement

ಎಲ್ಲರನ್ನೊಳಗೊಳ್ಳುವ ಸುಂದರ ಶಿಲ್ಪಗಳಾಗೋಣ

02:04 AM Jun 17, 2019 | sudhir |

ಅರಳುವ ಹೂವು ಪ್ರಪಂಚದಲ್ಲಿನ ಎಲ್ಲಾ ಸೌಂದರ್ಯವನ್ನು ತನ್ನೊಳಗೆ ತುಂಬಿಕೊಂಡು ನಸು ನಗುತ್ತದೆ. ಆಗಷ್ಟೇ ಅರಳಿ ಬಿರಿದು, ಇನ್ನೇನು ಕೆಲವೇ ದಿನಗಳಷ್ಟೇ ತನ್ನ ಈ ಚೆಲುವು ಎನ್ನುವ ಸತ್ಯದ ಅರಿವಿದ್ದರೂ ತನ್ನ ಚೆಲುವಿನ ಮೂಲಕ ನಕ್ಕು ನಲಿಯುತ್ತದೆ. ನೋಡುಗರ ಮನಸ್ಸನ್ನು ತಣಿಸಿ ಬಿಡುತ್ತದೆ.

Advertisement

ದೇವರ ಮುಡಿಗೋ, ನಾರಿಯ ಮುಡಿಯಲ್ಲಿಯೋ ಕುಳಿತು ಮತ್ತಷ್ಟು ಅಂದವನ್ನು ತುಂಬಿಕೊಳ್ಳುತ್ತದೆ. ಜೀವ, ಜೀವನ ಇರುವಷ್ಟು ಹೊತ್ತು ಆಸ್ವಾದಿಸಬೇಕು, ನಮ್ಮನ್ನು ನೋಡುವವರಿಗೂ ಒಂದಷ್ಟು ಸಂತೋಷವನ್ನು ನೀಡಬೇಕು ಎನ್ನುವ ಆ ಹೂವಿನ ಗುಣ ಅದೆಷ್ಟು ಸುಂದರ.

ಒಬ್ಬ ಮೂರ್ತಿಗಳನ್ನು ಕೆತ್ತುವ ಶಿಲ್ಪಿ ಇದ್ದನು. ಅವನ ನಯ ನಾಜೂಕಿನ ಕೆಲಸದ ಮುಂದೆ ಆ ಊರಿನ ಎಲ್ಲಾ ಶಿಲ್ಪಿಗಳೂ ಮಂಡಿಯೂರಲೇ ಬೇಕಿತ್ತು. ಆತನಲ್ಲಿದ್ದ ಚಾಣಾಕ್ಷತನ, ಕಾರ್ಯ ನಿರ್ವಹಿಸುವಾಗಿನ ಉತ್ಸಾಹವೇ ಅವನ ಕಲೆಯನ್ನು ಆ ಊರಿನಲ್ಲೆಲ್ಲಾ ಜನಜನಿತವಾಗುವಂತೆ ಮಾಡಿತ್ತು. ಅವನ ಹಿರಿಯರೂ ಹಾಗೆಯೇ. ಶಿಲ್ಪಗಳನ್ನು ಕೆತ್ತುವುದರಲ್ಲಿ ಊರಲ್ಲೆಲ್ಲಾ ಪ್ರಸಿದ್ದಿಯನ್ನು ಹೊಂದಿದ್ದವರು. ಆ ಊರಿನ ದೇವಾಲಯದ ಪ್ರತಿಯೊಂದು ಕಲ್ಲುಗಳಿಗೂ ಜೀವ ಕೊಟ್ಟದ್ದು ಇವನ ಉಳಿಯ ಪೆಟ್ಟುಗಳೇ. ರಾಜನ ಅರಮನೆಯ ಸೌಂದರ್ಯದ ಹಿಂದೆಯೂ ಈತನ ಕೈಚಳಕವೇ ಎದ್ದು ಕಾಣುತ್ತಿತ್ತು. ಅವನನ್ನು ಎಲ್ಲರೂ ಹೊಗಳುವವರೇ. ಇವೆಲ್ಲವುಗಳಿಂದ ಅವನಲ್ಲಿಯೂ ಒಂದು ರೀತಿಯ ಅಹಂಕಾರ ತಲೆಗಡರಿ ಬಿಟ್ಟಿತ್ತು.

