Advertisement

ಮುಳುಗಡೆ ಸಂತ್ರಸ್ತರ ಚರ್ಚೆಯಾಗಲಿ; ಸಂತ್ರಸ್ತರಲ್ಲೂ ಸರ್ಕಾರ ತಾರತಮ್ಯ

06:13 PM Dec 21, 2022 | Team Udayavani |

ಬಾಗಲಕೋಟೆ: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರಗೆ ಏರಿಸುವುದರಿಂದ ಮುಳುಗಡೆಯಾಗುವ ಹಳ್ಳಿಗಳ ಜನರಿಗೆ ರಾಷ್ಟ್ರೀಯ ಪುನರ್‌ ವಸತಿ ನೀತಿಯ ಪ್ರಕಾರ ಪರಿಹಾರ ಘೋಷಿಸಬೇಕು ಎಂದು ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಸರಕಾರ ಈವರೆಗೆ ಕಾರ್ಯಕಾರಿ ಆದೇಶಗಳ ಮೂಲಕವೇ ಪರಿಹಾರ ನೀಡುತ್ತಲೇ ಬಂದಿದೆ. ಸದ್ಯ ಯೋಜನೆಯಡಿ ನಡೆಯುತ್ತಿರುವ ನೀರಾವರಿ ಯೋಜನೆ ಮತ್ತು ಪುನರ್‌ವಸತಿ ಮತ್ತು ಪುನರ್‌ ನಿರ್ಮಾಣ ಕಾಮಗಾರಿಗಳು ತೃಪ್ತಿದಾಯಕವಾಗಿ ನಡೆಯುತ್ತಿಲ್ಲ. ಬೆಳಗಾವಿಯಲ್ಲಿ ನಡೆಯಲಿರುವ ಅಧಿ ವೇಶನದಲ್ಲಿ ಬಾಗಲಕೋಟೆ ಸಂತ್ರಸ್ತರ ಬಗ್ಗೆ ಚರ್ಚೆಯಾಗಬೇಕು. ಜತೆಗೆ
ಬಾಗಲಕೋಟೆ ಸಂತ್ರಸ್ತರಿಗೆ ರಾಷ್ಟ್ರೀಯ ಪುನರ್‌ ವಸತಿ ನೀತಿಯ ಪ್ರಕಾರ ಪರಿಹಾರ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಗಳಲ್ಲಿ ಜಮೀನು ಕಳೆದುಕೊಳ್ಳುವ ಸಂತ್ರಸ್ತರಿಗೆ ಎತ್ತಿನ ಹೊಳೆ ಯೋಜನೆಯಲ್ಲಿ ಅನುಸರಿಸಿದಂತೆ ಜಮೀನು ಹಂಚಲು ಭೂ ಬ್ಯಾಂಕ್‌ ಸ್ಥಾಪನೆ ಮಾಡಬೇಕು.

2014ರಲ್ಲಿಯೇ ಘೋಷಿಸಿದ ಬಾಗಲಕೋಟೆ ಸರಕಾರಿ ವೈದ್ಯ ಕಾಲೇಜು ನಿರ್ಮಾಣದ ಕಾಮಗಾರಿಗಳಿಗೆ ಅಗತ್ಯ ಅನುದಾನ ಘೋಷಣೆ ಮಾಡಬೇಕು. ನೇಕಾರ ಸಮ್ಮಾನ ಯೋಜನೆಯನ್ನು ವಿದ್ಯುತ್‌ ಮಗ್ಗ ನೇಕಾರರ ಜೊತೆಗೆ ಅದರ ಪೂರಕ ವೃತ್ತಿ ಅವಲಂಬಿತರಿಗೂ ಅನ್ವಯಿಸುವಂತಾಗಬೇಕು ಎಂದು ಮನವಿ ಮಾಡಿದರು.

ಎಎಪಿ ಮುಖಂಡ ನಾಗರಾಜ ಹೊಂಗಲ್ಲ ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಬೇರೆ ಜಿಲ್ಲೆಗಳು ಅಭಿವೃದ್ಧಿಯಿಂದ ವಂಚಿತಗೊಂಡಿದ್ದು, ಸರ್ಕಾರ ಅಭಿವೃದ್ಧಿ ಎಂದರೆ ಬೆಂಗಳೂರು ಮಾತ್ರ ಎಂದು ತಿಳಿದುಕೊಂಡಿದೆ. ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇರದಿರುವುದರಿಂದ ಉತ್ತರ ಕರ್ನಾಟಕ ವಿಫಲದ ನೋವು ಅನುಭವಿಸುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಎಎಪಿ ಉಪಾಧ್ಯಕ್ಷ ಕೆ.ಎಂ. ಕಲಾದಗಿ, ಎಎಪಿ ಮುಖಂಡರಾದ ಮಾಧವಿ ರಾಠೊಡ, ವಿಠಲ ಲಮಾಣಿ, ಮಂಜು ಪವಾರ, ಸಲೀಂ ಜಮಾದಾರ ಉಪಸ್ಥಿತರಿದ್ದರು.

Advertisement

ಸಂತ್ರಸ್ತರಲ್ಲೂ ಸರ್ಕಾರ ತಾರತಮ್ಯ
ನಮ್ಮ ಸರ್ಕಾರ ಉತ್ತರ ಕನಾಟಕಕ್ಕೆ ತಾರತಮ್ಯ ಎಸಗುತ್ತಿದ್ದು, ದಕ್ಷಿಣ ಕರ್ನಾಟಕದ ಎತ್ತಿಹೊಳೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಭೂಮಿಯನ್ನೇ ನೀಡಲಾಗುತ್ತಿದೆ. ಆದರೆ, ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಹಣವಷ್ಟೇ ನೀಡಲಾಗಿದೆ. ಸಂತ್ರಸ್ತರಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದ್ದು, ಈ ಸಮಸ್ಯೆಗೆ ಪೂರ್ಣ ವಿರಾಮ ಇಡಬೇಕಾದರೆ, ಎಲ್ಲ ಸಂತ್ರಸ್ತರಿಗೆ ರಾಷ್ಟ್ರೀಯ ಪುನರ್‌ ವಸತಿ ನೀತಿಯ ಪ್ರಕಾರವೇ ಪರಿಹಾರ ನೀಡುವ ಕೆಲಸವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next