ಮುದ್ದೇಬಿಹಾಳ: ತಮ್ಮ ಯೌವನ ದೇಶಸೇವೆಗೆ ಮುಡಿಪಾಗಿಟ್ಟು, ಕುಟುಂಬ, ಮನೆ, ಮಕ್ಕಳಿಂದ ದೂರಾಗಿ ದೇಶ ಸೇವೆ ಮಾಡುವ ಸೈನಿಕರು ನಮ್ಮ ಯುವ ಜನತೆಗೆ ಮಾದರಿ ಮತ್ತು ಆದರ್ಶವಾಗಬೇಕು. ದೇಶಸೇವೆಗೋಸ್ಕರ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗಬೇಕು ಎಂದು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್.ಐ. ಹಿರೇಮಠ ಹೇಳಿದರು.
ಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ಇಬ್ಬರು ಸೈನಿಕರನ್ನು ಪಟ್ಟಣದ ಬಸವೇಶ್ವರ ವೃತ್ತದಿಂದ ಕಾರ್ಗಿಲ್ ಹುತಾತ್ಮ ಯೋಧರ ಸ್ಮಾರಕದವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ ಅದ್ಧೂರಿ ಸ್ವಾಗತ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ಸೈನಿಕರಿಂದ ಗೌರವ ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸುಬೇದಾರ ಮೇಜರ್ ಚಂದ್ರಶೇಖರ ಪೂಜಾರಿ, ನೂರಾರು ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಭಾರತ ಮಾತೆಯ ಸೇವೆಯನ್ನು ಮಾಡಿದ್ದೇನೆ. 1988ರಲ್ಲಿ ಸೇನೆಗೆ ಸೇರಿ ಅಸ್ಸಾಂ, ಮಣಿಪುರ, ಪಂಜಾಬ, ಜಮ್ಮು ಕಾಶ್ಮೀರ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲೂ ಶಾಂತಿದೂತ ಸೈನಿಕನಾಗಿ ಸಾರ್ಥಕ ಸೇವೆ ಸಲ್ಲಿಸಿದ್ದು ದೇಶಕ್ಕಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.
ನಿವೃತ್ತ ಯೋಧ ನಾಗಪ್ಪ ಸಜ್ಜನ ಮಾತನಾಡಿ, ದೇಶ ಸೇವೆ ಸಲ್ಲಿಸುವಾಗ ಅನೇಕ ಸ್ಫೋಟಗಳಲ್ಲಿ ಬದುಕಿ ಉಳಿದು ದೇಶ ಸೇವೆ ಮಾಡಿ ಇಂದು ನಿವೃತ್ತಿ ಹೊಂದಿದ್ದೇನೆ. ನಮ್ಮ ತಾಲೂಕಿನ ಯುವಕರು ದೇಶ ಸೇವೆ ಮಾಡಲು ಸೈನ್ಯಕ್ಕೆ ಭರ್ತಿ ಆಗಬೇಕು ಎಂದರು.
ಈ ಸಂದರ್ಭ ಸಿಪಾಯಿ ಹುದ್ದೆಯಿಂದ ಸುಬೇದಾರ ಮೇಜರ್ ಹುದ್ದೆಯವರೆಗೂ ಸೇವೆ ಸಲ್ಲಿಸಿದ ಮುದ್ದೇಬಿಹಾಳ ತಾಲೂಕಿನ ಅಗಸಬಾಳ ಗ್ರಾಮದ ಚಂದ್ರಶೇಖರ ಪೂಜಾರಿ ಅವರ 34 ವರ್ಷಗಳ ಮತ್ತು ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ 21 ವರ್ಷ ಸೇವೆ ಸಲ್ಲಿಸಿದ ಸರೂರ ಗ್ರಾಮದ ನಾಗಪ್ಪ ಸಿದ್ದಪ್ಪ ಸಜ್ಜನ ಅವರ ಸೇವೆಯನ್ನು ಶ್ಲಾಘಿಸಿ ಮಾಜಿ ಸೈನಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ದೇಶಪ್ರೇಮಿ ಸಂಘಟನೆಗಳ ಸದಸ್ಯರು ಸೇರಿ ಹಲವರು ಇಬ್ಬನ್ನೂ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಚಂದ್ರಹಾಸ ಬಿದರಕುಂದಿ, ವಠಾರೆ, ಎಸ್.ಡಿ. ಹೂಗಾರ, ಎಸ್.ವಿ. ಹೊಳಿ, ವಾಮನರಾವ್ ಲಮಾಣಿ, ಎ.ಎಚ್. ಕಕ್ಕೇರಿ, ಡಿ.ಎಚ್. ಹೂಗಾರ, ಎಂ.ಎ. ಮಾಡಗಿ ಸೇರಿ ಹಲವರು ಪಾಲ್ಗೊಂಡಿದ್ದರು. ಇಬ್ಬರೂ ನಿವೃತ್ತ ಸೈನಿಕರ ತೆರೆದ ಜೀಪಿನ ಮೆರವಣಿಗೆಯಲ್ಲಿ ಮಾಜಿ ಸೈನಿಕರೊಂದಿಗೆ ಸಾರ್ವಜನಿಕರೂ ಪಾಲ್ಗೊಂಡು ಸಂಭ್ರಮಿಸಿದರು.