Advertisement

ನೀರಿನ ಸಂರಕ್ಷಣೆಗೆ ಯುವ ಜನತೆ ಕೈಜೋಡಿಸಲಿ

12:50 AM Jun 27, 2019 | mahesh |

ಕಾಲ-ಕಾಲಕ್ಕೆ ತಕ್ಕಂತೆ ಮಳೆ, ಬೆಳೆಯಿಂದ ಸಮೃದ್ಧವಾಗಿದ್ದ ಕರಾವಳಿ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಕುಡಿಯಲು ನೀರಿಲ್ಲದ ಸ್ಥಿತಿ ಉಂಟಾಗಿದೆ. ಲೆಕ್ಕಕ್ಕಿಂತ ಅಧಿಕ ಮಳೆ ಬಂದರೂ ನದಿ, ಹೊಳೆ, ತೋಡು, ಕೆರೆ ಬಾವಿಗಳು ಬೇಸಗೆ ಮೊದಲೇ ಬತ್ತುತ್ತಿವೆ. ಹೀಗಾಗಿ ಅಂತರ್ಜಲಕ್ಕೆ ಸಂರಕ್ಷಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನಗಳು ನಡೆಯುತ್ತಿವೆ.

Advertisement

ಯುವ ಸಮುದಾಯ ಆ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಿದಲ್ಲಿ ಬೀರಬಹುದಾದ ಪರಿಣಾಮ ದೊಡ್ಡದು. ಯುವ ಸಮುದಾಯವನ್ನು ನೀರಿಂಗಿಸುವ ನಿಟ್ಟಿನಲ್ಲಿ ಜಾಗೃತಿ ಗೊಳಿಸುವ, ಅಣಿಗೊಳಿಸುವ ಪ್ರಯತ್ನ ಹೆಚ್ಚಾಗಬೇಕಿದೆ.

ಮಳೆ ಕೊಯ್ಲು ಅಗತ್ಯ
ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಮಳೆಕೊಯ್ಲು, ಮಳೆ ನೀರು ಮರು ಬಳಕೆಯಂತಹ ಪ್ರಯತ್ನ ನಡೆಯುತ್ತದೆ. ಸರಕಾರ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಅಂತರ್ಜಲ ಸಂರಕ್ಷಣೆ ಕಡ್ಡಾಯ ನೀತಿ ಅನುಸರಿಸಬೇಕು. ಮನೆ ಮನೆಗಳಲ್ಲಿ ಮಳೆ ನೀರನ್ನು ಇಂಗಿಸುವ ಬಗ್ಗೆ ಮಕ್ಕಳಿಗೆ ತಿಳಿಹೇಳಿದಲ್ಲಿ ಉತ್ತಮ ಫಲಿತಾಂಶ ದೊರೆಯಬಹುದು.

ಯುವ ಸಂಘಟನೆಗಳು ಕೂಡ ಮುತುವರ್ಜಿ ತೋರುತ್ತಿದ್ದರೂ, ಅದರ ಪ್ರಮಾಣ ದ್ವಿಗುಣಗೊಳ್ಳಬೇಕಿದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ವನಮಹೋತ್ಸವದಂತಹ ಆಚರಣೆಗಳ ಜತೆಗೆ ಮಳೆಗಾಲದಲ್ಲಿ ಮಳೆಕೊಯ್ಲ ಪದ್ಧತಿ ಅಳವಡಿಸಲು ಯುವಕ ಮಂಡಲ, ಯುವತಿ ಮಂಡಲ ಒತ್ತು ನೀಡಬೇಕು. ಸರಕಾರವು ಈ ಸಂಘಗಳನ್ನು ಬಳಸಿ ಅಂತರ್ಜಲ ಸಂರಕ್ಷಣೆ ಕಾರ್ಯ ಅನುಷ್ಠಾನಿಸಿದರೆ ಗ್ರಾಮ ಮಟ್ಟದಲ್ಲಿ ವಿಸ್ತರಿಸಲು ಸಾಧ್ಯ ವಾಗುತ್ತದೆ. ಎನ್‌ಜಿಓ ಸಂಸ್ಥೆಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುವ ಅಗತ್ಯ ಇದೆ.

