ಮೈಸೂರು: ಅತಿವೃಷ್ಟಿಯಿಂದ ಭಾರೀ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಗೆ ಕೇಂದ್ರಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಕೊಡಗು ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿ ಬಂದಿದ್ದೇನೆ. ಸ್ವಾತಂತ್ರಾéನಂತರ ಕೊಡಗು ಜಿಲ್ಲೆಯಲ್ಲಿ ಬಹು ದೊಡ್ಡ ಅನಾಹುತ ಸಂಭವಿಸಿದೆ. ರಸ್ತೆ,ಮನೆಗಳೆಲ್ಲಾ ಹಾನೀಗೀಡಾಗಿದ್ದು, ಮಕ್ಕಳು ಶಾಲೆಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು.
ಕೇರಳ ರಾಜ್ಯಕ್ಕೆ ಇನ್ನೂ ಹೆಚ್ಚಿನ ಪರಿಹಾರ ಘೋಷಣೆ ಮಾಡಬೇಕಿತ್ತು ಎಂದ ಅವರು, ಹಾಗೆ ನೋಡಿದರೆ ಕೊಡಗಿಗೆ ಇವತ್ತಿನವರೆಗೆ ಕೇಂದ್ರ ಸರ್ಕಾರ ಏನೂ ಕೊಟ್ಟಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಕೊಡಗಿಗೆ ಪರಿಹಾರ ಘೋಷಣೆ ಮಾಡದೆ ಬೇಜವಾಬ್ದಾರಿತನ ತೋರುತ್ತಿದೆ. ಸ್ವತಃ ಪ್ರಧಾನಿಮಂತ್ರಿಯವರೇ ಸಮೀಕ್ಷೆ ಮಾಡಿ ಪರಿಹಾರ ಘೋಷಿಸಬೇಕಿತ್ತು.
ಆದರೆ, ಅವರ ಪರವಾಗಿ ಬಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಲ್ಲಿಗೆ ಬರುವ ಮುನ್ನವೇ ಪ್ರಧಾನಮಂತ್ರಿಗಳ ಜೊತೆ ಚರ್ಚಿಸಿ ಬಂದು ಪರಿಹಾರ ಘೋಷಣೆ ಮಾಡಬೇಕಿತ್ತು. ಸ್ಥಳೀಯ ಸಂಸದರು ಏನು ಮಾಡುತ್ತಿದ್ದರು, ಬರೀ ಭಾಷಣ ಮಾಡೋಕಾ ಅವರು ಇರೋದು ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಗರಂ ಆದರು. ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಕೊಡಗಿನ ಜನತೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುವ ಸಾರ್ವಜನಿಕರಿಗೆ ಸಿದ್ದರಾಮಯ್ಯ ಧನ್ಯವಾದ ಹೇಳಿದರು.
ಸಿದ್ದು ಯುರೋಪ್ ಪ್ರವಾಸ: ತಮ್ಮ ಮಗ ಡಾ.ಯತೀಂದ್ರ ಜೊತೆಗೆ ಸೆ. 3ರಿಂದ ಯುರೋಪ್ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಲಂಡನ್‌ನಲ್ಲಿರುವ ನನ್ನ ಸ್ನೇಹಿತ ಬಹಳ ವರ್ಷಗಳಿಂದ ಅಲ್ಲಿಗೆ ಬರುವಂತೆ ಕರೆಯುತ್ತಿದ್ದಾನೆ. ಮುಖ್ಯಮಂತ್ರಿಯಾಗಿದ್ದಾಗ ಪ್ರವಾಸ ಹೋಗಲು ಆಗಿರಲಿಲ್ಲ. ಹೀಗಾಗಿ ಈಗ ಪ್ರವಾಸಕ್ಕೆ ಹೋಗುತ್ತಿದ್ದು, ನನ್ನ ಜೊತೆಗೆ ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಕೂಡ ಬರಲಿದ್ದಾರೆ ಎಂದರು.
ಮತ್ತೂಮ್ಮೆ ಸಿಎಂ-ಏನಾದ್ರು ಅರ್ಥ ಕಲ್ಪಿಸಿಕೊಳ್ಳಿ: ಹೊಳೆನರಸೀಪುರ ತಾಲೂಕಿನ ಹಾಡ್ಯದಲ್ಲಿ ಶನಿವಾರ ನಾನು ಇನ್ನೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ನೀಡಿದ ಹೇಳಿಕೆ ಬಗ್ಗೆ ಯಾರು ಏನಾದರೂ ಅರ್ಥ ಕಲ್ಪಿಸಿಕೊಳ್ಳಲಿ, ಜನರ ಆಶೀರ್ವಾದ ಇದ್ದರೆ ಇನ್ನೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಪುನರುತ್ಛರಿಸಿದರು.
ಹಾಡ್ಯ ಗ್ರಾಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಸ್ಥಳೀಯರು ಹಲವಾರು ಬೇಡಿಕೆಗಳನ್ನಿಟ್ಟರು, ಅದನ್ನೆಲ್ಲಾ ಈಡೇರಿಸಬೇಕಾದರೆ ನಮ್ಮ ಸರ್ಕಾರ ಬರಬೇಕು ಎಂಬ ಅರ್ಥದಲ್ಲಿ ರಾಜ್ಯದಲ್ಲಿ ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಆಗ ನೀವು ಹೇಳಿದ ಕೆಲಸಗಳನ್ನೆಲ್ಲಾ ಮಾಡಿಕೊಡೋಣ ಎಂದಿದ್ದೇನೆ ಅದರಲ್ಲಿ ತಪ್ಪೇನು? ಜನ ಕೇಳಿದಾಗ ನಮ್ಮ ಪಕ್ಷ ಅಧಿಕಾರಕ್ಕೆ ಬರಲ್ಲಾ ಅನ್ನುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ ಅವರು, ಈ ಸರ್ಕಾರ ಐದು ವರ್ಷ ಪೂರೈಸಲಿ ಮುಂದೆ ನೋಡೋಣ ಎಂದರು.