ಪ್ರತೀ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನ ಆಚರಿಸಲಾಗುತ್ತಿದೆ. ಈ ದಿನದಂದು ತಂಬಾಕಿನ ಎಲ್ಲ ರೀತಿಯ ಉತ್ಪನ್ನಗಳ ಸೇವನೆಯಿಂದ ದೂರವಿದ್ದು, ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆ ಮತ್ತು ದುಷ್ಪರಿಣಾಮಗಳ ಬಗೆಗೆ ಜಗತ್ತಿನಾ ದ್ಯಂತ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಪ್ರತೀ ವರ್ಷ ನಿರ್ದಿಷ್ಟ ಧ್ಯೇಯ ವಾಕ್ಯದೊಂದಿಗೆ ಈ ದಿನ ವನ್ನು ಆಚರಿಸಿ, ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಸಾವು ನೋವು, ರೋಗರುಜಿನ, ದುಗುಡ ದುಮ್ಮಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಜನರು ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಮಾಡಲು ಪ್ರಯತ್ನಗಳನ್ನು ನಡೆಸುತ್ತಾ ಬರಲಾಗಿದೆ. “ತಂಬಾಕು ತ್ಯಜಿಸಿ ವಿಜೇತರಾಗಿ’-ಇದು ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಧ್ಯೇಯವಾಕ್ಯವಾಗಿದೆ.
ಒಂದು ಅಂದಾಜಿನ ಪ್ರಕಾರ ಪ್ರತೀ ವರ್ಷ ಜಾಗತಿಕ ವಾಗಿ ಸುಮಾರು 70 ಲಕ್ಷ ಮಂದಿಯನ್ನು ತಂಬಾಕು ಬಲಿ ತೆಗೆದುಕೊಳ್ಳುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ 2030ರ ವೇಳೆಗೆ ಈ ಸಂಖ್ಯೆ 80 ಲಕ್ಷವನ್ನು ದಾಟಲಿದೆ. ಇಂದಿನ ಜಾಗತೀಕರಣದ ಮತ್ತು ಆಧುನಿಕ ದಿನಗಳಲ್ಲಿ ಸಿಗರೇಟ್ ಸೇವನೆ ಅಥವಾ ತಂಬಾಕು ಉತ್ಪನ್ನಗಳ ಸೇವನೆ ಫ್ಯಾಶನ್ ಮತ್ತು ಪ್ರತಿಷ್ಠೆಯಾಗಿ ಮಾರ್ಪಾಡಾಗಿದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಹುಕ್ಕಾ, ನಶ್ಯ, ಗುಟ್ಕಾ, ಜರ್ದಾ.. ಇವೆಲ್ಲವು ಕ್ಷಣಿಕ ಸುಖ ನೀಡುತ್ತವೆಯೇ ವಿನಾ ಆ ವ್ಯಕ್ತಿಯನ್ನು ಕ್ಷಣಕ್ಷಣಕ್ಕೂ ಕೊಲ್ಲುತ್ತಿರುತ್ತದೆ. ಜಗತ್ತಿನಲ್ಲಿ ಇಂದಿಗೂ ಶಾಶ್ವತ ಚಿಕಿತ್ಸೆ ಇಲ್ಲದ, ಅತ್ಯಂತ ಮಾರಕ ರೋಗವಾದ ಕ್ಯಾನ್ಸರಿಗೆ ತಂಬಾಕು ಉತ್ಪನ್ನಗಳು ಕಾರಣೀಭೂತವಾಗಿವೆ ಎನ್ನುವುದನ್ನು ನಾವು ಮರೆಯಲೇಬಾರದು. ತಂಬಾಕು ಉತ್ಪನ್ನಗಳ ಬಳಕೆಯಿಂದ ಹೃದಯಾಘಾತ, ಮೆದುಳಿನ ಆಘಾತ ಅಥವಾ ಸ್ಟ್ರೋಕ್, ಶ್ವಾಸಕೋಶದ ರೋಗಗಳು ಪಾರ್ಶ್ವ ವಾಯು, ನ್ಯುಮೋನಿಯಾ, ಟೊಳ್ಳು ಮೂಳೆ, ನಪುಂಸಕತೆ ಮುಂತಾದ ಭೀಕರ ಆರೋಗ್ಯ ಸಮಸ್ಯೆ ಗಳು ಕಾಣಿಸಿಕೊಳ್ಳುತ್ತವೆ. ಕಣ್ಣು, ಚರ್ಮ ಕಾಂತಿ ಹೀನ ವಾಗುವುದು, ಇನ್ನು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್, ಮುಟ್ಟಿನ ತೊಂದರೆ, ಲೈಂಗಿಕ ನಿರಾಸಕ್ತಿ, ಬಂಜೆತನ, ಅಕಾಲಿಕ ಗರ್ಭಪಾತ ಮುಂತಾದ ಹತ್ತು ಹಲವು ಸಮಸ್ಯೆಗಳು ಒಟ್ಟಾಗಿ ಕಾಣಿಸುತ್ತವೆ. ಅಷ್ಟೇ ಅಲ್ಲದೆ ತಂಬಾಕು ಸೇವನೆಯು ಮಾರಕ ಚಟವಾಗಿದ್ದು ಇದರಿಂದಾಗಿ ಆ ವ್ಯಕ್ತಿಯಷ್ಟೇ ಅಲ್ಲದೆ ಅವರ ಕುಟುಂಬ ಹಾಗೂ ಸಮಾಜವು ಸಂಕಷ್ಟಕ್ಕೊಳಗಾಗುತ್ತದೆ ಎಂಬುದನ್ನು ಎಂದೂ ಮರೆಯಬಾರದು.
