Advertisement

ವಿವಿಗಳು ಸಂಶೋಧನೆಗೆ ಒತ್ತು ನೀಡಲಿ

11:46 AM May 05, 2017 | Team Udayavani |

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮಗಳು ಬದಲಾಗಬೇಕಾದ ಅವಶ್ಯಕತೆ ಇದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಅಭಿಪ್ರಾಯಪಟ್ಟರು. 

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಜ್ಞಾನ ಆಯೋಗದ ಮಾಜಿ ಮುಖ್ಯಸ್ಥ ಡಾ.ಸ್ಯಾಮ್‌ ಪಿತ್ರೋಡ ಮತ್ತು ದರ್ಶನ್‌ ಶಂಕರ್‌ ಸ್ಥಾಪಿಸಿರುವ ಟ್ರಾನ್ಸ್‌ ಡಿಸ್ಸಿಪ್ಲಿನರಿ ಯೂನಿವರ್ಸಿಟಿ (ಟಿಡಿಯು)ಯ 2017-18ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಮಾನವ ಸಂಪನ್ಮೂಲಗಳನ್ನು ಪೂರೈಸಬೇಕಾದರೆ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಅದಕ್ಕೆ ತಕ್ಕಂತೆ ತಯಾರು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿವಿಗಳಲ್ಲಿ ಕಲಿಸುತ್ತಿರುವ ಪಠ್ಯಕ್ರಮವನ್ನು ಬದಲಾಯಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. 

ವಿಶ್ವವಿದ್ಯಾಲಯಗಳು ಪಠ್ಯಕ್ಕೆ ಸೀಮಿತವಾಗದೆ, ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಬೇಕು. ಸರ್ಕಾರ ಇದಕ್ಕೆ ಎಲ್ಲ ಸಹಕಾರ ನೀಡಲಿದೆ. ಈಗಾಗಲೇ 200 ಕೋಟಿ ರೂ. ಇನ್‌ಕ್ಯೂಬೇಷನ್‌ ಸೆಂಟರ್‌ಗಳಿಗಾಗಿ ಮೀಸಲಿಡಲಾಗಿದೆ. ಈ ನಿಟ್ಟಿನಲ್ಲಿ ಮುಂದೆಬರುವ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದರು.  

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಸಚಿವ ರಮೇಶ್‌ ಕುಮಾರ್‌, ವೈದ್ಯಕೀಯ ಕ್ಷೇತ್ರಗಳಲ್ಲಿ ವಿಫ‌ುಲ ಅವಕಾಶಗಳಿವೆ. ಆದರೆ, ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯುವ ವೈದ್ಯರು ಇಲ್ಲಿನ ಜನರ ಆರೋಗ್ಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಹೇಳಿದರು. 

Advertisement

ನೈತಿಕತೆ-ಬದ್ಧತೆ ಅಗತ್ಯ: ಯಾವುದೇ ವೃತ್ತಿಯಲ್ಲಿ ಬದ್ಧತೆ ಮತ್ತು ನೈತಿಕತೆ ಅತ್ಯಗತ್ಯ. ಅದರಲ್ಲೂ ನ್ಯಾಯಾಂಗ ಮತ್ತು ಆರೋಗ್ಯ ಕ್ಷೇತ್ರ ಹೆಚ್ಚಿನ ನೈತಿಕತೆಯನ್ನು ಬಯಸುತ್ತದೆ ಎಂದ ಅವರು, ಸಾಂಪ್ರದಾಯಿಕ ಕಲಿಕೆಗಿಂತ ವಿಭಿನ್ನವಾದ ಅನುಭವ ಮತ್ತು ಜ್ಞಾನದ ಪರಿಕಲ್ಪನೆಯೊಂದಿಗೆ ಸ್ಯಾಮ್‌ ಪಿತ್ರೋಡ ಟಿಡಿಯು ವಿವಿ ಸ್ಥಾಪಿಸಿದ್ದಾರೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಡಾ.ಸ್ಯಾಮ್‌ ಪಿತ್ರೋಡ ಮಾತನಾಡಿ, ಆರೋಗ್ಯ ಕ್ಷೇತ್ರವು ಜಗತ್ತಿನಲ್ಲಿ ಇಂದು ಪ್ರಮುಖ ಕ್ಷೇತ್ರವಾಗಿದೆ. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು ಎನ್ನುವುದು ನಮ್ಮ ಉದ್ದೇಶ ಎಂದರು. 20 ವರ್ಷಗಳ ಹಿಂದೆ ವಿಶ್ವವಿದ್ಯಾಲಯ ಸ್ಥಾಪನೆ ಕನಸು ಕಂಡಿದ್ದೆ. ಈಗ ಅದು ಸಾಕಾರಗೊಳ್ಳುತ್ತಿದೆ. ಶಿಸ್ತುಬದ್ಧ ಕಲಿಕೆ, ನೈತಿಕತೆ, ಹೊಸ ಅನುಭವಗಳಿಂದ ಜ್ಞಾನ ಸಂಪಾದನೆ, ವಿವಿಯ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.  

ವಿವಿ ಉಪಕುಲಪತಿ ಡಾ.ಬಾಲಕೃಷ್ಣ ಪಿಸುಪತಿ, ಕೈಗಾರಿಕೆ, ನಾಗರಿಕ ಸಮಾಜ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿನ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಟಿಡಿಯು ಎಲ್ಲ ಕೋರ್ಸ್‌ಗಳನ್ನು ರೂಪಿಸಿದ್ದು, ನಿರಂತರ ಮತ್ತು ಪ್ರಾಯೋಗಿಕ ಕಲಿಕೆಗೆ ಮಹತ್ವ ನೀಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸುಂದರ ರಾಜು, ಪ್ರೊ.ರಾಮಸ್ವಾಮಿ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next