Advertisement

ಶಾಲೆ, ಕಾಲೇಜು ಸುತ್ತ ತಂಬಾಕು ಮಾರಾಟ ನಿಯಂತ್ರಣವಾಗಲಿ

12:06 AM Jul 07, 2019 | mahesh |

ತಂಬಾಕು ನಿಯಂತ್ರಣ ಕಾಯ್ದೆಯನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಮುಂದಾಗಿ, ಅನಧಿಕೃತವಾಗಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದ್ದರೂ, ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಬಳಕೆ ಇನ್ನೂ, ನಿಯಂತ್ರಣಗೊಂಡಿಲ್ಲ.

Advertisement

ನಗರದ ಹಲವೆಡೆ ಸಾರ್ವಜನಿಕ ಪ್ರದೇಶಗಳಲ್ಲಿಯೇ ಬೀಡಿ, ಸಿಗರೇಟ್ ಸೇರಿ ತಂಬಾಕು ಉತ್ಪನ್ನಗಳ ಸೇವನೆ ಮಾಡಲಾಗುತ್ತಿದೆ. ಇನ್ನು, ಕೆಲವೊಂದು ಗೂಡಂಗಡಿಗಳ ಬದಿಯಲ್ಲಿಯೂ ಸಿಗರೇಟ್ ಸೇವನೆ ಮಾಡಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಬೇಕಿದೆ.

ಮಂಗಳೂರು ನಗರದಲ್ಲಿ ಹೆಚ್ಚಾಗಿ ತಂಬಾಕು ಬಳಕೆ ಮಾಡುವ ಪೆಟ್ಟಿ ಅಂಗಡಿ, ವೈನ್‌ ಶಾಪ್‌ ಸೇರಿದಂತೆ ಮತ್ತಿತರ ಪ್ರದೇಶಗಳ ಮೇಲೆ ಇಲಾಖೆ ಹದ್ದಿನ ಕಣ್ಣು ಇಡಬೇಕಿದೆ.

ಎಲ್ಲ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ತಂಬಾಕು ಸೇವನೆ ನಿಷೇಧ ಹಾಗೂ ಶಾಲಾ- ಕಾಲೇಜುಗಳು ಇದನ್ನು ಸೂಚಿಸುವ ನಾಮಫಲಕಗಳನ್ನು ವಿದ್ಯಾಸಂಸ್ಥೆಗಳ ಆವರಣದ ಹೊರಗಡೆ ಅಳವಡಿಸುವುದು ಕಡ್ಡಾಯವಾಗಿದೆ. ಆದರೂ ಕೆಲವೊಂದು ಶಿಕ್ಷಣ ಸಂಸ್ಥೆಗಳ 100 ಗಜ ವ್ಯಾಪ್ತಿಯಲ್ಲಿಯೇ ಅನಧಿಕೃತವಾಗಿ ಸಿಗರೇಟ್ ಸಿಗುತ್ತಿದೆ.

18 ವರ್ಷ ಒಳಗಿನವರಿಂದ/ರವರಿಗೆ ತಂಬಾಕು ಉತ್ಪನ್ನಗಳ ಮಾರಾಟ, ಚಿಲ್ಲರೆ ಅಂಗಡಿಗಳಲ್ಲಿ ಸೂಚನಾ ಫಲಕ ಹಾಕದಿರುವುದು, ತಂಬಾಕು ಉತ್ಪನ್ನಗಳ ಪ್ರದರ್ಶನಕ್ಕೆ 200 ರೂ. ದಂಡ ವಿಧಿಸಬಹುದು. ತಂಬಾಕು ಉತ್ಪನ್ನ ಪ್ಯಾಕ್‌ನಲ್ಲಿ ಆರೋಗ್ಯ ಎಚ್ಚರಿಕೆಯ ಚಿತ್ರಗಳು ಇರದಿರುವುದು, ಎಚ್ಚರಿಕೆ ಚಿತ್ರಗಳು ಶೇ.85ಕ್ಕಿಂತ ಕಡಿಮೆ ಅಳತೆಯಲ್ಲಿರುವುದು, ಹಳೆಯ ಎಚ್ಚರಿಕೆ ಚಿತ್ರ ಹಾಕಿದ್ದರೆ ತಯಾರಕರಿಗೆ ಮೊದಲನೇ ಅಪರಾಧಕ್ಕೆ 2 ವರ್ಷ ಶಿಕ್ಷೆ ಅಥವಾ 5,000 ರೂ. ದಂಡ, ಎರಡನೇ ಅಪರಾಧಕ್ಕೆ 5 ವರ್ಷ ಶಿಕ್ಷೆ ಅಥವಾ 5,000 ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

Advertisement

ಚಿಲ್ಲರೆ ವ್ಯಾಪಾರಿಗಳಿಗೆ ಮೊದಲ ಅಪರಾಧಕ್ಕೆ 1 ವರ್ಷ ಶಿಕ್ಷೆ ಅಥವಾ 1,000 ರೂ. ದಂಡ, ಎರಡನೇ ಅಪರಾಧಕ್ಕೆ 2 ವರ್ಷ ಶಿಕ್ಷೆ ಅಥವಾ 3,000 ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇಷ್ಟಾದರೂ, ಕಾನೂನು ನಿಯಮ ಉಲ್ಲಂಘನೆ ಕಡಿಮೆಯಾಗುತ್ತಿಲ್ಲ.

ಎಲ್ಲೆಲ್ಲಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಕುರಿತು ಸ್ಥಳೀಯರು ಅಥವಾ ವಿದ್ಯಾರ್ಥಿಗಳಲ್ಲಿ ಮಾಹಿತಿ ಇದ್ದೇ ಇರುತ್ತದೆ. ಇಂಥವರನ್ನು ಬಳಸಿಕೊಂಡು ಪೊಲೀಸರು ಕ್ರಮ ಕೈಗೊಳ್ಳಬಹುದು.

ಅಲ್ಲದೇ ವಿದ್ಯಾರ್ಥಿಗಳ ಹೆತ್ತವರು ಅಥವಾ ಸ್ಥಳೀಯರೇ ಈ ಕುರಿತು ತಿಳಿದುಕೊಂಡು ಪೊಲೀಸ್‌ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವ ಜತೆಗೆ ಅವರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಬಗ್ಗೆ ತಿಳಿದುಕೊಂಡು ಕಾರ್ಯ ಮಾಡುವುದರ ಜತೆಗೆ ಭವಿಷ್ಯದ ಪ್ರಜೆಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಕೊಡುಗೆ ಸಲ್ಲಿಸಬಹುದು.

ನವೀನ್‌ ಭಟ್

Advertisement

Udayavani is now on Telegram. Click here to join our channel and stay updated with the latest news.

Next