ಹೀಗಿರುವಾಗ ಒಂದು ಬಾರಿ ಆತನಿಗೆ ತನ್ನ ತಾತ ಮತ್ತು ಈ ಶಿಲ್ಪಕಲೆಯನ್ನು ಕಲಿಸಿದ ತನ್ನ ತಂದೆಯ ಮೂರ್ತಿಗಳನ್ನು ರಚಿಸಬೇಕು ಎಂದು ಮನಸ್ಸಾಗುತ್ತದೆ. ಅದರಂತೆ ಅವನ ತಾತನ ಚಿತ್ರವನ್ನಾತ ಕೆಲವೇ ದಿನಗಳಲ್ಲಿ ಕೆತ್ತಿ ಮುಗಿಸುತ್ತಾನೆ. ತನ್ನ ಶಿಲ್ಪಕಲಾ ಕುಠೀರದ ಮುಂದೆ ಆ ಸುಂದರ ಮೂರ್ತಿಯನ್ನು ಪ್ರೇಕ್ಷಕರ ವೀಕ್ಷಣೆಗಾಗಿ ಇಡುತ್ತಾನೆ ನೋಡಿದವರೆಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಅವನ ಕಾರ್ಯವನ್ನು ಶ್ಲಾ ಸುತ್ತಾರೆ. ಇದರಿಂದ ಅವನ ಅಹಂಕಾರ ಮತ್ತಷ್ಟು ಬೆಳೆಯುತ್ತದೆ.

ಕೊಂಚ ದಿನಗಳ ಬಳಿಕ ತನ್ನ ಹೆತ್ತವರ ಮೂರ್ತಿ ಕೆತ್ತಲು ಆರಂಭಿಸುತ್ತಾನೆ. ಕೆಲವು ದಿನಗಳ ನಂತರ ಕೆತ್ತನೆ ಕೆಲಸ ಮುಗಿಯುತ್ತದೆ. ಅದನ್ನು ಸಹ ವೀಕ್ಷಣೆಗಾಗಿ ಜನರ ಮುಂದಿಡುತ್ತಾನೆ. ಬಂದು ನೋಡಿದ ಜನರೆಲ್ಲರೂ ಆ ಮೂರ್ತಿಯಲ್ಲಿ ಒಂದಿಲ್ಲೊಂದು ತಪ್ಪು³ಗಳನ್ನು ಹುಡುಕುತ್ತಾರೆ. ಅಪರಿಪೂರ್ಣ ಎನ್ನುವ ಮಾತೇ ಹೆಚ್ಚಿನವರಿಂದ ಕೇಳಿ ಬರುತ್ತದೆ. ಈ ಮಾತುಗಳು ಅವನ ಅಹಂಗೆ ಪೆಟ್ಟು ಕೊಟ್ಟವು. ಪರಾಮರ್ಶೆಯಲ್ಲಿ ತೊಡಗುತ್ತಾನೆ ಎಲ್ಲಿ ತಪ್ಪಾಗಿದೆ ಎಂದು. ಆದರೂ ಅರಿವಾಗುವುದಿಲ್ಲ. ಕೊನೆಗೆ ಅವನಲ್ಲಿ ಅವನಿಗೆ ಬೇಸರ ಉಂಟಾಗುತ್ತದೆ. ಅಹಂಕಾರವನ್ನು ಕಳೆದುಕೊಂಡು ತನ್ನ‌° ಇಷ್ಟ ದೈವವನ್ನು ಪ್ರಾರ್ಥಿಸಿ ಯಾಕೆ ಹೀಗಾಯ್ತು ಎಂದು ಕೇಳುತ್ತಾನೆ. ನೋವಲ್ಲಿಯೇ ನಿದ್ರಿಸುತ್ತಾನೆ.

Advertisement

ಕನಸಿನಲ್ಲಿ ಅತನ ಮುತ್ತಜ್ಜ ಪ್ರತ್ಯಕ್ಷನಾಗಿ ಈ ರಹಸ್ಯವನ್ನು ಭೇದಿಸುತ್ತಾನೆ. ಅದೇನೆಂದರೆ ತಾತನ ಪ್ರತಿಮೆ ಎಲ್ಲರಿಗೂ ಮೆಚ್ಚುಗೆಯಾಯಿತು. ಏಕೆಂದರೆ ಅವರನ್ನು ಹೆಚ್ಚಿನವರು ನೋಡಿರಲಿಲ್ಲ. ಆದರೆ ನಿನ್ನ ಹೆತ್ತವರನ್ನು ಹೆಚ್ಚಿನವರು ನೋಡಿದ್ದಾರೆ. ಅವರಿಗೆ ಅವರು ಚಿರ ಪರಿಚಿತರು. ಅವರಿಗೆ ಗೊತ್ತಿರುವ ವ್ಯಕ್ತಿಯ ಮೂರ್ತಿಯಲ್ಲಿ ತಪ್ಪುಗಳು ಎಲ್ಲರಿಗೂ ಸುಲಭವಾಗಿ ಅರಿವಾಗುತ್ತದೆ ಎಂದು.

ಅಹಂಕಾರ ತಲೆಗಡರಿದ ಮನುಷ್ಯ ತಾನೇ ಸರಿ ತನ್ನದೇ ಸರಿ ಎಂದು ಬೀಗುತ್ತಾನೆ. ಆದರೆ ಸತ್ಯವೊಂದಿರುತ್ತದೆ ಎಂಬುದನ್ನು ಅರಿತುಕೊಂಡಲ್ಲಿ ಸಂತೋಷ ಮನಸ್ಸಿನ ಬಾಗಿಲು ಬಡಿಯುವುದು ಸಾಧ್ಯ.

-   ಭುವನ ಬಾಬು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next