Advertisement
ಜಿಲ್ಲೆಗೆ ಸಾಹಿತಿ, ಕವಿ, ಸಂಶೋಧಕರ ಕೊಡುಗೆ ಏನು?:ಖ್ಯಾತ ಸಾಹಿತಿ, ಕಾದಂಬರಿಕಾರ, ಸಂಶೋಧಕರಾದ ತರಾಸು, ಬಿ.ಎಲ್. ವೇಣು ಮತ್ತಿತರರು ಚಿತ್ರದುರ್ಗವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ. ಅವರು ತಮ್ಮ ಬರಹಗಳ ಮೂಲಕ ರಾಜ್ಯ, ದೇಶದ ಜನ ಚಿತ್ರದುರ್ಗದತ್ತ ಚಿತ್ತ ಹರಿಸುವಂತೆ ಮಾಡಿದ್ದಾರೆ. ಇದು ಅವರು ನೀಡಿದ ಬಹುದೊಡ್ಡ ಕೊಡುಗೆ. ಚಿತ್ರದುರ್ಗದ ಕುರಿತು ಇವರೆಲ್ಲ ಬರೆದಿರಲಿಲ್ಲವೆಂದರೆ ಜಿಲ್ಲೆ ಮತ್ತಷ್ಟು ಹಿಂದೆ ಉಳಿಯುತ್ತಿತ್ತು ಎಂಬುದು ಸತ್ಯ.
ಸಾಹಿತ್ಯ ಸಮ್ಮೇಳನದಲ್ಲಿ ಯಾವ ರೀತಿಯ ಚರ್ಚೆಗಳು ಆಗಬೇಕು? ಕಡೆ ಪಕ್ಷ ಮುಂದಿನ ತಲೆಮಾರು, ಹೊಸ ಬರಹಗಾರರನ್ನು ಪ್ರೇರೇಪಿಸುವಂತಹ ಚರ್ಚೆ ಅಗತ್ಯ. ಜಿಲ್ಲೆಯ ಬಗ್ಗೆ ಕಾಳಜಿ ಉತ್ತೇಜಿಸಲು ಮುಖಾಮುಖೀ ಸಂವಹನ ಏರ್ಪಡಬೇಕು. ಸಾಹಿತ್ಯ, ಸಾಹಿತ್ಯ ಕಟ್ಟುವುದು, ಬೆಳೆಸುವುದು ಮಾತ್ರವಲ್ಲದೆ, ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನ-ಮಂಥನವಾಗಬೇಕು. ಸಾಹಿತ್ಯ, ಸಂಕೃತಿ, ಇತಿಹಾಸ, ಜಾನಪದ, ಜಿಲ್ಲೆಯ ಸಮಸ್ಯೆ, ಅಭಿವೃದ್ಧಿಯ ಗಂಭೀರ ಚರ್ಚೆಗಳು ಆಗಬೇಕಿದೆ. ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಲು ಕಾರಣ ?: ದಕ್ಷ, ಸಜ್ಜನ ರಾಜಕಾರಣಿಗಳ ನಿಕೃಷ್ಟ ನಿರಾಸಕ್ತಿ ಹಾಗೂ ಕ್ಷಿಣಿಸಿದ ಜನರ ಧ್ವನಿಯೇ ಜಿಲ್ಲೆ ಹಿಂದುಳಿಯಲು ಕಾರಣ. ಚಿತ್ರದುರ್ಗ ಕರ್ನಾಟಕ ಏಕೀಕರಣದ ನಂತರ 70 ವರ್ಷಗಳಲ್ಲಿ ಸಂಪೂರ್ಣ ಬಡವಾಯಿತು. ಜಿಲ್ಲೆಯ ಎಲ್ಲ ರಾಜಕಾರಣಿಗಳು ದಕ್ಷರೇ, ಆದರೆ ದಕ್ಷತೆಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಯ ಮೂಲದವರು ಇದು ನನ್ನ ನೆಲ, ನನ್ನ ಜಲ ಎನ್ನುವ ಭಾವನೆ ಮೂಡಬೇಕು. ಯಾವಾಗಲು ಎರಡು ಕಾಲಿನ ಮೇಲೆ ನಿಲ್ಲಬೇಕು. ಹುಟ್ಟಿದ ಜಿಲ್ಲೆ, ರಾಜ್ಯದ ತುಡಿತ ನಮಗಿರಬೇಕು.
ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಉತ್ತಮ ಉದಾಹರಣೆ. ಹಾಸನದ ಅಭಿವೃದ್ಧಿ ಬಗ್ಗೆ ಎಷ್ಟೇ ಟೀಕೆ ಮಾಡಿದರೂ ಅವರ ತವರ ಪ್ರೀತಿ ಮತ್ತು ಕಾಳಜಿ ಉಳಿದವರಿಗೆ ಮಾದರಿಯಾಗಬೇಕು.
Related Articles
Advertisement
ಇಂದು ಅಭಿವ್ಯಕ್ತಿ ಸ್ವಾತಂತ್ರ ಹರಣ ಆಗುತ್ತಿದೆಯೇ?: ಹೌದು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆಧಕ್ಕೆ ಆಗುತ್ತಿದೆ. ಇದಕ್ಕೆ ಗೌರಿ ಲಂಕೇಶ್ ಹತ್ಯೆ ಜೀವಂತ ಸಾಕ್ಷಿ. ಇಲ್ಲಿ ಹತ್ಯೆ ಮಾಡಿದವರು ಮತ್ತು ಹತ್ಯೆಯಾದವರು ಇಬ್ಬರೂ ಒಂದರ್ಥದಲ್ಲಿ ನೊಂದವರೇ. ಕೇವಲ 13 ಸಾವಿರ ರೂ.ಗೆ ಹತ್ಯೆಯಂತ ಕೃತ್ಯ ಮಾಡಿ ಕಣ್ಣೀರು ಹಾಕುವ ಕೆಲಸ ಆಗುತ್ತಿದೆ. ಕಲ್ಪನೆಗಳಿಗೆ ಸಿಗದ ರೀತಿಯಲ್ಲಿ ಕೃತ್ಯಗಳು ನಡೆಯುತ್ತಿವೆ.
ಘೋಷಿತವಾಗಿರುವ ಅಧಿಕೃತ ಸಿದ್ಧಾಂತಗಳ ವಿರೋಧಿಸುವಂತಿಲ್ಲ. ಕೊಲ್ಲಲ್ಪಟ್ಟವರು, ಕೊಲೆಯಾದವರೂ ಇಬ್ಬರೂ ಬಾಧಿತರಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊಲ್ಲುವುದು ವಿಧಾನವೇ ಅಲ್ಲ. ಹೊಡೆದು ಬಾಯಿ ಮುಚ್ಚಿಸುವ ಕೆಲಸ ಆಗಬಾರದು. ಚರ್ಚೆ ಮಾಡಬೇಕು.
ಸಾಹಿತ್ಯದಲ್ಲಿ ಭಿನ್ನ ಧ್ವನಿ ಏಕೆ ಬೇಕು?: ಚಲನಶೀಲತೆ ಹಾಗೂ ಕ್ರಿಯಾಶೀಲತೆ ಸಾಹಿತ್ಯದ ಮುಖ್ಯ ಗುರಿ. ಭಿನ್ನ ಧ್ವನಿ ಇದ್ದಲ್ಲಿ ಕನಸುಗಳನ್ನು ಬಿತ್ತುವ ಕಾರ್ಯ ಮಾಡಬಹುದು. ಜನರ ಸಂಕಷ್ಟಗಳ ವಿಮೋಚನೆಗಾಗಿ ಸಾಹಿತ್ಯದಲ್ಲಿ ಭಿನ್ನ ಧ್ವನಿ ಇರಬೇಕು.
