ಅನಾರೋಗ್ಯಗಳು ಉಂಟಾಗುವುದು ಸಹಜ ಎಂಬ ತಪ್ಪು ಪರಿಕಲ್ಪನೆ ನಮ್ಮ ಮನಸ್ಸಿನೊಳಗೆ ಭದ್ರವಾಗಿ ಬೇರೂರಿ ಬಿಟ್ಟಿದೆ. ಔಷಧ ಉತ್ಪನ್ನಗಳ ಉದ್ಯಮ ಇಷ್ಟು ಬೃಹತ್ತಾಗಿ ಬೆಳೆದಿರುವಾಗ, ಆಸ್ಪತ್ರೆಗಳು, ವೈದ್ಯರು ಹೆಜ್ಜೆಗೊಂದು ಎಂಬಂತೆ ಇರುವಾಗ “ಕಾಯಿಲೆ ಬರುವುದು ಸಾಮಾನ್ಯ ಸಂಗತಿ’ ಎಂಬ ಸುಳ್ಳನ್ನು ನಂಬುವುದು ಸಹಜ. ನಮ್ಮ ಪೂರ್ವಿಕರು ಹೀಗಿರಲಿಲ್ಲ. ಮುಪ್ಪಾನು ಮುಪ್ಪಿನಲ್ಲೂ ಅವರು ಆರೋಗ್ಯವಾಗಿರು ತ್ತಿದ್ದರು. ಕೊನೆಯ ಉಸಿರಿನ ವರೆಗೂ ಕ್ರಿಯಾಶೀಲ ಬದುಕನ್ನು ಸವೆಸುತ್ತಿದ್ದರು. ವಯೋಸಹಜ ಮೃತ್ಯು ಉಂಟಾಗುತ್ತಿತ್ತು. ಕಾಯಿಲೆ ಉಂಟಾದರೆ ಏನೋ ತೊಂದರೆ ಇದೆ ಎಂಬ ಮನೋಭಾವನೆ ಅವರಲ್ಲಿತ್ತು.
ಒಂದು ದಿನ ನಿಮ್ಮ ಎಡಗೈ ಚಿತ್ರ ವಿಚಿತ್ರವಾಗಿ ವರ್ತಿಸಲು ತೊಡಗುತ್ತದೆ ಎಂದು ಕಲ್ಪಿಸಿಕೊಳ್ಳಿ – ಅದು ನಿಮ್ಮನ್ನು ತಿವಿಯುತ್ತದೆ, ಚಿವುಟುತ್ತದೆ, ಬಡಿಯುತ್ತದೆ, ನೀವು ಹೇಳಿದ್ದನ್ನೊಂದನ್ನೂ ಕೇಳುವುದಿಲ್ಲ. ಈ ಕಾಯಿಲೆಯನ್ನು ಏನೆಂದು ಕರೆಯುತ್ತೀರಿ? ಇದೊಂದು ಅನಾರೋಗ್ಯ ಹೌದಲ್ಲವೇ?
ನಮ್ಮ ಮನಸ್ಸು ಈಗ ವರ್ತಿಸುತ್ತಿರುವುದು ಹೀಗೆ. ಮನಸ್ಸಿನ ಸ್ವಭಾವ ಮರ್ಕಟನಂತೆ. ಅದು ನಮ್ಮ ಅಂಕೆ ಮೀರಿ ಏನೇನನ್ನೋ ಆಲೋಚಿಸುತ್ತದೆ, ಎಲ್ಲೆಲ್ಲೋ ತಿರುಗಾಡುತ್ತದೆ, ಯಾರ್ಯಾರ ಬಗ್ಗೆಯೆಲ್ಲ ಚಿಂತಿಸುತ್ತದೆ. ನಮ್ಮನ್ನು ನೋಯಿಸುತ್ತದೆ, ಕೆಣಕುತ್ತದೆ, ನಾವು ಬೇಗುದಿಯಿಂದ ಬೇಯುವಂತೆ ಮಾಡು ತ್ತದೆ. ಇಂತಹ “ರೋಗಿ’ ಮನಸ್ಸನ್ನು ಹೊಂದಿ ರುವವರು ಲಕ್ಷಾಂತರ ಮಂದಿ.
