ಕಡಲಿನಂಥಾ ಬದುಕಿನಲ್ಲಿ, ಎದುರು ಬದುರಿನ ದ್ವೀಪಗಳಂತಾಗಿ ಉಳಿಯೋಣ. ಒಲವಿನ ಸೇತುವೆಯೊಂದನ್ನು ಸದ್ದಿಲ್ಲದೇ ಕಟ್ಟೋಣ. ಕಾಲವೆಂಬುದು ಒಲವಿನ ಕರಗಳಿಂದಲೇ ನಮ್ಮಿಬ್ಬರ ಹೃದಯ ಸ್ಪರ್ಶಿಸಲಿ.
ಓ ಗೆಳೆಯಾ ಒಳಗೊಳಗೆ ಸಂತಸ ಅರಳುವ ಸಮಯ. ನಿನ್ನ ಕಳ್ಳ ನೋಟ ನನ್ನೊಳಗೆ ಮೊದಲ ಮಳೆಯ ಹನಿಗಳ ಹೀರಿ ನೆಲದಿಂದೆದ್ದ ಪರಿಮಳ ಆವರಿಸಿದಂಥ ಸಂಭ್ರಮ ತುಂಬುತ್ತದೆ. ಮನದೊಳಗಿನ ಪುಳಕಕ್ಕೆ ಪದಗಳು ಸೋತು ಸುಮ್ಮನಾಗುತ್ತವೆ. ಎದೆಯೊಳಗೆ ಹಿತವಾದ ನೋವೊಂದನ್ನು ಕುಡಿಗಣ್ಣ ಸಂಚಲ್ಲೇ ಬಿಟ್ಟುಹೋಗುವ ಆಗಂತುಕ ನೀನು. ಯಾವತ್ತೂ ಪರಿಚಯಕ್ಕೆ ಹಾತೊರೆಯದೇ ಹೋದರೂ, ಅಪರಿಚಿತರಾಗಿ ಉಳಿಯುವುದನ್ನೂ ಅಸಾಧ್ಯವಾಗಿಸಿದ ಜಾಣ ನೀನು.
ನಿರ್ಲಕ್ಷ್ಯದ ನಾಟಕವಾಡುತ್ತಾ, ಎತ್ತಲೋ ನೋಡುವಂತೆ ನಟಿಸುತ್ತಾ ಎದುರು ಸುಳಿದಾಗ, ಅರೆ ಕ್ಷಣದ ಕಣ್ಣ ಭೇಟಿಯಲ್ಲೇ ನೂರಾರು ಪತ್ರ ಓದಿ ಹೇಳಿದ ಮಹಾನ್ ಕನಸುಗಾರ ನೀನು, ಸುಳ್ಳೇ ಉಡಾಫೆಯ ಮುಖವೊತ್ತು ನನ್ನ ದಾಟಿ ನಾಲ್ಕು ಹೆಜ್ಜೆಯಿಟ್ಟು, ನಿಂತಲ್ಲೇ ಬೇರು ಬಿಟ್ಟಂತೆ ದಿಟ್ಟಿಸಿ ನೋಡುತ್ತಾ ನಿಂತ ಪ್ರೇಮಚಾರಿ ನೀನು. ನಾನೇನೂ ಕಡಿಮೆಯಿಲ್ಲ ಬಿಡು. ಮನಸಿನ ಮೂಲೆಯಲ್ಲಿ ನಿನಗಿರುವಷ್ಟೇ ಬಿಗುಮಾನ ನನಗೂ ಇದೆ.
ನನಗೂ ನಿನ್ನನ್ನು ನನ್ನ ಬದುಕಾಗಿಸಿಕೊಳ್ಳಲು ಕಾಯುವ ತಾಳ್ಮೆ, ನೀ ಬರುವ ಖಾತ್ರಿಯಿಂದಲೇ ನಿನ್ನನ್ನು ಕಾಯಿಸುವ ತುಂಟತನ ತುಂಬಿದ ಜಾಣ್ಮೆ ಎರಡೂ ಗೊತ್ತು. ಪ್ಲೀಸ್ ಹುಡುಗ, ಇನ್ನಷ್ಟು ದಿನ ಹೀಗೆ ಇರೋ. ಈ ಮಾತಿರದ ನಲುಮೆ ಜಾರಿಯಿರಲಿ. ಕಣ್ಣುಗಳು ಪರಸ್ಪರ ಭೇಟಿಯಾಗಲಿ, ಖುಷಿಯಿಂದ ಮಾತಾಡಿಕೊಳ್ಳಲಿ. ಸಂಭ್ರಮದಿಂದ ಹಾಡಿಕೊಳ್ಳಲಿ.
ಯಾವ ಅಡ್ಡಿಯಿರದೇ ಒಬ್ಬರೊಳಗೊಬ್ಬರು ಇಳಿಯುವಂತೆ, ಒಬ್ಬರನ್ನೊಬ್ಬರು ತುಂಬಿಕೊಳ್ಳುವಂತೆ ದಿಟ್ಟಿಸಿ ನೋಡಿ ಹಬ್ಬದ ಹಿಗ್ಗು ಸವಿಯಲಿ. ಒಂದು ದಿವ್ಯ ಮೌನ ನಮ್ಮಿಬ್ಬರ ನಡುವೆ ಸೇತುವೆಯಾಗಲಿ , ಅದರ ನೆನಪು ಇರುಳಿನ ಕನಸಿಗೆ ಬಂದು ಮನದ ಅಂಗಳದಲಿ ಉಯ್ನಾಲೆಯಾಗಿ ಜೀಕಲಿ. ನನ್ನ ಮಾತಗಳು ನಿನಗೆ, ನಿನ್ನ ಮಾತುಗಳು ನನಗೆ ತಲುಪುವ ವೇಳೆಗೆ, ಮಧುರ ಕವಿತೆಯಂಥ ಮಾತು,
ಢಾಳಾದ ರಂಗು ಮೆತ್ತಿಕೊಂಡ ಕತೆಯಂತಾಗಿ ಬಿಟ್ಟಿರುತ್ತದೆ. ಅಲ್ಲಿ ನಮ್ಮದೇ ಸ್ವಂತ ಸಾಲುಗಳು ಕಣ್ಮರೆಯಾಗಿಬಿಟ್ಟಿರುತ್ತವೆ. ಈ ಅಗಾಧ ಜಗತ್ತಿನಲ್ಲಿ ಹರಡಿಕೊಂಡ ಕಡಲಿನಂಥಾ ಬದುಕಿನಲ್ಲಿ, ಎದುರು ಬದುರಿನ ದ್ವೀಪಗಳಂತಾಗಿ ಉಳಿಯೋಣ. ಒಲವಿನ ಸೇತುವೆಯೊಂದನ್ನು ಸದ್ದಿಲ್ಲದೇ ಕಟ್ಟೋಣ. ಕಾಲವೆಂಬುದು ಒಲವಿನ ಕರಗಳಿಂದಲೇ ನಮ್ಮಿಬ್ಬರ ಹೃದಯ ಸ್ಪರ್ಶಿಸಲಿ. ಅಂತದೊಂದು ಅಮೃತ ಘಳಿಗೆಗಾಗಿ ಕಾಯುತ್ತೇನೆ.
* ನಿನ್ನವಳು
ಅಮ್ಮು ಮಲ್ಲಿಗೆಹಳ್ಳಿ