Advertisement

ಸೊಳ್ಳೆ ಉತ್ಪತ್ತಿ ತಾಣ ಸೃಷ್ಟಿಯಾಗದಂತೆ ನಾವೆಲ್ಲರೂ ಜವಾಬ್ದಾರಿ ಮೆರೆಯೋಣ

11:32 PM Jul 25, 2019 | mahesh |

ಮಹಾನಗರ: ನಗರದಲ್ಲಿ ಡೆಂಗ್ಯೂ, ಮಲೇರಿಯಾ ಹಾವಳಿ ಮಿತಿ ಮೀರುತ್ತಿದ್ದಂತೆಯೇ ಮಹಾನಗರ ಪಾಲಿಕೆ ಸಹಿತ ಸಂಬಂಧಪಟ್ಟ ಇಲಾಖೆಗಳು ನಿಧಾ ನಕ್ಕೆ ಎಚ್ಚೆತ್ತುಕೊಂಡು ರೋಗ ನಿಯಂತ್ರಣಕ್ಕೆ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿವೆ.

Advertisement

ಪಾಲಿಕೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿಯು ಕಟ್ಟಡ ಕಾಮಗಾರಿ ಸೈಟ್‌ಗಳು, ಕಟ್ಟಡಗಳು, ಮನೆಗಳಿಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಂತಹ ತಾಣಗಳಿದ್ದರೆ ಕಟ್ಟಡ ಮಾಲಕರಿಗೆ ದಂಡ ವಿಧಿಸಲಾಗುತ್ತಿದೆ. ಇನ್ನೊಂದೆಡೆ ಪಾಲಿಕೆ ವತಿಯಿಂದ ಫಾಗಿಂಗ್‌, ಸ್ಪ್ರೇ ಮಾಡಲಾಗುತ್ತಿದೆ. ಆದರೆ ಇದೆಲ್ಲವೂ ತಾತ್ಕಾಲಿಕ ಕ್ರಮಗಳಾಗುತ್ತವೆ. ಕೈಗೊಂಡಿರುವ ಕ್ರಮಗಳು ಫಲ ನೀಡಿವೆಯೇ ಎಂಬುದರ ಫಾಲೋ ಅಪ್‌ ನಡೆಯಬೇಕು.

ಇದಕ್ಕೆಲ್ಲಗಿಂತಲೂ ಮಿಗಿಲಾಗಿ ನಗರ ನಿವಾಸಿಗಳಲ್ಲಿ ಸ್ವಯಂಜಾಗೃತಿ ಮೂಡಬೇಕು. ಎಲ್ಲವನ್ನೂ ಅಧಿಕಾರಿಗಳೇ ಬಂದು ಬಗೆಹರಿಸಬೇಕು ಅಥವಾ ದಂಡ ವಿಧಿಸುವುದಕ್ಕೆ ಬರುವಾಗ ಗಲೀಜು ಜಾಗವನ್ನು ಸ್ವತ್ಛಗೊಳಿಸುವುದಕ್ಕೆ ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ ಎಂಬುದರ ಬಗ್ಗೆ ಪ್ರಜ್ಞಾವಂತರಾಗಿರುವ ಪ್ರತಿಯೊಬ್ಬ ನಾಗರಿಕರು ಸ್ವಯಂ ಪ್ರಶ್ನಿಸಿಕೊಂಡರೆ, ನಗರದಲ್ಲಿ ಇಷ್ಟೊತ್ತಿಗೆ ಡೆಂಗ್ಯೂ-ಮಲೇರಿಯಾ ಈ ಮಟ್ಟಕ್ಕೆ ವ್ಯಾಪಕವಾಗುತ್ತಿರಲಿಲ್ಲ.