ಮನಸ್ಸಿನ ಈ “ಅನಾರೋಗ್ಯ’ವೇ ದೇಹ ದಲ್ಲಿ ವಿವಿಧ ಸ್ವರೂಪಗಳಲ್ಲಿ ಪ್ರಕಟವಾಗುತ್ತದೆ. ಅಂದರೆ ದೇಹ ಅನುಭವಿಸುವ ಎಪ್ಪತ್ತು ಪ್ರತಿಶತ ಕಾಯಿಲೆಗಳಿಗೆ ಮನಸ್ಸೇ ಮೂಲ. ನಮ್ಮ ಮನಸ್ಸಿನಲ್ಲಿ ಹುಟ್ಟುವ ಪ್ರತೀ ಆಲೋಚನೆಗೆ ಪ್ರತಿಕ್ರಿಯೆಯಾಗಿ ದೇಹದಲ್ಲಿ ಭಿನ್ನ ಭಿನ್ನ ಪ್ರಮಾಣ, ಭಿನ್ನ ಭಿನ್ನ ರೂಪಗಳಲ್ಲಿ ಚೋದಕಗಳು, ಕಿಣ್ವಗಳು, ರಸಗಳು ಸ್ರಾವವಾಗುತ್ತವೆ. ಅಂದರೆ ಪ್ರತಿಯೊಂದು ಆಲೋಚನೆಗೂ ದೇಹದಲ್ಲಿ ಒಂದೊಂದು ಬಗೆಯ ರಸಾಯನ ಉತ್ಪತ್ತಿಯಾಗುತ್ತದೆ. ಹುಲಿಯ ಬಗ್ಗೆ ಯೋಚಿಸಿದರೆ ಒಂದು ಬಗೆಯ ರಸಾಯನ, ಹೂವುಗಳ ಬಗ್ಗೆ ಚಿಂತಿಸಿದರೆ ಇನ್ನೊಂದು ಬಗೆಯ ರಸಾಯನ, ಭಯಗೊಂಡರೆ ಮಗದೊಂದು ಬಗೆಯದು. ನಮ್ಮ ಮನಸ್ಸಿನಲ್ಲಿ ಹುಟ್ಟುವ ಆಲೋಚನೆಗೆ ತಕ್ಕಂತೆ ದೇಹ ಉತ್ಪಾದಿಸುವ ರಸಾಯನ ಬದಲಾಗುತ್ತದೆ. ದೇಹದ ವಿವಿಧ ಅಂಗಾಂಗ ಗಳು ಈ ರಸಾಯನಗಳಿಗೆ ಪ್ರತಿಕ್ರಿಯಿಸುತ್ತವೆ.
ನಮ್ಮ ಅಂಕೆಯಲ್ಲಿರದ ಮನಸ್ಸು ನಮ್ಮ ದೇಹದೊಳಗೆ ಎಂತಹ ರಸಾಯನ ಉತ್ಪಾದನೆಗೆ ಕಾರಣವಾಗುತ್ತದೆ ಎಂಬುದು ನಿಮಗೀಗ ಅರ್ಥವಾಗಿರಬಹುದು. ದಿನವೂ ಇಂತಹ ವಿಷ ರಸಾಯನವೇ ದೇಹದೊಳಗೆ ಉಕ್ಕುತ್ತಿದ್ದರೆ ಗತಿ ಏನಾಗಬೇಡ!
ನಾವು ನಿಜಕ್ಕೂ ಬಯಸಿ ದರೆ, ತುಸು ಶ್ರಮಪಟ್ಟರೆ, ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಂಡರೆ ಉತ್ತಮ ರಸಾಯನವೇ ಉತ್ಪಾದನೆ ಯಾಗುವಂತೆ ಮಾಡ ಬಹುದು. ಇದು ಸಾಧ್ಯ ವಾದಾಗ ಎಪ್ಪತ್ತು ಪ್ರತಿಶತ ಕಾಯಿಲೆಗಳು ಹುಟ್ಟಿಕೊಳ್ಳುವುದೇ ಇಲ್ಲ. ನಮ್ಮ ನಿಯಂತ್ರಣ ದಲ್ಲಿ ಇಲ್ಲದ ಬಾಹ್ಯ ಕಾರಣಗಳಿಂದ ಅಂದರೆ, ಕೊರೊನಾದಂತಹ ವೈರಾಣು ಸೋಂಕು, ಕಾಲರಾದಂತಹ ಸಾಂಕ್ರಾಮಿಕಗಳಿಂದ ಉಂಟಾಗುವ ಮೂವತ್ತು ಪ್ರತಿಶತ ಅನಾರೋಗ್ಯಗಳಿಗಾಗಿ ವೈದ್ಯರು, ಆಸ್ಪತ್ರೆಗಳು ಇವೆಯಲ್ಲ!
ಬದುಕನ್ನು ಉತ್ಕೃಷ್ಟಗೊಳಿಸಬಲ್ಲ, ಸುದೃಢ ದೇಹಾರೋಗ್ಯಕ್ಕೆ ಕಾರಣವಾಗಬಲ್ಲ ಅತ್ಯಂತ ಪವಿತ್ರವಾದ ಸೃಷ್ಟಿ ರಸಾಯನ ನಮ್ಮೊಳಗೆಯೇ ಇದೆ. ಅದನ್ನು ವಿಷಮಯಗೊಳಿಸುವ ಅಥವಾ ಅಮೃತವನ್ನಾಗಿಸುವುದೂ ನಮ್ಮ ಕೈಯಲ್ಲೇ ಇದೆ.