ಮಳೆನೀರು ಕೊಯ್ಲು ಎಂಬುದು ಮಳೆ ನೀರನ್ನು ಒಟ್ಟುಗೂಡಿಸುವ ಅಥವಾ ಸಂಚಯನ ಮಾಡುವ ಮತ್ತು ಶೇಖರಿಸಿಟ್ಟುಕೊಳ್ಳುವ ವಿಧಾನಕ್ಕಿರುವ ಹೆಸರು. ಅಂತರ್ಜಲ ಮರುಪೂರಣ ಕಾರ್ಯ ಎಂದು ಕರೆಯಲಾಗುವ ಪ್ರಕ್ರಿಯೆಯಿದು. ಮನೆಗಳು, ಸಾರ್ವಜನಿಕ ಕಟ್ಟಡಗಳ ಛಾವಣಿಗಳಿಂದ ಅಥವಾ ವಿಶೇಷವಾಗಿ ಸಿದ್ಧಗೊಳಿಸಲಾದ ನೆಲದ ಪ್ರದೇಶಗಳಿಂದ ಸಂಗ್ರಹಿಸಲಾದ ಮಳೆನೀರು, ಕುಡಿಯುವ ನೀರಿಗೆ ಇದು ಸಹಕಾರಿ. ಛಾವಣಿಯ ಮಳೆನೀರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ್ದಾಗಿರುತ್ತದೆಯಾದ್ದರಿಂದ, ಬಳಕೆಗೆ ಮೊದಲು ಅದನ್ನು ಸಂಸ್ಕರಿಸುವ ಅಗತ್ಯ ಕಂಡು ಬರುವುದಿಲ್ಲ. ಸರಳವಾದ ವಿಧಾನದಿಂದ ಮೊದಲ್ಗೊಂಡು ಸಂಕೀರ್ಣವಾದ ಕೈಗಾರಿಕಾ ವ್ಯವಸ್ಥೆಗಳವರೆಗೆ, ಮಳೆನೀರು ಸಂರಕ್ಷಿಸುವ ಹಲವಾರು ವಿಧದ ವ್ಯವಸ್ಥೆಗಳಿವೆ.

Advertisement

ಮಳೆ ನೀರನ್ನು ನೆಲದಿಂದ ಇಲ್ಲವೇ ಛಾವಣಿಯಿಂದ ಕೊಯ್ಲು ಮಾಡಲಾಗುತ್ತದೆ. ಈ ಎರಡು ವ್ಯವಸ್ಥೆಗಳಿಂದ ನೀರನ್ನು ಸಂಗ್ರಹಿಸಬಹುದಾದ ವೇಗವು ಯೋಜನಾ ಪ್ರದೇಶ, ಅದರ ಸಾಮರ್ಥ್ಯ ಮತ್ತು ಮಳೆಯಾಗುವ ತೀವ್ರತೆ ಅವಲಂಬಿಸಿರುತ್ತದೆ. ನೆಲದ ಸಂಗ್ರಹಣೆಗಳ ವ್ಯವಸ್ಥೆಗಳು ನೀರನ್ನು ಒಂದು ಸಿದ್ಧಪಡಿಸಲಾದ ಸಂಗ್ರಹಣಾ ಪ್ರದೇಶದಿಂದ ಶೇಖರಣಾ ಪ್ರದೇಶಕ್ಕೆ ಹರಿಸುತ್ತವೆ. ಛಾವಣಿ ಸಂಗ್ರಹಣಾ ವ್ಯವಸ್ಥೆಗಳು ಛಾವಣಿಯೊಂದರ ಮೇಲೆ ಬೀಳುವ ಮಳೆ ನೀರನ್ನು ಒಂದು ವ್ಯವಸ್ಥೆಯ ಮೂಲಕ ಸಂಗ್ರಹಿಸುವುದು. ಹೀಗೆ ಮಳೆನೀರನ್ನು ಅಂತರ್ಜಲ ಮರುಪೂರಣ ಕಾರ್ಯಕ್ಕೂ ಬಳಸಬಹುದಾಗಿದ್ದು, ಇದರಲ್ಲಿ ನೆಲದ ಮೇಲೆ ಹರಿಯುವ ಹೆಚ್ಚುವರಿ ಪ್ರಮಾಣದ ನೀರು ಸಂಗ್ರಹಿಸಲ್ಪಡುತ್ತದೆ ಹಾಗೂ ಹೀರಿಕೆಗೆ ಒಳಗಾಗುವುದರ ಮೂಲಕ ಅಂತರ್ಜಲದ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾಗುತ್ತದೆ.

ಹೀಗೆ ಸ್ಥಳೀಯವಾಗಿ ದೊರೆಯುವ ಹೆಚ್ಚು ದುಬಾರಿಯಲ್ಲದ ಸಾಮಗ್ರಿಗಳಿಂದ ಮಳೆನೀರು ಕೊಯ್ಲಿನ ವ್ಯವಸ್ಥೆಗಳನ್ನು ಸರಳವಾಗಿ ನಿರ್ಮಿಸಬಹುದು. ಹಾಗಾಗಿ ಸಂಘ ಸಂಸ್ಥೆಗಳು, ಯುವ ಸಂಘಟನೆಗಳು ಆಯಾ ಗ್ರಾಮಗಳಲ್ಲಿ ಮನೆ ಮನೆ ಭೇಟಿ ಮೂಲಕ ಇದರ ವಿಧಾನ, ಅಳವಡಿಕೆ ಲಾಭದ ಬಗ್ಗೆ ಮನವರಿಕೆ ಮಾಡಿಕೊಡಬೇಕು.

••••ಕಿರಣ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next