ನಿರಂತರ ಪಾಲನೆಯಾಗಲಿ
ಕಟ್ಟಡಗಳಲ್ಲಿ, ನಿರ್ಮಾಣ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳು ಕಂಡುಬಂದರೆ ಅವುಗಳಿಗೆ ದಂಡ ವಿಧಿಸುವ ನಿಯಮ ಹಿಂದಿನಿಂದಲೂ ಇದೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಯಾವಾಗ ಮಲೇರಿಯಾ, ಡೆಂಗ್ಯೂ ಹಾವಳಿ ಉಲ್ಬಣಗೊಳ್ಳುತ್ತವೆಯೋ ಆ ಸಂದರ್ಭಗಳಲ್ಲಿ ಮಾತ್ರ ಒಂದಷ್ಟು ಪರಿಶೀಲನೆಗಳು, ದಂಡ ವಿಧಿಸುವ ಕ್ರಮಗಳಾಗುತ್ತವೆ. ರೋಗ ನಿಯಂತ್ರಣಕ್ಕೆ ಬಂದ ಬಳಿಕ ಮತ್ತೆ ಈ ಹಿಂದಿನಂತೆಯೇ ಸ್ಥಿತಿ ಮುಂದುವರಿಯುತ್ತದೆ ಎಂಬ ದೂರುಗಳು ಸಾರ್ವಜನಿಕರಿಂದ ವ್ಯಾಪಕವಾಗಿದೆ. ಇನ್ನೊಂದೆಡೆ ಅನೇಕ ಸಾರ್ವಜನಿಕ ಪ್ರದೇಶಗಳಲ್ಲೂ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬರುತ್ತಿವೆ. ಈ ಬಗ್ಗೆ ಎಷ್ಟೇ ದೂರುಗಳು ಬಂದರು ಕೂಡ ಕೆಲವೊಮ್ಮೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸುವುದಿಲ್ಲ. ಇದು ಆಡಳಿತ ವ್ಯವಸ್ಥೆಯ ವೈಫಲ್ಯ. ಇವುಗಳ ನಿರ್ಮೂಲನವೂ ನಡೆಯಬೇಕಾಗಿದೆ.

ಪ್ರಸ್ತುತ ನಡೆಯುತ್ತಿರುವ ಕಾನೂನು ಕ್ರಮಗಳು ಕೇವಲ ಸಮಸ್ಯೆ ಉಲ್ಬಣವಿರುವ ಅವಧಿಗೆ ಮಾತ್ರ ಸೀಮಿತವಾಗಬಾರದು. ನಿರಂತರ ಪಾಲನೆಯಾಗಬೇಕು. ಪಾಲಿಕೆಯ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಆಗಾಗ್ಗೆ ತಪಾ ಸಣೆ ಕಾರ್ಯಾಚರಣೆಗಳನ್ನು ನಡೆಸಬೇಕು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ, ದಂಡ ವಿಧಿಸುವ ಪ್ರಕ್ರಿಯೆಗಳನ್ನು ನಡೆಸಬೇಕು.

Advertisement

100 ಗ್ರಿಡ್‌ಗಳು, ವ್ಯಾಪಕ ತಪಾಸಣೆ
ಸೊಳ್ಳೆಗಳ ಮೊಟ್ಟೆ,ಲಾರ್ವಾಗಳ ನಾಶ ಡೆಂಗ್ಯೂ, ಮಲೇರಿಯಾ ನಿಯಂತ್ರಣಕ್ಕಿರುವ ಪರಿಣಾಮಕಾರಿ ಪರಿಹಾರ.

ಪಾಲಿಕೆ, ಆರೋಗ್ಯ ಇಲಾಖೆಯಿಂದ ನಿರಂತರ ಕಾರ್ಯಾಚರಣೆ ಮುಂದು ವರಿದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಡೆಂಗ್ಯೂ ಹಾವಳಿ ತೀವ್ರವಾಗಿರುವ ಮತ್ತು ಸಂಭಾವ್ಯ ಪ್ರದೇಶಗಳನ್ನು ನೂರು ಗ್ರಿಡ್‌ಗಳಾಗಿ ವಿಂಗಡಿಸಿ ಪರಿಶೀಲನೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವಿಕೆ ಕಾರ್ಯಾಚರಣೆ ನಡೆಯುತ್ತಿದೆ. ತಲಾ 3 ಮಂದಿಯನ್ನು ಒಳಗೊಂಡ 45 ರಿಂದ 85 ತಂಡಗಳು ಗ್ರೀಡ್‌ ಪ್ರದೇಶದಲ್ಲಿ ಪ್ರತಿ ಮನೆಗೆ, ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಪಡಿಸುವ ಕಾರ್ಯದಲ್ಲಿ ತೊಡಗಿವೆ. ದಿನ ವೊಂದಕ್ಕೆ ಸುಮಾರು 1,500 ರಿಂದ 2,500 ಮನೆಗಳಿಗೆ ಭೇಟಿ ನೀಡಲಾಗುತ್ತಿದೆ. ಇದರ ಜತೆಗೆ ಪಾಲಿಕೆಯಿಂದ ಬೆಳಗ್ಗೆ ಹಾಗೂ ಸಂಜೆ ಫಾಗಿಂಗ್‌ ಕಾರ್ಯ ನಡೆಯುತ್ತಿದೆ. ಸುಮಾರು 70 ಮಂದಿ ಸೆಯರ್‌ಗಳು ಸೊಳ್ಳೆ ನಾಶಕ ಸಿಂಪಡಣೆ ಕಾರ್ಯದಲ್ಲಿ ತೊಡಗಿದ್ದಾರೆ.

