Advertisement

Mangalore: ಅಪಘಾತ, ಪ್ರಾಣರಕ್ಷಣೆ ಕ್ರಮಗಳಿಗೆ ಒತ್ತು ಸಿಗಲಿ; ನ್ಯಾ| ಜಿ. ನರೇಂದರ್‌

02:09 AM Oct 01, 2023 | Team Udayavani |

ಮಂಗಳೂರು: ಅಪಘಾತ, ಪ್ರಾಣಹಾನಿ ತಡೆ ಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಹೈಕೋರ್ಟ್‌ನ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ| ಜಿ. ನರೇಂದರ್‌ ಹೇಳಿದ್ದಾರೆ.

Advertisement

ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಜಿಲ್ಲಾಡಳಿತ, ಜಿ.ಪಂ., ಪೊಲೀಸ್‌ ಮತ್ತು ಸಾರಿಗೆ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷೆ ಕ್ರಮಗಳ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಜುಲೈಯಲ್ಲಿ ರಾಜ್ಯದಲ್ಲಿ 4,837 ಅಪಘಾತ ಪ್ರಕರಣಗಳಿಗೆ ಪರಿಹಾರ ಮೊತ್ತ ಒದಗಿಸಲಾಯಿತು. ಆಗ ಪರಿಹಾರ ಮೊತ್ತಕ್ಕೆ ನೀಡುವಷ್ಟು ಮಹತ್ವವನ್ನು ಮನುಷ್ಯರ ಜೀವ ಉಳಿಸುವುದಕ್ಕೂ ನೀಡುತ್ತಿದ್ದೇವೆಯೇ ಎಂಬ ಪ್ರಶ್ನೆ ನನ್ನನ್ನು ಕಾಡಿತು. ಪರಿಹಾರ ಮೊತ್ತ ಪ್ರಾಣ ಕಳೆದುಕೊಂಡಿರುವವರ ಕುಟುಂಬಕ್ಕೆ ತಾತ್ಕಾಲಿಕ ಸಮಾಧಾನ ಮಾತ್ರ ನೀಡಬಲ್ಲದು. ಆದರೆ ಆ ಪ್ರಾಣಗಳನ್ನು ರಕ್ಷಿಸಲು ಅಥವಾ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾದರೆ ಅದೆಷ್ಟೋ ಕುಟುಂಬಗಳ ನೆಮ್ಮದಿಯನ್ನು ಕಾಯ್ದುಕೊಳ್ಳಲು ಸಾಧ್ಯವಿದೆ ಎಂದರು.

ರಾಜ್ಯ ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಮಾತನಾಡಿ, ರಸ್ತೆ ಸುರಕ್ಷತೆ ಜಾಗತಿಕ ಸಮಸ್ಯೆಯಾಗಿದ್ದು, ಸುರಕ್ಷಾ ಕ್ರಮಗಳನ್ನು ತಿಳಿದುಕೊಳ್ಳುವ ಜತೆಗೆ ಅವುಗಳನ್ನು ಅನುಸರಿಸಬೇಕು ಎಂದು ಹೇಳಿದರು.

ವರ್ಷಕ್ಕೆ 4.12 ಲಕ್ಷ ರಸ್ತೆ ಅಪಘಾತ
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶರು ಹಾಗೂ ದ.ಕ. ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ| ಬಿ.ಎಂ. ಶ್ಯಾಮ… ಪ್ರಸಾದ್‌ ಮಾತನಾಡಿ, 20-21ನೇ ಸಾಲಿನ ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ವಾರ್ಷಿಕ 4.12 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲಿ ಶೇ. 34ರಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಶೇ. 57ರಷ್ಟು ಮಂದಿ ಗಾಯಾಳುಗಳಾಗುತ್ತಾರೆ. ಪ್ರಾಣ ಕಳೆದುಕೊಳ್ಳುವವರಲ್ಲಿ ಶೇ. 67ರಷ್ಟು ಮಂದಿ 18ರಿಂದ 45 ವರ್ಷದೊಳಗಿವರು. ಅತೀವೇಗ, ನಿರ್ಲಕ್ಷ್ಯದ ವಾಹನ ಚಾಲನೆಯಿಂದ ಸಂಭವಿಸುವ ಅಪಘಾತಗಳು ಶೇ. 75ರಷ್ಟು ಎಂಬುದು ಗಂಭೀರ ವಿಚಾರ. ರಸ್ತೆ ಸುರಕ್ಷೆ ನಿಯಮಗಳನ್ನು ಪಾಲಿಸುವ ಮೂಲಕ ಇಂತಹ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.

Advertisement

ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ಕರ್ನಾಟಕ ಹೈಕೋರ್ಟ್‌ ವಕೀಲರಾದ ಕೃಷ್ಣಸ್ವಾಮಿ ಅಪಘಾತಗಳಿಂದಾಗಿ ಆಗುವ ಸಾಮಾಜಿಕ, ಆರ್ಥಿಕ ಸಂಕಷ್ಟಗಳ ಬಗ್ಗೆ ಮಾಹಿತಿ ನೀಡಿದರು. ಗೌರವ ಅತಿಥಿಗಳಾಗಿ ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ ಎಂ.ಪಿ., ಪೊಲೀಸ್‌ ಆಯುಕ್ತ ಅನುಪಮ ಅಗ್ರವಾಲ್‌, ಜಿ.ಪಂ. ಸಿಇಒ ಆನಂದ್‌ ಕೆ., ಪೊಲೀಸ್‌ ಅಧೀಕ್ಷಕ ಸಿ.ಬಿ. ರಿಷ್ಯಂತ್‌, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ. ಪೃಥ್ವಿರಾಜ್‌ ರೈ, ಸಾರಿಗೆ ಉಪ ಆಯುಕ್ತ ರವಿಶಂಕರ್‌ ಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಚ್‌.ಆರ್‌. ತಿಮ್ಮಯ್ಯ, ಕರ್ನಾಟಕ ಹೈಕೋರ್ಟ್‌ ವಕೀಲ ಶಂಕರ್‌ ರೆಡ್ಡಿ ಭಾಗವಹಿಸಿದ್ದರು.

ಉದ್ಘಾಟನೆಯ ಬಳಿಕ ಅಪಘಾತ ಪ್ರಕರಣಗಳಲ್ಲಿ ಸಾವು ಹಾಗೂ ಗಾಯಗೊಳ್ಳುವುದನ್ನು ಹೇಗೆ ನಿಯಂತ್ರಿಸುವುದು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅರುಣ್‌ ಮೋಹನ್‌ ಉಪನ್ಯಾಸ ನೀಡಿದರು.

ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅವರು ಸ್ವಾಗತಿಸಿದರು. ನ್ಯಾಯವಾದಿ ಸುಮಿತ್‌ ಭಟ್‌ ನಿರ್ವಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next