ಮೂಡುಬಿದಿರೆ: ಕೇರಳ, ತಮಿಳುನಾಡಿನಲ್ಲಿ ಸನಾತನ ಧರ್ಮ ಎದುರಿಸುತ್ತಿರುವ ಸವಾಲುಗಳು ಭವಿಷ್ಯದಲ್ಲಿ ಕರ್ನಾಟಕಕ್ಕೂ ಬರ ಬಹುದು. ಎಲ್ಲೆಲ್ಲ ಸನಾತನ ಹಿಂದೂಧರ್ಮಕ್ಕೆ ಏಟು ಬೀಳುತ್ತಿದೆಯೊ ಅಲ್ಲೆಲ್ಲಾ ನಾವು ಪ್ರತಿರೋಧ ತೋರಿಸ ಬೇಕು. ಇಂಥ ಘಟನೆಗಳು ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಸರಕಾರಕ್ಕೆ ಒತ್ತಡ ಹೇರಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಕರೆ ಇತ್ತರು.
ಅಖೀಲ ಭಾರತ ಸಂತ ಸಮಿತಿ ಕರ್ನಾಟಕ ಪ್ರಾಂತ ಕಮಿಟಿ ಹಾಗೂ ಮೂಡುಬಿದಿರೆಯ ಶ್ರೀ ದಿಗಂಬರ ಜೈನ ಮಠದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಹಾವೀರ ಭವನ ದಲ್ಲಿ ನಡೆದ ಕೊಡಗು, ದ.ಕ. ಹಾಗೂ ಉಡುಪಿ ಮೂರು ಜಿಲ್ಲೆಗಳ ಸಂತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಾದಕ ದ್ರವ್ಯ ಪೂರೈಸಿ ಯುವಜನತೆಯನ್ನು, ವಿವಿಧ ಆಮಿಷ ಒಡ್ಡಿ ಬಾಲಕಿಯರನ್ನು ದುಷ್ಕೃತ್ಯಕ್ಕೆ ಬಳಸಿಕೊಳ್ಳಲಾಗು ತ್ತಿದೆ. ಇದನ್ನು ತಡೆಯಲು ನಾವೆಲ್ಲರೂ ಒಂದಾಗಬೇಕು ಎಂದರು.
ಸಂತರಲ್ಲಿ ಏಕತೆ ಅಗತ್ಯ
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಸಂತರು ಏಕತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ನಮ್ಮ
ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತ ಕ್ಷೇತ್ರಗಳನ್ನು ಅಪವಿತ್ರ ಗೊಳಿಸುವುದನ್ನು ತಡೆಯುವ ಪ್ರಯತ್ನ ಆಗಬೇಕು. ಇಡೀ ಪ್ರಪಂಚದಲ್ಲಿ ಹಿಂದೂ ಧರ್ಮದ ಬಗ್ಗೆ ಗೌರವ ಇದೆ. ಅದರೆ ಭಾರತದಲ್ಲಿ ಧರ್ಮದ ಅವಹೇಳನ ಆಗುತ್ತಿರುವುದು ದುರಂತ ಎಂದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ, ನಮ್ಮ ಧರ್ಮದ ಬಗ್ಗೆ ನಮ್ಮ ಹಿಂದೂ ಗಳೇ ತೊಂದರೆ ಕೊಡುತ್ತಿರುವುದು ಆಘಾತಕಾರಿ. ಈ ಬಗ್ಗೆ ಸಂತರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.ಸಮಿತಿಯ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ಸ್ವಾಮೀಜಿ ಪ್ರಸ್ತಾವನೆ ಗೈದರು.ಮಾಣಿಲ ಮೋಹನದಾಸ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಕೇರಳ ಕಾಲಡಿ ಶಂಕರ ಮಠದ ಸಾಯೀಶ್ವರಾನಂದ ಸ್ವಾಮೀಜಿ, ಚಿಕ್ಕಮಗಳೂರು ಕಡೂರು ಅಯ್ಯಪ್ಪ ಧರ್ಮಪೀಠದ ಬದ್ರರಾಜ್ ಸ್ವಾಮೀಜಿ, ಉಡುಪಿ ಶಂಕರಪುರ ಸಾಯಿ ಧರ್ಮ ಪೀಠದ ಈಶ್ವರ ಗುರೂಜಿ, ಮಂಗಳೂರು ಚಿಲಿಂಬಿಯ ಓಂ ಶ್ರೀ ಮಠದ ಶಿವಜ್ಞಾನ ಮಾಯಿ ಸ್ವಾಮೀಜಿ, ಧಾರವಾಡದ ಪರಮಾತ್ಮ ಸ್ವಾಮೀಜಿ, ರಾಜ್ಯ ಕಮಿಟಿಯ ಸಹ ಅಧ್ಯಕ್ಷೆ ಮಾತಾಶ್ರೀ ಓಂ ಶ್ರೀಶಿವಜ್ಞಾನಮಣಿ ಸರಸ್ವತಿ ಸಾ Ìಮಿ ಭಾಗವಹಿಸಿದ್ದರು.ವಕೀಲ ಎಂ. ಬಾಹುಬಲಿ ಪ್ರಸಾದ್ ಸ್ವಾಗತಿಸಿ, ಸಮಿತಿಯ ರಾಜ್ಯಾಧ್ಯಕ್ಷ, ಚಿಲಿಂಬಿ ಓಂ ಶ್ರೀ ಮಠದ ಮಹಾಮಂಡಲೇಶ್ವರ ವಿದ್ಯಾನಂದ ಸರಸ್ವತಿ ಸ್ವಾಮೀಜಿ ನಿರೂಪಿಸಿದರು.
ಜತೆಯಾಗಿ ಕೆಲಸ ಮಾಡೋಣ
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮ ಸದಾ ಇರುವಂತದ್ದು. ಸನಾತನ ಧರ್ಮ ಮತ್ತು ಜೈನ ಧರ್ಮ ಸಹೋದರರು ಇದ್ದಂತೆ. ನಾವೆಲ್ಲ ಜಡವಾಗಿರದೆ ಜತೆಯಾಗಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.