ಸೊಳ್ಳೆ ಉತ್ಪತ್ತಿ ತಾಣಗಳು
ನಗರದಲ್ಲಿ ಶಾಲೆಗಳು, ಹಾಸ್ಟೇಲ್‌ಗ‌ಳ ಪರಿಸರದಲ್ಲಿ ನೀರು ನಿಲ್ಲುವುದು, ಗಿಡಗಂಟಿಗಳು ಬೆಳೆದಿದ್ದು ಸೊಳ್ಳೆ ಉತ್ಪತ್ತಿ ತಾಣಗಳು ಸೃಷ್ಟಿಯಾಗಿವೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಆತಂಕ ಪಡುವ ಪರಿಸ್ಥಿತಿ ಇದೆ ಎಂಬುದಾಗಿ ಹೆತ್ತವರಿಂದ ದೂರುಗಳು ವ್ಯಕ್ತವಾಗಿವೆ. ಹಲವಾರು ವಿದ್ಯಾರ್ಥಿಗಳು ಈಗಾಗಲೇ ಡೆಂಗ್ಯೂ ಬಾಧಿತರಾಗಿದ್ದಾರೆ. ಬಹ ಳಷ್ಟು ಹಾಸ್ಟೇಲ್‌ಗ‌ಳ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಪರಿಸರ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿವೆ. ಬಹಳಷ್ಟು ಹಾಸ್ಟೇಲ್‌ಗ‌ಳಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಕಂಡುಬಂದಿವೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಶಾಲಾಡಳಿತ ಮಂಡಳಿಗಳು ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಸುದಿನಕ್ಕೆ ದೂರುಗಳ ಮಹಾಪೂರ!
ನಗರದಲ್ಲಿ ಡೆಂಗ್ಯೂ, ಮಲೇರಿಯಾ ಜ್ವರ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ “ಸುದಿನ’ವು ನಾಲ್ಕು ದಿನಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದೆ. ಆದರೆ ನಗರದಲ್ಲಿ ಗಲೀಜು ನೀರು ನಿಂತು ಸೊಳ್ಳೆ ಉತ್ಪತ್ತಿ, ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿರುವುದು, ಖಾಸಗಿ ಜಾಗವು ಸ್ವತ್ಛತೆಯಿಲ್ಲದೆ ಪಾಳು ಬಿದ್ದು, ಸೊಳ್ಳೆ ಉತ್ಪತ್ತಿ ತಾಣವಾಗಿರುವುದು, ಅಧಿಕಾರಿಗಳಿಗೆ ದೂರು ಕೊಟ್ಟರೂ ಸ್ಪಂದಿಸದೇ ಇರುವುದು ಹೀಗೆ, ನಗರವಾಸಿಗಳಿಂದ ಪತ್ರಿಕಾ ಕಚೇರಿಗೆದೂರುಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರತಿದಿನವೂ 300ಕ್ಕೂ ಅಧಿಕ ಮೊಬೈಲ್‌ ಕರೆ-ವಾಟ್ಸ್‌ಪ್‌ನಲ್ಲಿ ದೂರುಗಳು ಬರುತ್ತಿವೆ. ಇದನ್ನೆಲ್ಲ ಗಮನಿಸುವಾಗ, ನಗರದ ಕೆಲವು ಪ್ರದೇಶಗಳಲ್ಲಿ ನೈರ್ಮಲ್ಯ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟು ಹೋಗಿದೆ ಎನ್ನುವುದರ ಸೂಚನೆ ನೀಡುತ್ತಿವೆ. ಕೆಲವು ಕಡೆಯ ನಿವಾಸಿ ಗಳು ಕರೆಮಾಡಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸೊಳ್ಳೆ ಕಾಟ ಜಾಸ್ತಿಯಾಗಿ ಮನೆ ಮಂದಿ ಅದರಲ್ಲಿಯೂ ಮಕ್ಕಳಿಗೆ ಡೆಂಗ್ಯೂ ಬಾಧಿಸಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಹೀಗಿರುವಾಗ, ಪಾಲಿಕೆ ಸಹಿತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಂದ ಬರುವ ನೈರ್ಮಲ್ಯಕ್ಕೆ ಸಂಬಂಧಿಸಿದ ದೂರುಗಳಿಗೆ ಇನ್ನಾದರೂ ತುರ್ತಾಗಿ ಸ್ಪಂದಿಸಬೇಕು. ಇನ್ನೊಂದೆಡೆ, ಜನರು ಕೂಡ ತಮ್ಮ ಮಾಲಕತ್ವ ಅಥವಾ ಅಧೀನಕ್ಕೆ ಒಳಪಟ್ಟಿರುವ ಪ್ರದೇಶದಲ್ಲಿ ನೀರು ಕಟ್ಟಿನಿಂತು ಸೊಳ್ಳೆ ಉತ್ಪತ್ತಿಗೆ ಆಸ್ಪದ ನೀಡದಂತೆ ಜವಾಬ್ದಾರಿ-ಬದ್ಧತೆ ಪ್ರದರ್ಶಿಸಬೇಕೆನ್ನುವುದು “ಸುದಿನ’ ಕಾಳಜಿ.

