ಸುವರ್ಣ ವಿಧಾನಸೌಧ: ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರಿತ್ಯ, ಬೆಲೆ ಕುಸಿತ ಮತ್ತಿತರ ಕಾರಣದಿಂದ ರೈತಾಪಿ ವರ್ಗ ತೀವ್ರ ಸಂಕಷ್ಟ ಎದುರಿಸುತ್ತಿದೆ. ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು. ಢೋಂಗಿತನ, ರೈತ ವಿರೋಧಿ ನೀತಿ ಬಿಟ್ಟು ರೈತ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ರಾಜ್ಯಾದ್ಯಂತ ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರಿತ್ಯದಿಂದ, ಕಳಪೆ ಬೀಜ, ಗೊಬ್ಬರ, ನಿಷೇಧಿತ ಕೀಟ ನಾಶಕಗಳ ಮಾರಾಟ, ಮಾರುಕಟ್ಟೆಯಲ್ಲಿ ದರಗಳ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ನಿಯಮ 69ರಡಿ ವಿಷಯ ಪ್ರಸ್ತಾಪಿಸಿ ಮಾತನಾಡಿದರು.
ರೈತ ತಾನು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ಬದುಕು ದುಸ್ತರವಾಗಿದೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಆದರೆ, ಅದು ಆಗಿಲ್ಲ. ಬದಲಿಗೆ ರೈತರ ಆದಾಯ ವೇಗವಾಗಿ ಕುಸಿಯುತ್ತಿದೆ ಎಂದರು.
ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತದೆ. 25 ಲಕ್ಷ ರೈತರು ಇದರ ಮೇಲೆ ಅಲಂಬಿತರಾಗಿದ್ದಾರೆ. ವರ್ಷಕ್ಕೆ 6.5 ಕೋಟಿ ಟನ್ ಕಬ್ಬು ಉತ್ಪಾದನೆ ಆಗುತ್ತದೆ. ಟನ್‌ಗೆ 2,700ರಿಂದ 3,050 ರೂ. ಈಗ ನೀಡಲಾಗುತ್ತಿದೆ. ಇದರಿಂದ 1 ಎಕರೆಗೆ ರೈತ 12 ಸಾವಿರ ರೂ. ಕಳೆದುಕೊಳ್ಳುತ್ತಿದ್ದಾನೆ. ಪ್ರತಿ ಟನ್‌ಗೆ 3,500 ರೂ. ಕೊಡಬೇಕು, ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ 5.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಡಕೆ ಬೆಳೆಯಲಾಗುತ್ತದೆ. 10-11 ಲಕ್ಷ ಟನ್ ಉತ್ಪಾದನೆ ಆಗುತ್ತದೆ. 10 ಲಕ್ಷ ರೈತರು ಅವಲಂಬಿತರಾಗಿದ್ದಾರೆ. ಭೂತಾನ್, ಬರ್ಮಾ, ವಿಯೇಟ್ನಾಂ, ಶ್ರೀಲಂಕಾದಿಂದ ಅಡಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಬರ್ಮಾದಿಂದ ಕದ್ದು ಅಡಕೆ ಬರುತ್ತಿದೆ. ಇದನ್ನು ತಡೆಯಬೇಕು. ಅಡಕೆ ಬೆಳೆಗಾರರಿಗೆ ನನ್ನ ಅವಧಿಯಲ್ಲಿ 80 ಕೋಟಿ ರೂ. ಪರಿಹಾರ ನೀಡಿದ್ದೆ. ಇವತ್ತು ಕ್ವಿಂಟಾಲ್‌ಗೆ 15 ಸಾವಿರ ಕೋಟಿ ರೂ. ಆಗಿದೆ. ಒಟ್ಟು 15 ಸಾವಿರ ಕೋಟಿ ರೂ. ನಷ್ಟ ಆಗುತ್ತದೆ. ಆದ್ದರಿಂದ ತಕ್ಷಣ ಪರಿಹಾರ ನೀಡಬೇಕು. ರೋಗಕ್ಕೆ ಔಷಧಿ ಕಂಡು ಹಿಡಿಯಬೇಕು. ವಿದೇಶದಿಂದ ಆಡಕೆ ಬರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಚರ್ಮಗಂಟು ರೋಗದಿಂದ ನಿತ್ಯ 6.66 ಕೋಟಿ ರೂ. ನಷ್ಟ
ಸುವರ್ಣ ವಿಧಾನಸೌಧ: ಚರ್ಮ ಗಂಟು ರೋಗದಿಂದ ಪ್ರತಿ ದಿನ 2 ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆ ಆಗುತ್ತಿದೆ. ಇದರಿಂದ ದಿನಕ್ಕೆ ಅಂದಾಜು 6.66 ಕೋಟಿ ರೂ. ನಷ್ಟ ಆಗುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 25 ಲಕ್ಷ ಮಂದಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಜೂನ್-ಜುಲೈ ತಿಂಗಳಲ್ಲಿ ದಿನಕ್ಕೆ 94 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಈಗ 76 ಲಕ್ಷ ಲೀಟರ್ ಆಗಿದೆ. ಅದರಂತೆ 18 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಕಡಿಮೆ ಆಗಿದೆ. ಚರ್ಮಗಂಟು ರೋಗದಿಂದ 25 ಸಾವಿರ ರಾಸುಗಳ ಸಾವನ್ನಪ್ಪಿವೆ. ಚರ್ಮಗಂಟು ರೋಗದ ಪರಿಣಾಮ ಪ್ರತಿ ದಿನ 2 ಲಕ್ಷ ಲೀಟರ್ ಕಡಿಮೆ ಆಗುತ್ತಿದೆ. ಇದರಿಂದ ರೈತರಿಗೆ 6.66 ಕೋಟಿ ನಷ್ಟ ಆಗುತ್ತಿದೆ ಎಂದು ತಿಳಿಸಿದರು.