Advertisement

ಪೊಲೀಸರ ಒಳ್ಳೆ ಕೆಲಸಕ್ಕೆ ಮೆಚ್ಚುಗೆ ಇರಲಿ: ಐಜಿಪಿ

07:25 AM Jan 29, 2019 | |

ಮೈಸೂರು: ದಿನದ 24 ಗಂಟೆ ಕೆಲಸ ಮಾಡುವ ಪೊಲೀಸ್‌ ಇಲಾಖೆಯ ಲೋಪದೋಷಗಳನ್ನು ಬೆಟ್ಟು ಮಾಡಿ ತೋರಿಸುವವರು, ಒಳ್ಳೆಯ ಕೆಲಸವಾದಾಗ ಪ್ರಶಂಸೆಯನ್ನೂ ವ್ಯಕ್ತಪಡಿಸಬೇಕು ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ಹೇಳಿದರು. ಐಪಿಎಸ್‌ ಅಧಿಕಾರಿ ಡಾ.ಧರಣೀದೇವಿ ಮಾಲಗತ್ತಿ ಅವರ ಕೃತಿಗಳ ಲೋಕಾರ್ಪಣೆ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪೊಲೀಸ್‌ ಇಲಾಖೆಯ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತವೆ. ಆದರೆ, ಪೊಲೀಸ್‌ ಇಲಾಖೆ ಇಲ್ಲದ ಅರ್ಧ ದಿನವನ್ನು ಊಹಿಸಿಕೊಳ್ಳಿ, ಸಾರ್ವಜನಿಕರ ಬದುಕು ಹೇಗಿರುತ್ತದೆ ಎಂದು, ಸಂಚಾರ ಸಮಸ್ಯೆ, ಕಳ್ಳತನ, ಕೊಲೆ ಈ ರೀತಿಯ ಅನೇಕ ಸಮಸ್ಯೆಗಳಾದಾಗ ಪೊಲೀಸ್‌ ಇಲಾಖೆ ಬೇಕಾಗುತ್ತದೆ ಎಂದು ಹೇಳಿದರು.

ಸಾಹಿತ್ಯ ಪ್ರೇಮಿಗಳ ತವರು: ಮೈಸೂರು ಸಾಹಿತ್ಯ ಪ್ರೇಮಿಗಳ ತವರು. ಇಲ್ಲಿನ ಅನೇಕರು ಸಾಹಿತಿಗಳಾಗಿ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪೊಲೀಸ್‌ ಇಲಾಖೆಯಲ್ಲೂ ಅನೇಕ ಮಂದಿ ಸಾಹಿತಿಗಳಿದ್ದಾರೆ. ಅವರಲ್ಲಿ ಧರಣೀದೇವಿಯವರು ಮುಂಚೂಣಿಯಲ್ಲಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿನ ಒತ್ತಡದ ಕೆಲಸದ ನಡುವೆಯೂ ಇವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಒಂದು ಪುಸ್ತಕ ಬರೆಯಬೇಕೆಂದರೆ ಸಾಕಷ್ಟು ಅಧ್ಯಯನ ಮಾಡಬೇಕಾಗುತ್ತದೆ. ಜನರು ಹಾಗೂ ಸಮಾಜದ ಬಗ್ಗೆ ಕಾಳಜಿ ಇರಬೇಕಾಗುತ್ತದೆ. ಇವುಗಳು ಧರಣೀದೇವಿ ಅವರಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರಣೀದೇವಿಯವರು ಬರೆದಿರುವ ಈ ಪುಸ್ತಕದಲ್ಲಿ ಬೇರೆ ಬೇರೆ ರೀತಿಯ ಸಾಕಷ್ಟು ಅಂಶಗಳಿವೆ, ಗದ್ಯ ಬರೆಯಬಹುದು, ಆದರೆ, ಒಟ್ಟು ವಿಷಯವನ್ನು ಚುಟುಕಾಗಿ ಬರೆಯುವುದು ಕಷ್ಟದ ಕೆಲಸ. ಚುಟುಕಗಳ ಬಗ್ಗೆ ಓದುಗರಲ್ಲಿ ಆಸಕ್ತಿ ಹುಟ್ಟಿಸಿ, ಓದಿಸಿಕೊಂಡು ಹೋಗಬೇಕಾದರೆ ಬರೆಯುವವರಿಗೆ ಸಾಕಷ್ಟು ಶ್ರಮ, ಕ್ರಿಯಾಶೀಲತೆ ಇರಬೇಕಾಗುತ್ತದೆ. ಧರಣೀದೇವಿಯವರು ಈ ಕಠಿಣ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಇದೇ ಸಂದರ್ಭದಲ್ಲಿ ಧರಣೀದೇವಿ ಮಾಲಗತ್ತಿ ಯವರು ರಚಿಸಿರುವ ಧರಣೀ ಚುಟುಕು ಕವಿತೆಗಳು ಹಾಗೂ ಭಾಗವತ ಭಾವಗೀತ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ವಿಮರ್ಶಕ ಡಾ. ಸಿ. ನಾಗಣ್ಣ ಕೃತಿ ಕುರಿತು ಮಾತನಾಡಿದರು.

Advertisement

ವಿಶ್ರಾಂತ ಪೊಲೀಸ್‌ ಅಧಿಕಾರಿ ಬಸವರಾಜ ಮಾಲಗತ್ತಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್‌. ಸತೀಶ್‌, ಅನ್ವೇಷಣಾ ಸೇವಾ ಟ್ರಸ್ಟ್‌ನ ಸ್ಥಾಪಕ ಕಾರ್ಯ ದರ್ಶಿ ಅಮರನಾಥರಾಜೇ ಅರಸ್‌, ನೃಪತುಂಗ ಚಾರಿಟಬಲ್‌ ಟ್ರಸ್ಟ್‌ ಸ್ಥಾಪಕ ಧರ್ಮದರ್ಶಿ ಎಸ್‌.ಎಂ.ಪ್ರಸಾದ್‌, ವೈದ್ಯವಾರ್ತಾ ಪ್ರಕಾಶನದ ಡಾ.ಎಂ.ಜಿ.ಆರ್‌.ಅರಸ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next