Advertisement

“ನಾರಾಯಣ ಗುರುಗಳ ಆದರ್ಶ ಪಾಲಿಸೋಣ’

11:03 PM Sep 18, 2019 | Sriram |

ಮಡಿಕೇರಿ:ಮೂಢ ನಂಬಿಕೆ ವಿರುದ್ಧ ಹೋರಾಡಿದ ಹಾಗೂ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಅವರು ಕರೆ ನೀಡಿದ್ದಾರೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ನಡೆದ ಬ್ರಹಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಸೇವೆಯೇ ಈಶ ಸೇವೆ ಎಂಬುದನ್ನು ಮನಗಂಡಿದ್ದ ನಾರಾಯಣ ಗುರು ಅವರು ತಿರುವಂತನಪುರಂ ನಿಂದ ಬೆಳಗಾವಿಯವರೆಗೆ ಪಾದಯಾತ್ರೆ ಹಮ್ಮಿಕೊಂಡು ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ್ದರು ಎಂದು ಅವರು ನುಡಿದರು.

ಒಂದೊಂದು ಸಮಾಜದಲ್ಲಿಯೂ ಸಹ ಒಬ್ಬೊಬ್ಬರು ಮಹಾನ್‌ ದಾರ್ಶನಿಕರು ಇರುತ್ತಾರೆ. ಸಮಾಜದ ಒಳಿತಿಗಾಗಿ ದುಡಿದಿದ್ದಾರೆ. ಎಲ್ಲರೂ ಅಭಿವೃದ್ಧಿಯತ್ತ ಚಿಂತನೆ ಮಾಡಬೇಕಿದೆ. ಎಂದು ಜಿ.ಪಂ.ಉಪಾಧಕ್ಷೆ ಲೋಕೇಶ್ವರಿ ಗೋಪಾಲ್‌ ಅವರು ಹೇಳಿದರು.

ಮಾನವ ಕುಲದ ಏಕತೆಗಾಗಿ ಶ್ರಮಿಸಿದ ನಾರಾಯಣ ಗುರು ಅವರು ಸಮಾಜ ಸುಧಾರಕರಾಗಿ ವಿಶ್ವ ಮಾನವತವಾದಿಯಾಗಿದ್ದಾರೆ ಎಂದು ಸರ್ವೋದಯ ಸಮಿತಿ ಅಧ್ಯಕ್ಷಟಿ.ಪಿ.ರಮೇಶ್‌ ಹೇಳಿದರು.

Advertisement

ಅಸ್ಪಶ್ಯತೆ ವಿರುದ್ದ ಹೋರಾಟ ಮಾಡಿದ ಶೋಷಿತ ಸಮಾಜ ಸುಧಾರಣೆಗಾಗಿ ಜೀವನವಿಡೀ ಶ್ರಮಿಸಿದ್ದಾರೆ. ಮೌಡ್ಯಗಳ ವಿರುದ್ದ ಹೋರಾಟ ಮಾಡಿ ಸಮಾಜ ಸುಧಾರಕರಾಗಿ, ಮಾನವತೆಯ ಏಕತೆಗಾಗಿ ಶ್ರಮಿಸಿದ್ದಾರೆ ಎಂದು ಅವರು ನುಡಿದರು. ಅಮಾನವೀಯ ಕಟ್ಟುಪಾಡುಗಳನ್ನು ತೊಡೆದುಹಾಕಲು ಶ್ರಮಿಸಿದ ನಾರಾಯಣ ಗುರು ಅವರ ಸತ್ಯ, ಅಹಿಂಸಾ ಮಾರ್ಗಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಅಸ್ಪಶ್ಯರಿಗೆ ದೇವಾಲಯ ಪ್ರವೇಶ ಅವಕಾಶ ಮಾಡಿದರು. ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯದಲ್ಲಿ ನೂರಾರು ದೇವಾಲಯಗಳನ್ನು ನಿರ್ಮಿಸಿ ಪ್ರತಿಯೊಬ್ಬರೂ ದೇವಾಲಯಕ್ಕೆ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿದರು ಎಂದು ಟಿ.ಪಿ.ರಮೇಶ್‌ ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್‌ ಸಾಗರ್‌ ಅವರು ಮಾತನಾಡಿದರು.

ಇಂದಿಗೂ‌ ಜಾತೀಯತೆಯನ್ನು ಕಾಣಬಹುದಾಗಿದೆ. ಇಂದಿನ ದಿನಗಳಲ್ಲಿಯೂ ಸಹ ವಾಟ್ಸ್‌ಆಪ್‌ ಸಂದೇಶದಲ್ಲಿ ಎಚ್‌ಐವಿ. ಬಾಧಿತರೊಬ್ಬರ ಸಂದೇಶ ನಿಜಕ್ಕೂ ಆಘಾತ ಉಂಟು ಮಾಡಿತು. ಅವರಲ್ಲಿನ ಜಾತಿ ವ್ಯಾಮೋಹ ಬೇಸರ ತರಿಸಿತು ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.

ನಾರಾಯಣ ಗುರು ಧರ್ಮ ಪರಿಪಾಲನಾ ಯೂನಿಯನ್‌ (ಎಸ್‌ಎನ್‌ಡಿಪಿ) ಸಂಚಾಲಕ ಕೆ.ಎನ್‌.ವಾಸು ಅವರು ಮಾತನಾಡಿದರು.

ಸಂಘಟನೆಯಿಂದ ಶಕ್ತರಾಗಬೇಕು. ವಿದ್ಯಾರ್ಜನೆಯಿಂದ ಪ್ರಬುದ್ಧರಾಗಬೇಕು ಎಂದು ಅವರು ಕರೆ ನೀಡಿದರು.ಜಿಲ್ಲೆಯಲ್ಲಿ 34 ಎಸ್‌ಎನ್‌ಡಿಪಿ ಶಾಖೆಗಳಿದ್ದು, ಸರ್ಕಾರದಿಂದ ಹಲವು ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು. ಎಲ್ಲಾ ಕಡೆ¿ ನಾರಾಯಣ ಗುರು ಸಮುದಾಯ ಭವನ ನಿರ್ಮಾಣವಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ಮನವಿ ಮಾಡಿದರು. ನಾರಾಯಣ ಗುರು ಅವರ ಸಂದೇಶಗಳು ಎಲ್ಲೆಡೆ ತಲುಪಬೇಕು ಎಂದು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ವೈ.ಆನಂದ ರಘು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಸ್ನೇಹಾ, ಜಿ.ಪಂ.ಸದಸ್ಯರಾದ ಕಲಾವತಿ ಪೂವಪ್ಪ, ಸುನಿತಾ, ಬಿಲ್ಲವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷರಾದ ಭಾಸ್ಕರ್‌, ವಾಸು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ‌ ಕೆ.ಟಿ.ದರ್ಶನ್‌, ಮಣಜೂರು ಮಂಜುನಾಥ್‌ ಮತ್ತಿತರರು ಉಪಸ್ಥಿತರಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next