ಹುಬ್ಬಳ್ಳಿ: ಕೋವಿಡ್-19 ಪರಿಣಾಮ ವೃತ್ತಿ ರಂಗಭೂಮಿಗೆ ಆವರಿಸಿದ್ದ ಕರಾಳರಾತ್ರಿ ಸರಿದಿದ್ದು, ರಂಗಭೂಮಿ ಉಳಿಸಿ ಬೆಳೆಸುವ ಕಾರ್ಯ ಕಲಾರಾಧಕರಿಂದ ಆಗಬೇಕು ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ| ಆರ್. ಭೀಮಸೇನ ಹೇಳಿದರು.
ಹಳೇ ಬಸ್ ನಿಲ್ದಾಣ ಪಕ್ಕದಲ್ಲಿರುವ ಕೆಬಿಆರ್ ನಾಟಕ ಕಂಪನಿ ಕೋವಿಡ್-19 ನಂತರ ಪುನರಾರಂಭವಾದ “ಗೋವಾದಲ್ಲಿ ಉಳ್ಳಾಗಡ್ಡಿ ಸಾವಕಾರ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡ ಅವರು ಮಾತನಾಡಿದರು.
ಕೆಬಿಆರ್ ನಾಟಕ ಕಂಪನಿ ಶತಮಾನದ ಹೊಸ್ತಿಲಲ್ಲಿದ್ದು, ವೃತ್ತ ರಂಗಭೂಮಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯವ ಕೆಲಸ ಆಗುತ್ತಿದೆ. ಇಂತಹ ಕಂಪನಿಗಳು ಮುಂದುವರಿಯುತ್ತಿರಬೇಕು. ಕಲಾರಸಿಕರಿಗೆ ಮನೋರಂಜನೆ ನೀಡುತ್ತಿರಬೇಕು. ಕಲೆ ಹಾಗೂ ಕಲಾವಿದ ಕಲುಷಿತಗೊಳ್ಳಬಾರದು. ಈ ನಿಟ್ಟಿನಲ್ಲಿ ವೃತ್ತಿ ರಂಗಭೂಮಿ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದರು.
ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಉತ್ತರ ಕರ್ನಾಟಕದ ಜನರಿಂದ ವೃತ್ತಿ ರಂಗಭೂಮಿ ಉಳಿಸಿ ಬೆಳೆಸುವ ಕಾರ್ಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜನರು ನಾಟಕಗಳನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು. ಕಂಪನಿ ಪ್ರಧಾನ ವ್ಯವಸ್ಥಾಪಕ ಚಿಂದೋಡಿ ಶಂಭುಲಿಂಗಪ್ಪ ಮಾತನಾಡಿ, ನಾಟಕ ಕಂಪನಿಗಳಿಗೆ ಅಗ್ನಿಶಾಮಕ ದಳದಿಂದ ಪಡೆಯುವ ಪರವಾನಗಿಶುಲ್ಕ ಹೊರೆಯಾಗಿದೆ.
ಒಮ್ಮೆ ಪರವಾನಗಿ ಅಥವಾ ಒಂದು ವರ್ಷಕ್ಕೆ ಪರವಾನಗಿ ಪಡೆಯಲು 50 ಸಾವಿರ ರೂ. ಪಾವತಿಸುವಂತಾಗಿದೆ. ಗೃಹ ಸಚಿವ ಎಸ್.ಆರ್. ಬೊಮ್ಮಾಯಿ ಅವರು ಈ ಕುರಿತು ಒಂದಿಷ್ಟು ಯೋಚನೆ ಮಾಡಬೇಕು. ನಾಟಕ ಅಕಾಡೆಮಿಯಿಂದ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಆಗಬೇಕು ಎಂದು ಮನವಿ ಮಾಡಿದರು.
ಉದ್ಯಮಿ ಸಂಭಾಜಿ ಕಲಾಲ, ಕಂಪನಿ ಮಾಲೀಕ ಚಿಂದೋಡಿ ಶ್ರೀಕಂಠೇಶ, ಕಲಾವಿದರಾದ ಚಿಂದೋಡಿ ವಿಜಯಕುಮಾರ ಇನ್ನಿತರರಿದ್ದರು.
-ಕೋವಿಡ್-19 ಸಂದರ್ಭದಲ್ಲಿ ನಮಗೆ ಹಣ ಸಿಗಲಿಲ್ಲ ಎನ್ನುವುದಕ್ಕಿಂತ ನಮ್ಮ ಅಭಿವ್ಯಕ್ತಿಗೆ ಅವಕಾಶ ಸಿಗಲಿಲ್ಲ ಎನ್ನುವ ಕೊರಗು ಉಂಟಾಗಿತ್ತು. ಕಲಾವಿದರ ಪಾಲಿಗೆ ರಂಗದ ಮೇಲೆ ಬರುವುದೇ ದೊಡ್ಡ ಶ್ರೀಮಂತಿಕೆ. ನಿತ್ಯ ಪ್ರದರ್ಶನವಿದ್ದರೆ ನಮ್ಮ ಪಾಲಿಗೆ ದೀಪಾವಳಿ ಇದ್ದಂತೆ.
ಯಶವಂತ ಸರದೇಶಪಾಂಡೆ, ಹಿರಿಯ ರಂಗಭೂಮಿ ಕಲಾವಿದ