ಬಸವನಬಾಗೇವಾಡಿ: ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ನದಿ ಜೋಡಣೆ ಅವೈಜ್ಞಾನಿಕವಾಗಿದ್ದು ರಾಜ್ಯದ ಅನ್ನದಾತರಿಗೆ ಪೂರಕವಾಗದೇ ಮಾರಕವಾಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈ ಬಿಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ನದಿ ಜೋಡಣೆಯಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಪ್ರತಿಭಟನೆ ನಡೆಸಿ ನಂತರ ಸಿಎಂ, ಪಿಎಂ ಅವರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯದ ನೀರಾವರಿ ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ ಸಾಧಕ ಬಾಧಕ ಅರಿತುಕೊಂಡು ರಾಜ್ಯಸರ್ಕಾರ ಮುಂದಿನ ಹೆಜ್ಜೆ ಇಡಬೇಕು. ಏಕೆಂದರೆ ಈಗಾಗಲೇ ರಾಜ್ಯದ ನೀರಾವರಿ ತಜ್ಞರು ನದಿ ಜೋಡಣೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಅಭಿಪ್ರಾಯ ಮಂಡಿಸುತ್ತಿದ್ದಾರೆ. ಆದ್ದರಿಂದ ಈ ವಿಷಯ ಗಂಭಿರವಾಗಿ ರಾಜ್ಯ ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸಿಂದಗಿ ತಾಲೂಕು ಕಾರ್ಯದರ್ಶಿ ಗೊಲ್ಲಾಳಪ್ಪ ಚೌಧರಿ ಮಾತನಾಡಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್‌ನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕೃಷ್ಣೆಯನ್ನು ಪೆನ್ನಾರ ನದಿಗೆ ಜೋಡಣೆ ಮಾಡಲು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಆದರೆ ನದಿ ಜೋಡಣೆ ನೆಪದಲ್ಲಿ ರಾಜ್ಯಕ್ಕೆ ಅನ್ಯಾಯವಾಗ ಬಾರದು. ರಾಜ್ಯದ ಪಾಲಿಗೆ ಹಂಚಿಕೆಯಾಗಿರುವ ಕೃಷ್ಣಾ ನದಿ ನೀರಿನಲ್ಲಿ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ನ್ಯಾಯಮೂರ್ತಿ ಆರ್.ಎಸ್. ಬಚಾವ ನೇತೃತ್ವದ ಹಾಗೂ ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ ಮಿಶ್ರಾ ನೇತೃತ್ವದ ಎರಡು ನ್ಯಾಯಾಧಿಕರಣಗಳು ನೀಡಿದ ತೀರ್ಪಿನ ಅನ್ವಯ ಹಂಚಿಕೆ ಮಾಡಿದ ನಮ್ಮ ಪಾಲಿನ ನೀರಿನಲ್ಲಿ ನಮ್ಮ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯಾಗದಂತೆ ಹಾಗೂ ನೀರಿನ ಬಳಕೆಯಲ್ಲಿ ಕಡಿತಗೊಳಿಸದಂತೆ ನದಿ ಜೋಡಣೆಗೆ ಮುಂದಾದರೆ ಮಾತ್ರ ರಾಜ್ಯ ಸರ್ಕಾರ ಕೇಂದ್ರಕ್ಕೆ ಒಪ್ಪಿಗೆ ನೀಡಬೇಕು ಎಂದು ಹೇಳಿದರು.
ಒಂದು ವೇಲೆ ಪೆನ್ನಾರ ನದಿಗೆ ಕೃಷ್ಣಾ ನದಿಯನ್ನು ಜೋಡಿಸುವುದರಿಂದ ನಮಗೆ ಅನ್ಯಾಯವಾದರೆ ನಾವು ರಾಜ್ಯದ ರೈತರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವಳಿ ಜಿಲ್ಲೆಯ ರೈತರು ಲಕ್ಷಾಂತರ ಜಮೀನು ಕಳೆದುಕೊಂಡರು. ಇನ್ನೂ ನಮಗೆ ನೀರಿನ ವಿಷಯದಲ್ಲಿ ಸಂಪೂರ್ಣ ಬಳಕೆ ಮಾಡಲು ಆಗುತ್ತಿಲ್ಲ. ಇಂತಹದರಲ್ಲಿ ಪೆನ್ನಾರ ನದಿಗೆ ಕೃಷ್ಣೆ ಜೋಡಣೆ ಮಾಡುವುದರಿಂದ ಮುಂದೆ ಆಂಧ್ರಪ್ರದೇಶ ತಮಿಳುನಾಡು ರಾಜ್ಯಗಳು ನೀರಿಗಾಗಿ ಪದೆ ಪದೆ ಖ್ಯಾತೆ ತೆಗೆಯಬಹುದಾದ ಸಾಧ್ಯತೆಗಳು ಹೆಚ್ಚಿವೆ ಎಂದರು.
ಆದ್ದರಿಂದ ಈಗಿನಿಂದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕೃಷ್ಣಾ ನದಿಯನ್ನು ಪೆನ್ನಾರ ನದಿಗೆ ಜೋಡಿಸುವುದು ಬೇಡವೇ ಬೇಡ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು. ಇಲ್ಲದಿದ್ದರೆ ಅಖಂಡ ಕರ್ನಾಟಕ ರೈತ ಸಂಘ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹೊನಕೆರಪ್ಪ ತೆಲಗಿ, ಚನಬಸಪ್ಪ ಸಿಂಧೂರ, ರಾಜೇಸಾಬ ವಾಲೀಕಾರ, ಶೇಖಪ್ಪ ಸಜ್ಜನ, ಗಿರಮಲ್ಲಪ್ಪ ದೊಡಮನಿ, ರ್ಯಾವಪ್ಪ ಪೊಲೇಶಿ, ವಿಠ್ಠಲ ಬಿರಾದಾರ, ಚಂದ್ರಾಮ ತೆಗ್ಗಿ, ಶೇಖಪ್ಪ ಕರಾಬಿ, ಕುಲಪ್ಪ ಮಾಡಗಿ, ನಿಂಗಪ್ಪ ನಂದಿಹಾಳ, ಗುರಣ್ಣ ಮಾಡಗಿ, ರಮೇಶ ರಾಠೊಡ ಸೇರಿದಂತೆ ಅನೇಕರು ಇದ್ದರು.