ಸಾಹಿತ್ಯ ಪರಿಷತ್ತಿನ ಅಧಿಕಾರಾವಧಿ 5 ವರ್ಷಕ್ಕೆ ಏರಿಕೆ ಮಾಡಿದ್ದು ಸರಿಯೇ ?: ಮೂರು ವರ್ಷದಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ನೋವು ಇತ್ತು. ಹಿಂದೆ ಚಂಪಾ, ನಲ್ಲೂರು ಪ್ರಸಾದ್ ಚಿಂತನೆ ಮಾಡಿದ್ದರು. ಯಾವುದೇ ಬದಲಾವಣೆ ಮಾಡಿದಾಗ ಆಯ್ಕೆಯಾದ ಅವಧಿ ಪೂರ್ಣಗೊಳಿಸಿ ನಂತರ ಅವಧಿಯಿಂದ ಆಯ್ಕೆಯಾಗಿ ಅದು ಅನುಷ್ಟಾನಕ್ಕೆ ಬರಬೇಕು. ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಾಗೆ ಮಾಡಿದರೆ ಮಾತ್ರ ಅದರ ಘನತೆ ಹೆಚ್ಚುತ್ತದೆ. ಆಗ ಆಪಾದನೆ ಕಡಿಮೆ ಬರಲಿದೆ.
ಪ್ರತ್ಯೇಕ ರಾಜ್ಯ ಕೂಗು ಎದ್ದಿದೆಯಲ್ಲ?: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಕೂಗು ಎದ್ದಾಗ ಜನ ಮನ್ನಣೆ ಇದೆಯಾ ಎನ್ನುವುದನ್ನು ನೋಡಬೇಕು. ಚಿತ್ರದುರ್ಗ ಜಿಲ್ಲೆ ಪ್ರತ್ಯೇಕ ರಾಜ್ಯದ ಕೂಗಿಗೆ ಏನು ಪ್ರತಿಕ್ರಿಯೆ ನೀಡದಂತೆ ಮಧ್ಯ ಸಿಕ್ಕಿ ಹಾಕಿಕೊಂಡಿದೆ. ಅವಕಾಶ ಇಲ್ಲದಂತೆ, ಮಧ್ಯ ಇದ್ದು ಯಾರ ಜೊತೆ ಹೋಗಬೇಕು, ಯಾರನ್ನು ಕರೆದುಕೊಂಡು ಹೋಗಬೇಕು. ಈ ಜಿಲ್ಲೆಯನ್ನು ಯಾರೂ ಬಿಡಿಸಿಕೊಳ್ಳುವ ಮಟ್ಟ ಇದ್ದಂತೆ ಕಾಣುತ್ತಿಲ್ಲ.
ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಆಗಬೇಕೆ?: ಸಮ್ಮೇಳನ ಕೇವಲ ಸಾಹಿತ್ಯ, ಬರಹಕ್ಕೆ ಮೀಸಲಾಗಿಲ್ಲ. ಬಡ, ಮಧ್ಯಮ ವರ್ಗದ ಬದುಕನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಜವಾಬ್ದಾರಿ ನಿರ್ವಹಿಸಬೇಕು. ಇಲ್ಲದಿದ್ದರೆ ಸಾಹಿತಿಗಳು, ಪತ್ರಕರ್ತರು, ಬುದ್ಧಿಜೀವಿಗಳು ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ಆದ್ದರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೂಗು ಎದ್ದೇಳಬೇಕು. ಜಿಲ್ಲೆಯ ಪ್ರಗತಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು. ಜನ ತಮ್ಮ ಹೊಣೆಗಾರಿಕೆ ಅರಿತು ಸ್ವಯಂ ನಾಯಕತ್ವ ಬೆಳೆಸಿಕೊಳ್ಳಬೇಕು.
ಹರಿಯಬ್ಬೆ ಹೆಂಜಾರಪ್ಪ