ಕಾರವಾರ: ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯಾಗಿ ರಾಜ್ಯದಲ್ಲಿ ಹೊರ ಹೊಮ್ಮಲು ಗ್ರಾಪಂಗಳು ಕ್ರಿಯಾಶೀಲ ಕಾರ್ಯ ಮಾಡಬೇಕಾಗಿದೆ ಎಂದು ಜಿಪಂ ಅಧ್ಯಕ್ಷೆ ಜಯಶ್ರೀ ಮೋಗೇರ ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಪಂ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಹಮ್ಮಿಕೊಂಡ ಸ್ವಚ್ಛತಾ ರಥ ಕಲಾ ಜಾಥಾಕ್ಕೆ ಸೋಮವಾರ ಜಿಪಂ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕಲಾ ಜಾಥಾದ ಕಲಾವಿದರು ಗ್ರಾಪಂಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾನಪದದ ಮೂಲಕ ಅರಿವು ಮೂಡಿಸುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಿಪಂ ಸಿಇಒ ಎಂ. ರೋಶನ್ ಮಾತನಾಡಿ, ಈಗಾಗಲೇ ಗೋಕರ್ಣ ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಮಾಡಲಾಗಿದ್ದು, ಇದರಿಂದ ಉತ್ತಮ ಸ್ಪಂದನೆ ದೊರಕಿದೆ. ಗ್ರಾಪಂ ಪಕ್ಕದಲ್ಲೇ ಹಸಿ ಕಸ ಮತ್ತು ಒಣ ಕಸ ನಿರ್ವಹಣೆ ಯಶಸ್ವಿಯಾಗಿದೆ. ಇದು ಜಿಲ್ಲೆಯ ಇತರೆ ಗ್ರಾಪಂಗಳಿಗೆ ಮಾದರಿ ಎಂದರು. ಮುಂದಿನ ದಿನಗಳಲ್ಲಿ ಇನ್ನುಳಿದ ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸುವ ಮೂಲಕ ಸ್ವಚ್ಛ ಗ್ರಾಮ ಯಶೋಗಾಥೆ ಹಾಡಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯ 80 ಗ್ರಾಪಂ ವ್ಯಾಪ್ತಿಯಲ್ಲಿ ಮುಂದಿನ 40 ದಿನಗಳವರೆಗೆ, ಪ್ರತಿ ದಿನಕ್ಕೆ ಎರಡು ಗ್ರಾಪಂಗಳಿಗೆ ಸ್ವಚ್ಛ ರಥದ ಕಲಾ ಜಾಥಾ ಭೇಟಿ ನೀಡಿ, ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಿದೆ ಎಂದು ಜಾಥಾದ ನೇತೃತ್ವ ವಹಿಸಿರುವ ಪುರುಷೋತ್ತಮ ಗೌಡ ಹೇಳಿದರು.
ಈ ಕಲಾ ಜಾಥಾ ಮೂಲಕ ಸಂಚಾರಿ ವಾಹನ ತೆರಳಿದ್ದು, ಕಲಾವಿದರು ಬೀದಿನಾಟಕ, ಹಾಡು, ಜಾನಪದ ಗೀತೆಗಳ ಮೂಲಕ ಜನಜಾಗೃತಿ ಮೂಡಿಸಲಿದ್ದೇವೆ. ಕಲಾ ಜಾಥಾ ಭೇಟಿ ನೀಡುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸ್ವಚ್ಛ ರಥ ಕಾರ್ಯಕ್ರಮದ ಮಾಹಿತಿ ಪ್ರಚಾರ ಮಾಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುಬೇಕು ಎಂದರು.
ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಅಧ್ಯಕ್ಷ ಪುರುಷೋತ್ತಮ ಗೌಡ ಇತರರು ಉಪಸ್ಥಿತರಿದ್ದರು. ಕಲಾವಿದರು ಕಲಾಜಾಥಾದಲ್ಲಿ ಬೀದಿನಾಟಕ, ಜಾನಪದ ಹಾಡು ಪ್ರಸ್ತುತಪಡಿಸಿದರು.