Advertisement

ಪ್ರಕೃತಿಗೆ ಅನುಗುಣವಾಗಿ ಬದುಕಲು ಪ್ರಯತ್ನಿಸೋಣ: ಜಯಲಕ್ಷ್ಮೀ ಶೆಟ್ಟಿ

12:33 PM Sep 04, 2019 | Suhan S |

ಮುಂಬಯಿ, ಸೆ. 3: ಹಿಂದೆ ನಾವೆಲ್ಲ ಭಗವಂತ ಕಲ್ಪಿಸಿಕೊಟ್ಟ ಪ್ರಕೃತಿ ಸೌಂದರ್ಯಕ್ಕೆಮೈ ಒಡ್ಡಿ ಬದುಕು ನಡೆಸಿದವರು. ಆಡಂಬರ ರಹಿತವಾದ ಬದುಕಿಗೆ ಒತ್ತು ನೀಡಿ ಬೆಳೆದು ಬಂದವರು. ಪರಸ್ಪರ ಪ್ರೀತಿ, ವಿಶ್ವಾಸ, ಗೌರವದ ಜೊತೆಗೆ ಬೇನೆ-ಬೇಸರ, ಸುಖ -ಕಷ್ಟ ಎಲ್ಲವನ್ನು ಹಂಚಿಕೊಂಡು ಜೀವನ ಸಾಗಿಸಿದವರು. ತೋಟ, ಗದ್ದೆ, ಕೃಷಿ, ಜಲ, ನೆಲ, ಸಂಸ್ಕಾರ- ಸಂಸ್ಕೃತಿ, ನ್ಯಾಯ-ನೀತಿ, ಧರ್ಮ-ನಿಷ್ಠೆ, ಶಿಸ್ತು ಎಲ್ಲವನ್ನು ಪಾಲಿಸಿಕೊಂಡು ಪ್ರಕೃತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ಮಾಡದೆ ತಮ್ಮ ಯಶಸ್ಸನ್ನು ಕಂಡ ನಮ್ಮ ಹಿರಿಯರೇ ನಮಗೆ ಆದರ್ಶಪ್ರಾಯರು ಎಂದು ಇದೀಗ ನಮಗೆ ಮನವರಿಕೆ ಆಗುತ್ತಿದೆ. ಈ ಜಾಗತೀಕರಣ ಮತ್ತು ಅಭಿವೃದ್ಧಿಯ ಯೋಜನೆಯಡಿ ನಾವು ನಮ್ಮ ಮೂಲ ಸಿದ್ಧಾಂತಗಳನ್ನು ಮರೆಯುತ್ತಿದ್ದೇವೆ. ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿ ಮುನಿಯುವಂತಹ ಕೆಲಸ ಅನೇಕ ಕಡೆ ಆಗುತ್ತಿದೆ ಎಂದರೆ ತಪ್ಪಾಗಲಾರದು. ಜಲ, ನೆಲ, ಸನಾತನ ಧರ್ಮವನ್ನು ಉಳಿಸಿಕೊಂಡು ಭಾರತಾಂಬೆಯ ಮಡಿಲಲ್ಲಿ ಬದುಕೋಣ. ಪ್ರಕೃತಿಗೆ ಈ ಭೂಮಿ ತಾಯಿಗೆ ನೋವಾಗುವ ಕಾರ್ಯವನ್ನು ಯಾವತ್ತೂ ಮಾಡದಿರೋಣ. ಪ್ರಕೃತಿ ಸೌಂದರ್ಯಕ್ಕೆ ಪೂರಕವಾಗಿ ಬದುವುದಕ್ಕೆ ಪ್ರಯತ್ನಿಸೋಣ ಎಂದು ಗಾಯತ್ರಿ ಪರಿವಾರದ ಹಿರಿಯ ಸದಸ್ಯೆ, ಸಾಮಾಜಿಕ ಚಿಂತಕಿ ಜಯಲಕ್ಷ್ಮೀ ಹರೀಶ್‌ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಅವರು ಇತ್ತೀಚೆಗೆ ಬಂಟರ ಸಂಘದ ಭಿವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ 20ನೇ ತಿಂಗಳ ಮಾಸಿಕ ಮಹಾಸಭೆ ಸಂದರ್ಭದಲ್ಲಿ ಆಯೋಜಿಸಿದ ಆಟಿದ ನೆಂಪು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಾವು ಸರಳತೆಗೆ ಮಹತ್ವ ನೀಡೋಣ. ಹಿಂದೆ ಆಟಿ ಮತ್ತು ಸೋಣ ಈ ಎರಡು ತಿಂಗಳುಗಳ ನಮ್ಮ ಬದುಕು ಹೇಗಿತ್ತು ಎಂಬುದನ್ನು ಒಂದೊಮ್ಮೆ ಮೆಲುಕು ಹಾಕೋಣ. ನವ ಭಾರತದ ಕನಸುಗಳನ್ನು ಕಾಣುತ್ತಿರುವ ಈ ದಿನಗಳಲ್ಲಿ ಪರಿವರ್ತನೆ ಅಗತ್ಯಬೇಕು. ಮೂಲಭೂತ ಸೌಕರ್ಯಬೇಕು, ಅಧ್ಯಾತ್ಮಿಕತೆ ನಮಗೆ ಬೇಕು ಎಂದ ಅವರು, ಕೇವಲ ಐಶ್ವರ್ಯದ ಹಿಂದೆ ಬೀಳದೆ ನಮ್ಮಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸುವುದರ ಜತೆಗೆ ಅವರನ್ನು ನಮ್ಮಂಥವರಾಗುವುದಕ್ಕೆ ಪ್ರೇರೇಪಿಸಬೇಕು ಎಂದು ನುಡಿದು, ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಅವಕಾಶ ಮಾಡಿಕೊಟ್ಟ ಈ ಪ್ರಾದೇಶಿಕ ಸಮಿತಿಯವರಿಗೆ, ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಪ್ರಕಾಶ್‌ ಕುಂಠಿನಿ ದಂಪತಿ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಎನ್‌. ಶೆಟ್ಟಿ ಮಾತನಾಡಿ, ತನ್ನ ಬಾಲ್ಯದ ಜೀವನವನ್ನು ನೆನಪಿಸಿಕೊಂಡರು. ಮುಂದಿನ ವರ್ಷ ಬೃಹತ್‌ ಮಟ್ಟದಲ್ಲಿ ಇಂತಹ ಕಾರ್ಯಕ್ರಮವನ್ನು ನಾವೆಲ್ಲ ಒಟ್ಟಾಗಿ ಮಾಡೋಣ. ಜಯಲಕ್ಷ್ಮೀ ಅಕ್ಕನವರ ಮಾತುಗಳನ್ನು ಕೇಳಿ ನಾವೆಲ್ಲ ಪ್ರಭಾವಿತರಾಗಿದ್ದೇವೆ. ಸಹೋದರಿಯ ಆಶೀರ್ವಾದ ನೆರಳು ಸದಾ ನಮ್ಮ ಮೇಲಿರಲಿ ಎಂದು ಆಶೀಸಿದರು.