ಯುವಜನರೇ ತುತ್ತು!: ತಂಬಾಕು ಸೇವನೆ ಮತ್ತದರ ದುಷ್ಪರಿಣಾಮದಿಂದಾಗಿ ಜಾಗತಿಕವಾಗಿ ಪ್ರತೀ ವರ್ಷ 70 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ 10 ಲಕ್ಷ ಮಂದಿ, ತಾವು ತಂಬಾಕು ಸೇವನೆ ಮಾಡದಿದ್ದರೂ ಇತರರು ತಂಬಾಕು ಸೇವಿಸಿದ ಪರಿಣಾಮವಾಗಿ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ 10 ರಿಂದ 12 ಕೋಟಿ ತಂಬಾಕು ಬಳಕೆದಾರರು ಇದ್ದು ಸುಮಾರು 1 ಕೋಟಿ ಜನರು ತಂಬಾಕು ಸಂಬಂಧಿ ರೋಗಗಳಿಗೆ ತುತ್ತಾಗುತ್ತಾರೆ. ತಂಬಾಕು ಉತ್ಪನ್ನಗಳ ಅತಿಯಾದ ಬಳಕೆಯಿಂದಾಗಿಯೇ ಹಿಂದಿನ ಕಾಲದಲ್ಲಿ 50 ಮತ್ತು 60 ರ ಹರೆಯದಲ್ಲಿ ಜನರನ್ನು ಕಾಡುತ್ತಿದ್ದ ಕ್ಯಾನ್ಸರ್ ಈಗ 30-40 ರ ವಯಸ್ಸಿನಲ್ಲಿಯೇ ಕಂಡುಬರುತ್ತಿರುವುದು ಬಹಳ ಆತಂಕಕಾರಿ ವಿಚಾರವಾಗಿದೆ.
ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಲು ತಾವೇ ನಿರ್ಬಂಧ ಹಾಕಿಕೊಳ್ಳಬೇಕಾಗಿದೆ. ಆರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿ. ದೈಹಿಕ, ಮಾನಸಿಕ, ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ತಂಬಾಕು ಸೇವ ನೆಯ ಚಟವನ್ನು ಎಲ್ಲರೂ ತ್ಯಜಿಸಬೇಕು. ಇಲ್ಲಿ ಮನ ಸ್ಸಿನ ದೃಢನಿರ್ಧಾರವೇ ಬಹಳ ಮುಖ್ಯವಾಗುತ್ತದೆ. ತಂಬಾಕುಮುಕ್ತ, ಆರೋಗ್ಯಯುತ ಸಮಾಜದ ನಿರ್ಮಾ ಣವು ನಮ್ಮೆಲ್ಲರ ಗುರಿಯಾಗಬೇಕಿದೆ. ತಂಬಾಕು ಮುಕ್ತ, ವ್ಯಸನ ಮುಕ್ತ ಆರೋಗ್ಯವಂತ ಭಾರತವನ್ನು ರೂಪಿಸುವಲ್ಲಿ ನಾವೆಲ್ಲ ಕೈ ಜೋಡಿಸೋಣ.
– ಡಾ| ಮುರಲೀ ಮೋಹನ್ ಚೂಂತಾರು, ಮಂಗಳೂರು