 ಸೊಳ್ಳೆ ಉತ್ಪತ್ತಿ ತಾಣ ನಾಶ
ಸೊಳ್ಳೆಗಳ ಮೊಟ್ಟೆಗಳು, ಲಾರ್ವಾಗಳು ಉತ್ಪತಿಯಾಗದಂತೆ ನೋಡಿಕೊಳ್ಳುವ ಮೂಲಕ ಮಲೇರಿಯಾ, ಡೆಂಗ್ಯೂ ನಿಯಂತ್ರಿಸಬಹುದು. ಈಗಾಗಲೇ ಮನೆ, ಕಟ್ಟಡ ಪರಿಸರದಲ್ಲಿ ನಿಂತ ನೀರಿನಲ್ಲಿ ಮೊಟ್ಟೆಗಳು, ಲಾರ್ವಾಗಳು ಕಂಡುಬಂದರೆ ಅವುಗಳನ್ನು ನಾಶಪಡಿಸಬೇಕು. ಡೆಂಗ್ಯೂ ಹೆಚ್ಚು ಕಂಡುಬಂದಿರುವ, ಸಂಭಾವ್ಯ ಪ್ರದೇಶಗಳನ್ನು ಗ್ರಿಡ್‌ಗಳಾಗಿ ವಿಂಗಡಿಸಿ ಆರೋಗ್ಯ ಇಲಾಖೆಯ ವತಿಯಿಂದ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯ ನಡೆಯುತ್ತಿದೆ.
 - ಡಾ| ರಾಮಕೃಷ್ಣ ರಾವ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಸಮಸ್ಯೆ ಇದ್ದರೆ ನಮಗೆ ವಾಟ್ಸಪ್‌ ಮಾಡಿ
ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಸುದಿನ’ ಕೂಡ ಜಾಗೃತಿ ಮೂಡಿಸುವ ಜತೆಗೆ ನಗರವಾಸಿಗಳಿಗೆ ತಮ್ಮ ಸಮಸ್ಯೆ-ಪರಿಹಾರ ಮಾರ್ಗೋ ಪಾಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ವೇದಿಕೆ ನೀಡುತ್ತಿದೆ. ಆ ಮೂಲಕ, ಜನರು ಕೂಡ ಡೆಂಗ್ಯೂ ವ್ಯಾಪಕವಾಗುವುದನ್ನು ತಡೆಗಟ್ಟುವುದಕ್ಕೆ ತಮ್ಮ ಜವಾಬ್ದಾರಿ ಮೆರೆಯುವುದು ಆವಶ್ಯಕ. ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಆ ಬಗ್ಗೆ ಸೂಕ್ತ ವಿವರದೊಂದಿಗೆ ಫೋಟೋ ತೆಗೆದು ಕಳುಹಿಸಬಹುದು. ಅಲ್ಲದೆ ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೂ ಆ ಬಗ್ಗೆ ಗಮನಕ್ಕೆ ತಂದರೆ ಉನ್ನತ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು.
9900567000

Advertisement

Udayavani is now on Telegram. Click here to join our channel and stay updated with the latest news.

Next