ಕೊಪ್ಪಳ: ಮಾನವ ಹಕ್ಕುಗಳು ಪ್ರತಿಯೊಬ್ಬ ನಾಗರಿಕರಿಗೆ ಸಮಾನ ವಾಗಿದ್ದು, ಅವು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಡಿಸಿ ವಿಕಾಸ ಕಿಶೋರ್ ಸುರಳ್ಕರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾನವ ಹಕ್ಕುಗಳು ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳನ್ನು ನೀಡಿದ್ದು, ನಾವು ಯಾವುದೇ ರೀತಿಯ ತಾರತಮ್ಯ ಮಾಡಿದರೆ ಅದು ಕಾನೂನಿಗೆ ವಿರುದ್ಧವಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆಯಂಥ ಹಲವು ಪ್ರಕರಣಗಳು ಕಂಡುಬಂದಿದ್ದು, ಇಂತಹ ಅನಿಷ್ಠ ಪದ್ಧತಿಗಳ ಆಚರಣೆ ಮಾಡುವುದು ಅಪರಾಧವಾಗಿದೆ. ಕೆಳವರ್ಗದ ಜನರಿಗೆ ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ ಸರಿಯಲ್ಲ. ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರಾಗಿದ್ದೇವೆ. 21ನೇ ಶತಮಾನದಲ್ಲಿದ್ದರೂ ಇಂಥ ಅಮಾನವೀಯ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸದ ಸಂಗತಿ. ಈ ಕುರಿತು ಸಮಾಜದ ಪ್ರಜ್ಞಾವಂತ ನಾಗರಿಕರು ಇತರರಿಗೆ ತಿಳಿ ಹೇಳಬೇಕೆಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಯಾವುದೇ ಜಾತಿ, ಲಿಂಗ, ಧರ್ಮ, ಜನಾಂಗ, ಬಣ್ಣ ಯಾವುದರ ಮೇಲೆಯೂ ತಾರತಮ್ಯ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹಾಗಾಗಿ ಯಾವುದೇ ದುರ್ಬಲ ವ್ಯಕ್ತಿಯ ಮೇಲೆ ಸಬಲರು ತಮ್ಮ ಬಲಪ್ರಯೋಗ ಮಾಡುವಂತಿಲ್ಲ. ಹಾಗೆ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಎಲ್ಲರೂ ಸಮಾನವಾಗಿ ಜೀವಿಸಲಿಕ್ಕಾಗಿಯೇ ಈ ಮಾನವ ಹಕ್ಕುಗಳನ್ನು ಜಾರಿಗೆ ತರಲಾಗಿದೆ ಎಂದರು.
ಮಾನವ ಹಕ್ಕುಗಳ ದಿನದ ಪ್ರತಿಜ್ಞಾವಿಧಿಯನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಬೋ ಧಿಸಿದರು. ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಎಡಿಸಿ ಎಂ.ಪಿ. ಮಾರುತಿ, ಉಪನ್ಯಾಸಕ ಎಂ.ಎ ಹನುಮಂತರಾವ್, ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಹರೀಶ್ ಜೋಗಿ ಹಾಗೂ ಕೊಪ್ಪಳ ಕಾನೂನು ಮಹಾವಿದ್ಯಾಲಯ, ಎಸ್‌ಎಫ್‌ಎಸ್ ಪ್ರೌಢಶಾಲೆ, ಗವಿಸಿದ್ದೇಶ್ವರ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.