ವಿಜಯಪುರ: ದೇಶದ ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆತ್ಮ ನಿರ್ಭರ ಭಾರತ್ ಯೋಜನೆ ಘೋಷಿಸಿದ್ದು, ಇದಕ್ಕಾಗಿ 20.97 ಲಕ್ಷ ಕೋಟಿ ರೂ. ಅನುದಾನ ಮೀಸಲಿರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಸದ್ಬಳಕೆಯಾಗಬೇಕು ಎಂದು ಕರ್ನಾಟಕ ರಾಜ್ಯ ಆರ್ಥಿಕ ಸಲಹೆಗಾರರಾದ ಕರ್ನಾಟಕ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರಧ್ಯಾಪಕ ಆರ್.ಆರ್. ಬಿರಾದಾರ ಅಭಿಪ್ರಾಯಪಟ್ಟರು.
ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನೂತನಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆನ್‌ಲೈನ್ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ವ್ಯಾಪಕ ಹರಡುವಿಕೆ ಬಳಿಕ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರಿಂದ ಇಡೀ ದೇಶದ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದ್ದಲ್ಲದೇ ದೇಶಧ ಭವಿಷ್ಯದಲ್ಲಿ ಬಲಿಷ್ಠ ಭಾರತ ನಿರ್ಮಾಣಕ್ಕೂ ತೊಡಕಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಲವು ಕಾರ್ಯಕ್ರಮ ರೂಪಿಸಿದೆ. ಆರ್ಥಿಕ ಸಂಕಷ್ಟಕ್ಕೆ ಈಡಾದವರಿಗೆ ಪರಿಹಾರ ನೀಡಲು, ಕುಸಿಯುತ್ತಿರುವ ಆರ್ಥಿಕ ಚಟುವಟಿಕೆ
ಪುನಶ್ಚೇತನಕ್ಕೆ ಆತ್ಮ ನಿರ್ಭರ ಭಾರತ್ ಅಭಿಯಾನ ಹೆಸರಿನ ಸ್ವಾವಲಂಬಿ ಭಾರತ ವಿನೂತನ ಯೋಜನೆ ಎನಿಸಿದೆ. ಇದರಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳಿಗೆ,ವಲಸೆ ಕಾರ್ಮಿಕರಿಗೆ, ಸಣ್ಣ ಮತ್ತು ಅತ್ತಿಸಣ್ಣ ರೈತರಿಗೆ, ದಿನಗೂಲಿ ಕೆಲಸಗಾರರಿಗೆ ಹೆಚ್ಚು ಪ್ರಯೋಜವಾಗಿದೆ. ಕೃಷಿ ಕ್ಷೇತ್ರ ಮೀನುಗಾರಿಕೆ, ಜೇನು ಸಾಕಾಣಿಕೆ, ಹೈನುಗಾರಿಕೆ ಸೇರಿದಂತೆ ಕೃಷಿ ಆಧಾರಿತ ವಲಯಗಳಿಗೆ ಹೆಚ್ಚಿನ ಬಂಡವಾಳ ಮತ್ತು ಹಣಕಾಸಿನ ನೆರವು ಘೋಷಣೆಯ ಮೂಲ ಉದ್ದೇಶ ಹೊಂದಿರುವ ಯೋಜನೆ ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ಬಿಎಲ್‌ಡಿಇ ಸಂಸ್ಥೆಯ ಎ.ಎಸ್. ಪಾಟೀಲ, ಕಾಮರ್ಸ್ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ| ಬಿ.ಎಸ್. ಬೆಳಗಲಿ ಮಾತನಾಡಿ, ಪ್ರಸ್ತುತ ಆರ್ಥಿಕ ಹಿಂಜರಿತಕ್ಕೆ ನೋಟು ಅಮಾನ್ಯಿàಕರಣ, ಜಿಎಸ್‌ಟಿ ಅಳವಡಿಕೆ ಹೀಗೆ ದೇಶದ ಆಂತರಿಕ ಸಂಗತಿಗಳು ಹಾಗೂ ಜಾಗತಿಕ ಆರ್ಥಿಕ ಕುಸಿತದಂತಹ ಅಂಶಗಳು ಈ ಆರ್ಥಿಕಸಮಸ್ಯೆಗೆ ಪ್ರಮುಖ ಕಾರಣ. ಈ ಸಮಸ್ಯೆಗಳಿಗೆಪರಿಹಾರ ಕಂಡುಕೊಳ್ಳಲು ಮಾರುಕಟ್ಟೆಯಲ್ಲಿಸರಕುಗಳಿಗೆ ಬೇಡಿಕೆ ಹೆಚ್ಚಿಸುವ ಹಣಕಾಸು, ಖಜಾನೆ ನೀತಿ ರೂಪಿಸಬೇಕಿದೆ. ದೇಶದ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾದ ಡಾ| ಅಭಿಜಿತ ಬ್ಯಾನರ್ಜಿ, ಡಾ| ರಘುರಾಮ್ ರಾಜನ್, ಡಾ| ಕೌಶಿಕ ಬಸು ಅವರಂಥ ತಜ್ಞರು ಪ್ರಸ್ತುತ ಬಹುಸಂಖ್ಯಾತ ರಾಜಕೀಯ ವ್ಯವಸ್ಥೆಯ ಅಭಿವೃದ್ಧಿಗೆಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ವಿಶ್ಲೇಷಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎಸ್.ಪಿ. ಮದ್ರೇಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಘಟಕ ಡಾ| ಎ.ಟಿ. ಶ್ರೀನಿವಾಸ, ಡಾ| ಮೀನಾಕ್ಷಿ ಖೇಡ್, ಪ್ರೊ| ಆರ್.ಬಿ. ಸಿರಸಂಗಿ, ಪ್ರೊ| ಚವ್ಹಾಣ ಇತರರು ಇದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಚ್.ಎಂ. ಸಜ್ಜಾದೆ ವಂದಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕ ಡಾ| ವೈ. ತಮ್ಮಣ್ಣ ಸ್ವಾಗತಿಸಿದರು. ಪ್ರೊ| ಶೋಭಾ ತುಳಜಾನವರ ನಿರೂಪಿಸಿದರು.