ವಿಶೇಷ ಆಮಂತ್ರಿತ ಆತಿಥಿ ಜಯಲಕ್ಷ್ಮೀ ಹರೀಶ್‌ ಶೆಟ್ಟಿ ಅವರನ್ನು ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಪ್ರಕಾಶ್‌ ಹೆಗ್ಡೆ ಶಾಲು ಹೊದೆಸಿ, ಹೂಗುಚ್ಛ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಪತ್ರಕರ್ತರನ್ನು, ಆಶು ಭಾಷಣ ಸ್ಪರ್ಧೆಯ ವಿಜೇತರುಗಳನ್ನು ಮತ್ತು ಸಮಾರು 30 -35 ಬಗೆಯ ತಿಂಡಿಗಳನ್ನು ಸಿದ್ಧಪಡಿಸಿ ತಂದು ಪ್ರದರ್ಶಿಸಿದ 35 ಸದಸ್ಯೆಯರನ್ನು ಪುಷ್ಪಗುಚ್ಛವನ್ನಿತ್ತು ಅಭಿನಂದಿಸಲಾಯಿತು.

ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಪ್ರವೀಣಾ ಪ್ರಕಾಶ್‌ ಶೆಟ್ಟಿ, ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿ ಸಂಚಾಲಕ ಸುಬ್ಬಯ್ಯ ಶೆಟ್ಟಿ, ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಶೋಭಾ ಅರುಣ್‌ ಶೆಟ್ಟಿ, ಕೋಶಾಧಿಕಾರಿ ಜಯಶ್ರೀ ಹರೀಶ್‌ ಶೆಟ್ಟಿ, ಜತೆ ಕಾರ್ಯದರ್ಶಿ ಶೈಲಜಾ ಮಹಾಬಲ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರೇಮಾ ಕೃಷ್ಣ ಉಪಸ್ಥಿತರಿದ್ದರು. ಕಾರ್ಯದರ್ಶಿ ಶೋಭಾ ಅರುಣ್‌ ಶೆಟ್ಟಿ ವಂದಿಸಿದರು. ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next